ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ ನೇಮಕಗೊಂಡರೆ, ತಾವು ಬಿಸಿಸಿಐ ಕಾರ್ಯದರ್ಶಿ ಆಗಬಹುದು ಎಂಬ ವದಂತಿಯನ್ನು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ರೋಹನ್ ಜೇಟ್ಲಿ ತಳ್ಳಿಹಾಕಿದ್ದಾರೆ.
16 ಐಸಿಸಿ ಮಂಡಳಿ ಸದಸ್ಯರಲ್ಲಿ 15 ಸದಸ್ಯರ ಬೆಂಬಲವಿರುವ ಜಯ್ ಷಾ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಲು ಸಿದ್ಧವಾಗಿ ದ್ದಾರೆ. ಇದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಹುದ್ದೆ ಖಾಲಿಯಾಗಲಿದೆ. ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪುತ್ರ ರೋಹನ್ ಅವರು ಜಯ್ ಶಾ ಅವರ ಸ್ಥಾನಕ್ಕೆ ನೇಮಕಗೊಳ್ಳಬಹುದು ಎಂದು ವರದಿಯಾಗಿತ್ತು.
ಎರಡನೇ ಬಾರಿ ಬಿಸಿಸಿಐ ಕಾರ್ಯದರ್ಶಿಯಾಗಿರುವ ಶಾ ಅವರ ಅಧಿಕಾರಾವಧಿ ಇನ್ನೂ ಒಂದು ವರ್ಷ ಉಳಿದಿದೆ. ಹೊಸ ಐಸಿಸಿ ಅಧ್ಯಕ್ಷರು ಡಿಸೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ.
ಅಕ್ಟೋಬರ್ 2025 ರಲ್ಲಿ ಅವಧಿ ಮುಗಿದ ನಂತರ ಶಾ ಬಿಸಿಸಿಐಗೆ ಮರಳುವ ಮೊದಲು ಕಡ್ಡಾಯ ಮೂರು ವರ್ಷಗಳ ವಿರಾಮ ತೆಗೆದುಕೊಳ್ಳಬೇಕಾಗುತ್ತದೆ. ಬಿಸಿಸಿಐ ಸ್ಥಾನವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಅನಿಶ್ಚಿತತೆ ಇರುತ್ತದೆ. ರೋಹನ್ ಈ ಸ್ಥಾನ ತುಂಬಬಹುದು ಎಂದು ವರದಿಯಾಗಿತ್ತು.
ಆದರೆ, ಬಿಸಿಸಿಐನಲ್ಲಿ ಅಧಿಕಾರ ವಹಿಸಿಕೊಳ್ಳುವ ಯಾವುದೇ ಆಲೋಚನೆ ಇಲ್ಲ. ಡಿಡಿಸಿಎಯ ಜನಪ್ರಿಯತೆ ಮತ್ತು ಕಾರ್ಯನಿರ್ವಹಣೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತೇನೆ ಎಂದು ರೋಹನ್ ಹೇಳಿದ್ದಾರೆ.
ರೋಹನ್ ಅವರ ಮುಂದಾಳತ್ವದಲ್ಲಿ ಪ್ರಸ್ತುತ ನಡೆಯುತ್ತಿರುವ ದೆಹಲಿ ಪ್ರೀಮಿಯರ್ ಲೀಗ್ ಸೇರಿದಂತೆ ಹಲವು ಬೆಳವಣಿಗೆಗಳನ್ನು ಡಿಡಿಸಿಎ ಕಂಡಿದೆ.