Perth Test-Cricket | ಬುಮ್ರಾ ಮಿಂಚು, ಭಾರತಕ್ಕೆ ಗೆಲುವಿನ ಸಿಂಚನ; ಆಸೀಸ್ ನೆಲದಲ್ಲಿ 295 ರನ್ ಭರ್ಜರಿ ಜಯ
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ನ ನಾಲ್ಕನೇ ದಿನಾಟದ ಮಧ್ಯಾಹ್ನದ ವೇಳೆಗೆ 534 ರನ್‌ಗಳ ಬೃಹತ್ ಗುರಿ ಬೆನ್ನಟ್ಟುತ್ತಿದ್ದ ಆತಿಥೇಯ ತಂಡವನ್ನು 58.4 ಓವರ್‌ಗಳಲ್ಲಿ 238 ರನ್‌ಗಳಿಗೆ ಆಲ್‌ಔಟ್ ಮಾಡುವ ಈ ಗೆಲುವು ತನ್ನದಾಗಿಸಿಕೊಂಡಿದೆ.
ಜಸ್ಪ್ರೀತ್ ಬುಮ್ರಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಅಮೋಘ ಸಾಧನೆ ಮಾಡಿದೆ. ಕ್ರಿಕೆಟ್ ಆಡುವ ಬಲಿಷ್ಠ ದೇಶದ ತವರಿನಲ್ಲಿ 295 ರನ್‌ಗಳ ಭರ್ಜರಿಗೆ ವಿಜಯಕ್ಕೆ ಪಾತ್ರವಾಗಿದ್ದು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶೇಷ ಹೆಗ್ಗಳಿಕೆ ಇದಾಗಿದೆ. ಕಾಂಗರೂಗಳ ನೆಲದಲ್ಲಿ ಭಾರತ ತಂಡಕ್ಕೆ ಟೆಸ್ಟ್ ಪಂದ್ಯದಲ್ಲಿ ದೊರಕಿದ ಬೃಹತ್ ಅಂತರದ ಗೆಲುವೆಂಬುದು ಇನ್ನೂ ವಿಶೇಷ .
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ನ ನಾಲ್ಕನೇ ದಿನಾಟದ ಮಧ್ಯಾಹ್ನದ ವೇಳೆಗೆ 534 ರನ್‌ಗಳ ಬೃಹತ್ ಗುರಿ ಬೆನ್ನಟ್ಟುತ್ತಿದ್ದ ಆತಿಥೇಯ ತಂಡವನ್ನು 58.4 ಓವರ್‌ಗಳಲ್ಲಿ 238 ರನ್‌ಗಳಿಗೆ ಭಾರತ ಆಲ್‌ಔಟ್ ಮಾಡಿತು. ಹಂಗಾಮಿ ನಾಯಕ ಬುಮ್ರಾ 72 ರನ್ ವೆಚ್ಚದಲ್ಲಿ 8 ವಿಕೆಟ್ ಕಬಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾಲು ಪಡೆದುಕೊಂಡರು. ಈ ಗೆಲುವಿನ ಮೂಲಕ ಭಾರತ ತಂಡ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 61.11 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು.
ಈ ಹಿಂದೆ 1978ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 222 ರನ್‌ಗಳ ಅಂತರದ ಬೃಹತ್ ಗೆಲುವು ದಾಖಲಿಸಿತ್ತು. ಅದು ಇದುವರೆಗಿನ ಗರಿಷ್ಠ ರನ್‌ಗಳ ವಿಜಯವಾಗಿತ್ತು.
ಬಾರ್ಡರ್- ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯ ಅಡಿಲೇಡ್‌ನಲ್ಲಿ ಡಿಸೆಂಬರ್ 6ರಿಂದ ಪ್ರಾರಂಭವಾಗಲಿದೆ. ಹಗಲು/ರಾತ್ರಿ (ಹೊನಲು ಬೆಳಕಿನಲ್ಲಿ) ನಡೆಯುವ ಪಂದ್ಯದಲ್ಲಿ ಕಾಯಂ ನಾಯಕ ರೋಹಿತ್ ಶರ್ಮಾ ತಂಡ ಸೇರಿಕೊಳ್ಳಲಿದ್ದಾರೆ. ಮೊದಲ ಗೆಲುವಿನೊಂದಿಗೆ ಭಾರತ ಈಗ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಷ್ ಫೈನಲ್‌ಗೇರಬೇಕಾದರೆ ಇನ್ನೂ ಬೇಕು ಗೆಲುವುಗಳು ಎಂಬುದು ಸ್ಮರಣೀಯ.
