Sunil Gavaskar: ತಮ್ಮ ಹೆಸರಿನ ರಸ್ತೆ ಉದ್ಘಾಟಿಸಲು ಕಾಸರಗೋಡಿಗೆ ಬಂದ ದಿಗ್ಗಜ ಕ್ರಿಕೆಟರ್ ಸುನಿಲ್ ಗವಾಸ್ಕರ್
Sunil Gavaskar: ಕಾಸರಗೋಡು ಮಹಾನಗರಪಾಲಿಕೆ ಅಲ್ಲಿನ ರಸ್ತೆಯೊಂದಕ್ಕೆ 1983ರ ವಿಶ್ವಕಪ್ ವಿಜೇತ ಸುನಿಲ್ ಗವಾಸ್ಕರ್ ಅವರ ಹೆಸರಿಟ್ಟು ಗೌರವಿಸಿದೆ.;
ಕೇರಳದ ಕಾಸರಗೋಡಿನ ರಸ್ತೆಯೊಂದಕ್ಕೆ ಶುಕ್ರವಾರ (ಫೆಬ್ರವರಿ 21) ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ (Sunil Gavaskar) ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಅಂದ ಹಾಗೆ ಈ ಸಮಾರಂಭಕ್ಕೆ ಸ್ವತಃ ಗವಾಸ್ಕರ್ ಆಗಮಿಸಿದ್ದರು. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಾವಳಿಯ ಕಾಮೆಂಟರಿ ಕರ್ತವ್ಯಕ್ಕಾಗಿ ದುಬೈಗೆ ಹೋಗಿದ್ದ ಹೊರತಾಗಿಯೂ ಅವರು ಅಲ್ಲಿಂದ ವಿಮಾನವೇರಿ ಬಂದು ಸಮಾರಂಭದಲ್ಲಿ ಪಾಲ್ಗೊಂಡರು.
ಗವಾಸ್ಕರ್ ಅವರು ಗುರುವಾರ ದುಬೈನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಕಾಮೆಂಟೇಟರ್ ಆಗಿದ್ದರು. ಪಂದ್ಯ ಮುಗಿದ ಬಳಿಕ, ಅವರು ಕಾಸರಗೋಡಿಗೆ ಬಂದು ಅದ್ಧೂರಿ ಸ್ವಾಗತ ಸ್ವೀಕರಿಸಿದ್ದಾರೆ.
ಸುನಿಲ್ ಗವಾಸ್ಕರ್ ಮ್ಯೂನಿಸಿಪಲ್ ಸ್ಟೇಡಿಯಂ ರಸ್ತೆ
ಕಾಸರಗೋಡು ಮಹಾನಗರಪಾಲಿಕೆ ಕಾಸರಗೋಡು ಮ್ಯೂನಿಸಿಪಲ್ ಸ್ಟೇಡಿಯಂ ರಸ್ತೆಗೆ ಸುನಿಲ್ ಗವಾಸ್ಕರ್ ಮ್ಯೂನಿಸಿಪಲ್ ಸ್ಟೇಡಿಯಂ ರಸ್ತೆ ಎಂದು ನಾಮಕರಣ ಮಾಡಿದೆ. ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಅವರ ಗಣನೀಯ ಸಾಧನೆಗಾಗಿ ಈ ಗೌರವ ನೀಡಲಾಗಿದೆ.
ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕ್ಕುನ್ನು, ಗವಾಸ್ಕರ್ ಅವರ ಭೇಟಿಯನ್ನು ಐತಿಹಾಸಿಕ ಎಂದು ಕರೆದಿದ್ದಾರೆ.
ಸುನಿಲ್ ಗವಾಸ್ಕರ್ ಅವರ ಉಪಸ್ಥಿತಿ ಈ ಜಿಲ್ಲೆಯಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ದೊಡ್ಡ ಉತ್ತೇಜನ ನೀಡಲಿದೆ. ಕಾಸರಗೋಡು ಹಲವು ಪ್ರತಿಭಾವಂತ ಆಟಗಾರರನ್ನು ಪೋಷಿಸಿರುವ ಹಿನ್ನೆಲೆಯನ್ನು ಹೊಂದಿದ್ದು, ರಣಜಿ ಟ್ರೋಫಿ ಮೊದಲಾದ ಪ್ರಮುಖ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಈ ನೆಲ ನೀಡಿದೆ ಎಂದು ಕಾಸರಗೋಡು ಮಹಾನಗರಪಾಲಿಕೆ ಅಧ್ಯಕ್ಷೆ ಅಬ್ಬಾಸ್ ಬೇಗಂ ಹೇಳಿದರು.
ಗವಾಸ್ಕರ್ 1983ರ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯರಾಗಿದ್ದರು. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಪ್ರಥಮ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಕ್ರಿಕೆಟ್‌ಗಾಗಿ ಅವರು ನಿವೃತ್ತಿಯ ನಂತರವೂ ವಿವಿಧ ರೀತಿಯಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದು, ಪ್ರಸ್ತುತ ಟಿವಿ ಕಾಮೆಂಟೇಟರ್ ಆಗಿ ಕ್ರಿಕೆಟ್ ಲೋಕದಲ್ಲಿ ಸಕ್ರಿಯವಾಗಿದ್ದಾರೆ.