ODI Ranking: ಶುಭ್‌ಮನ್ ಗಿಲ್ ಬಾಬರ್ ಆಜಂ ಮೀರಿಸಿ ಐಸಿಸಿ ರ್ಯಾಂಕಿಂಗ್​ನಲ್ಲಿ ನಂಬರ್​ 1 ಸ್ಥಾನ ಪಡೆದ ಗಿಲ್​

ODI Ranking : ಎಂಟು ತಂಡಗಳ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದ ಕರಾಚಿಯಲ್ಲಿ ನಡೆಯಲಿರುವ ಪಂದ್ಯಕ್ಕೆ ಮುನ್ನವೇ ಐಸಿಸಿ ಹೊಸ ರ್ಯಾಂಕಿಂಗ್ ಪ್ರಕಟಿಸಿದೆ.;

Update: 2025-02-19 12:18 GMT

ಭಾರತ ಉಪನಾಯಕ ಶುಭ್‌ಮನ್ ಗಿಲ್ (Shubhman Gill​) ಬುಧವಾರ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಜಂನನ್ನು ಮೀರಿಸಿ ಐಸಿಸಿ ಒಡಿಐ ರ್ಯಾಂಕಿಂಗ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾರೆ. ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು ಈ ಸಾಧನೆ ಮಾಡಿದ್ದಾರೆ.

ಎಂಟು ತಂಡಗಳ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದ ಕರಾಚಿಯಲ್ಲಿ ನಡೆಯಲಿರುವ ಪಂದ್ಯಕ್ಕೆ ಮುನ್ನವೇ ಐಸಿಸಿ ಹೊಸ ರ್ಯಾಂಕಿಂಗ್ ಪ್ರಕಟಿಸಿದೆ.

"ಭಾರತದ ಸ್ಟೈಲಿಸ್ಟ್​​ ಬಲಗೈ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಜಂನನ್ನು ಮೀರಿಸಿ ವಿಶ್ವದ ನಂ.1 ಒಡಿಐ ಬ್ಯಾಟ್ಸ್‌ಮನ್ ಆಗಿದ್ದಾರೆ," ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಇಂಗ್ಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಒಡಿಐ ಸರಣಿಯಲ್ಲಿ ಎರಡು ಅರ್ಧಶತಕ ಹಾಗೂ ಒಂದು ಶತಕ ಬಾರಿಸಿದ ಗಿಲ್, ಒಂದು ಸ್ಥಾನ ಏರಿಕೆ ಮಾಡಿಕೊಂಡು ನಂ.1 ಸ್ಥಾನಕ್ಕೇರಿದ್ದಾರೆ. ಈಗ 796 ರೇಟಿಂಗ್ ಅಂಕಗಳನ್ನು ಅವರು ಹೊಂದಿದ್ದಾರೆ. ಈ ಹಿಂದೆ ನಂ.1 ಸ್ಥಾನದಲ್ಲಿದ್ದ ಬಾಬರ್ 773 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.

ಭಾರತದ ನಾಯಕ ರೋಹಿತ್ ಶರ್ಮಾ 761 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಅವರ ನಂತರದ ಎರಡು ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾದ ಹೈನ್ರಿಚ್ ಕ್ಲಾಸೆನ್ ಮತ್ತು ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಇದ್ದಾರೆ.

ಇದರೊಂದಿಗೆ ಗಿಲ್‌ಗೆ ಎರಡನೇ ಬಾರಿಗೆ ಒಡಿಐ ರ್ಯಾಂಕಿಂಗ್ಸ್‌ನಲ್ಲಿ ನಂ.1 ಸ್ಥಾನ ಪಡೆದಂತಾಗಿದೆ. 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸಮಯದಲ್ಲೂ ಅವರು ಬಾಬರ್ ಆಜಂನನ್ನು ಮೀರಿಸಿ ನಂ.1 ಸ್ಥಾನಕ್ಕೆ ಏರಿದ್ದರು.

"ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿ ಇರುವ ಗಿಲ್, ಇಂಗ್ಲೆಂಡ್ ವಿರುದ್ಧದ ಅಹಮದಾಬಾದ್‌ನ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೆ ಏರಿದ್ದರು," ಎಂದು ಐಸಿಸಿ ತಿಳಿಸಿದೆ.

ಬೌಲರ್​ಗಳ ಯಲ್ಲಿ ಮಹೀಶ್ ತೀಕ್ಷಣಾ ನಂ.1  

ಶ್ರೀಲಂಕಾದ ಮಹೀಶ್ ತೀಕ್ಷಣಾ, ಅಫ್ಗಾನಿಸ್ತಾನದ ನಾಯಕ ರಶೀದ್ ಖಾನ್ ಅವರನ್ನು ಹಿಂದಿಕ್ಕಿ ಒಡಿಐ ಬೌಲಿಂಗ್ ರ್ಯಾಂಕಿಂಗ್​​ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.

"ಶ್ರೀಲಂಕಾ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡದೆ ಇರಬಹುದು. ಆದರೆ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ ಅವರ 4 ವಿಕೆಟ್ ಸಾಧನೆ ಮಾಡಿ ಮೊದಲ ಸ್ಥಾನ ಪಡೆದಿದ್ದಾರೆ. ಅವರು 680 ರೇಟಿಂಗ್ ಅಂಕ ಹೊಂದಿದ್ದರೆ, ರಶೀದ್ ಖಾನ್ 669 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಮಿಬಿಯಾದ ಬರ್ನಾರ್ಡ್ ಶೋಲ್ಟ್ಸ್ ಮೂರನೇ, ಭಾರತದ ಕುಲ್ದೀಪ್ ಯಾದವ್ ನಾಲ್ಕನೇ ಹಾಗೂ ಪಾಕಿಸ್ತಾನದ ಶಾಹೀನ್ ಶಾಹ್ ಅಫ್ರಿದಿ ಐದನೇ ಸ್ಥಾನದಲ್ಲಿದ್ದಾರೆ.

ಆಲ್-ರೌಂಡರ್‌ಗಳ ಪಟ್ಟಿಯಲ್ಲಿ ಮೊಹಮ್ಮದ್ ನಬಿ ನಂ.1

ಆಫ್ಘಾನಿಸ್ತಾನದ ಮೊಹಮ್ಮದ್ ನಬಿ ODI ಆಲ್-ರೌಂಡರ್ ರ್ಯಾಂಕಿಂಗ್​ನಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅವರ ಹಿಂದೆ ಸಿಕಂದರ್ ರಾಜಾ, ಅಜ್ಮತುಲ್ಲಾ ಒಮರ್​ಜೈ, ಮೆಹಿದಿ ಹಸನ್ ಮಿರಾಜ್ ಮತ್ತು ರಶೀದ್ ಖಾನ್ ಕ್ರಮವಾಗಿ ಅಗ್ರ ಐದು ಸ್ಥಾನಗಳನ್ನು ಆಲಂಕರಿಸಿದ್ದಾರೆ.    

Tags:    

Similar News