ಬುಮ್ರಾ ಯೋಜನೆ ಯಶಸ್ವಿ
ಗೆಲುವಿನಲ್ಲಿ ಭಾರತ ತಂಡದ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್ ಅವರ ಕೊಡುಗೆ ಸಾಕಷ್ಟಿದೆ. ಅವರು ಎರಡನೇ ಇನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅದಕ್ಕಿಂತಲೂ ಮಿಗಿಲಾಗಿ ಮೊದಲ ಇನಿಂಗ್ಸ್‌ನಲ್ಲಿ ಬುಮ್ರಾ 5 ವಿಕೆಟ್ ಉರುಳಿಸುವ ಮೂಲಕ ಭರ್ಜರಿ ಮುನ್ನಡೆಗೆ ಅವಕಾಶ ಮಾಡಿಕೊಟ್ಟಿದ್ದರು.
ಮೊದಲ ಇನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲ್‌ಔಟ್ ಆದ ಭಾರತ ತಂಡ ಇಷ್ಟೊಂದು ಪೈಪೋಟಿ ಕೊಡುವ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ, ಮೊದಲ ಇನಿಂಗ್ಸ್‌ನಲ್ಲಿ 104 ರನ್‌ಗಳಿಗೆ ಆಸ್ಟ್ರೇಲಿಯಾವನ್ನು ಆಲ್‌ಔಟ್ ಮಾಡುವ ಮೂಲಕ ವಿಶ್ವಾಸ ವೃದ್ಧಿಸಿಕೊಂಡು ಗೆಲುವಿನ ಪಥಕ್ಕೆ ಮರಳಿತು. ಇದೆಲ್ಲದಕ್ಕೂ ಬೌಲರ್‌ಗಳ ಸಂಘಟಿತ ಹೋರಾಟವೇ ಕಾರಣ.
ಬುಮ್ರಾ ಹಾಗೂ ಅಗ್ರ ಬ್ಯಾಟರ್‌ಗಳ ಕೊಡುಗೆಯ ಜತೆಗೆ ಉಳಿದವರ ಕೊಡುಗೆಯೂ ಇಲ್ಲಿ ಸ್ಮರಣೀಯ. 5 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ಹಾಗೂ ಪದಾರ್ಪಣೆ ಪಂದ್ಯದಲ್ಲಿಯೇ ನಾಲ್ಕು ವಿಕೆಟ್ ಉರುಳಿಸಿದ ಹರ್ಷಿತ್ ರಾಣಾ, ಮೊದಲ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಕ್ರಮವಾಗಿ 41 ಹಾಗೂ 37 ರನ್ ಬಾರಿಸಿದ ನಿತೀಶ್ ರೆಡ್ಡಿ ಈ ಗೆಲುವಿನ ಶಕ್ತಿಗಳು. ಹಿರಿಯ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಅವರನ್ನು ಬೆಂಚು ಕಾಯುವಂತೆ ಮಾಡಿದ್ದ ಕೋಚ್ ಗಂಭೀರ್ ವಾಷಿಂಗ್ಟನ್ ಸುಂದರ್‌ಗೆ ಅವಕಾಶ ಕೊಟ್ಟಿದ್ದರು. ಅವರೂ ವಿಶ್ವಾಸ ಉಳಿಸಿಕೊಂಡಿದ್ದಾರೆ. 2 ವಿಕೆಟ್ ಪಡೆಯುವ ಜತೆಗೆ 29 ರನ್ (ಎರಡನೇ ಇನಿಂಗ್ಸ್) ಕೂಡ ಬಾರಿಸಿದ್ದಾರೆ.
ಪುಟಿದೆದ್ದ ಭಾರತ
ಭಾರತದ ಪಾಲಿಗೆ ಈ ಗೆಲುವು ವಿಶೇಷ ಎನಿಸಲು ಇನ್ನೊಂದು ಕಾರಣವೂ ಇದೆ. ತವರಿನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ 3-0 ವೈಟ್‌ವಾಷ್ ಮುಖಭಂಗ ಅನುಭವಿಸಿತ್ತು. ಅದರಿಂದ ಚೇತರಿಸಿಕೊಂಡು ಆಸ್ಟ್ರೇಲಿಯಾದ ಬಿರುಕು ಬಿಟ್ಟಿರುವ ಪಿಚ್‌ನಲ್ಲಿ ಅಮೋಘ ಗೆಲುವು ಸಾಧಿಸಿದ್ದು ಸಣ್ಣ ಮಾತಲ್ಲ .
2021ರಲ್ಲಿ ಗಬ್ಬಾದಲ್ಲಿ ನಡೆದ ಟೆಸ್ಟ್‌ನಲ್ಲಿ ಗೆದ್ದಿರುವುದು ಭಾರತ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹಳಹಳಿಕೆಯೇ ಆಗಿದೆ. ಇದೀಗ ಪರ್ತ್‌ನಲ್ಲಿ ದೊರಕಿದ ಈ ಗೆಲುವು ಅದೇ ಸಾಲಿಗೆ ಸೇರುತ್ತದೆ. ತಂಡದಲ್ಲಿರುವ ಆಟಗಾರರು ಮತ್ತು ಡ್ರೆಸಿಂಗ್ ರೂಮ್‌ನಲ್ಲಿರುವ ಕೆಲವರನ್ನು ಬಿಟ್ಟರೆ ಇನ್ಯಾರಿಗೂ ಇಂಥದ್ದೊಂದು ವಿಜಯ ದೊರಕುತ್ತದೆ ಎಂದು ಒಂದು ಕ್ಷಣವೂ ಅನಿಸಿರಲಿಲ್ಲ.
ಗಂಭೀರ್ ಪರಿಣಾಮ
ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೋಲಿನ ನಂತರ ಸಾಕಷ್ಟು ಟೀಕೆಗಳನ್ನು ಎದುರಿಸಿದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೂ ಈ ಗೆಲುವಿನ ಕ್ರೆಡಿಟ್ ಸಲ್ಲಬೇಕು. ಅವರ ಒತ್ತಾಯದ ಮೇರೆಗೆ ರೆಡ್ಡಿ ಮತ್ತು ಹರ್ಷಿತ್ ಟೆಸ್ಟ್ ಕ್ಯಾಪ್‌ಗಳನ್ನು ಧರಿಸಿಕೊಂಡಿದ್ದಾರೆ ಎಂದು ಚರ್ಚೆಯಾಗಿತ್ತು. ಅವರಿಬ್ಬರೂ ಪರಿಣಾಮ ಬೀರಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಗಂಭೀರ್ ಮಾಡಿರುವ ಪ್ರಯೋಗ ಕೈ ಹಿಡಿದಿದೆ.
ವಿರಳವಾಗಿ ನಗುವ ಗಂಭೀರ್, ಪರ್ತ್‌ನಲ್ಲಿ ಸಿಕ್ಕಿದ ಗೆಲುವಿನ ಬಳಿಕ ಜೋರಾಗಿ ನಕ್ಕಿದ್ದಾರೆ ಎಂಬುದರಲ್ಲಿ ಸಂದೇಹವೇ ಇಲ್ಲ. ಅವರ ರಚಿಸಿದ ಸ್ಕ್ರಿಪ್ಟ್ ಪ್ರಕಾರವೇ ಆಟ ನಡೆದಿದೆ. ಗೆಲುವು ಸಿಕ್ಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ 150 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ನಿತಿಶ್ ಕುಮಾರ್ ರೆಡ್ಡಿ ಸ್ಫೋಟಕ 41 ರನ್ ಬಾರಿಸಿ ಭಾರತ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಪ್ರತಿಯಾಗಿ ಮೊದಲ ಇನಿಂಗ್ಸ್ ಆಡಿದ ಕಾಂಗರೂ ಪಡೆ 104 ರನ್‌ಗಳಿಗೆ ಆಲ್‌ಔಟ್ ಆಯಿತು. ಮಿಚೆಲ್ ಸ್ಟಾರ್ಕ್ ಬಾರಿಸಿದ 26 ರನ್ ಆ ತಂಡದ ಪಾಲಿಗೆ ಗರಿಷ್ಠ ಸ್ಕೋರ್. ಬುಮ್ರಾ 5, ಹರ್ಷಿತ್ ರಾಣಾ 3 ಹಾಗೂ ಸಿರಾಜ್ 2 ವಿಕೆಟ್ ಉರುಳಿಸಿದ್ದರು.
ಎರಡನೇ ಇನಿಂಗ್ಸ್‌ನಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಮೇಳೈಸಿತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 161 ರನ್ ಬಾರಿಸಿದರು. ಇನ್ನೊಂದು ತುದಿಯಲ್ಲಿ ಆಡಿದ ಕೆ. ಎಲ್ ರಾಹುಲ್ 77 ರನ್ ಬಾರಿಸಿದರು. ಅವರಿಬ್ಬರು ಆಸೀಸ್ ನೆಲದಲ್ಲಿ ದಾಖಲೆಯ 201 ರನ್‌ಗಳ ಜತೆಯಾಟ ಆಡಿದರು. ಕೊಹ್ಲಿ ತಮ್ಮೆಲ್ಲ ವೈಫಲ್ಯಗಳನ್ನು ಮೆಟ್ಟಿ ನಿಂತು ಅಜೇಯ 100 (ಶತಕ) ಬಾರಿಸಿದರು.
ದೊಡ್ಡ ಗುರಿ ಬೆನ್ನಟ್ಟಿದ ಆಸೀಸ್ ಪಡೆ 230 ರನ್‌ಗೆ ಸರ್ವಪತನ ಕಂಡಿತು. ಬುಮ್ರಾ 3 ವಿಕೆಟ್, ಸಿರಾಜ್ 3 ವಿಕೆಟ್, ಸುಂದರ್ 2 ವಿಕೆಟ್ ಹಾಗೂ ಹರ್ಷಿತ್ ಮತ್ತು ನಿತಿಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಉರುಳಿಸಿದರು.