Ind vs NZ Test : ಭಾರತದ ತಂತ್ರವೆಲ್ಲ ವಿಫಲ; ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3-0 ವೈಟ್‌ವಾಷ್ ಮುಖಭಂಗ
ಮುಂಬಯಿಯಲ್ಲಿ ನಡೆದ ಸರಣಿಯ ಮೂರನೇ ಪಂದ್ಯದ ಮೂರನೇ ದಿನವಾದ ಭಾನುವಾರ ಒಂದು ಬಾರಿ ಭಾರತ ಗೆದ್ದು ಮರ್ಯಾದೆ ಉಳಿಸಿಕೊಳ್ಳುವ ಸೂಚನೆ ಕೊಟ್ಟರೂ ಅಂತಿಮವಾಗಿ 25 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಟಿ20 ವಿಶ್ವ ಕಪ್ ಬಳಿಕ ಭಾರತ ತಂಡದ ಕೋಚಿಂಗ್ ಸಿಬ್ಬಂದಿ ಸೇರಿದಂತೆ ಹಲವಾರು ಬದಲಾವಣೆಗಳಾದವು. ಪ್ರಮುಖವಾಗಿ ಕೋಚ್ ಗೌತಮ್ ಗಂಭೀರ್ ತಂಡದ ಹೊಣೆ ವಹಿಸಿಕೊಂಡಿದ್ದರು. ಆದರೆ, ಎಲ್ಲವೂ ಭಾರತ ತಂಡದ ಮ್ಯಾನೇಜ್ಮೆಂಟ್ ಅಂದುಕೊಂಡಂತೆ ನಡೆಯುತ್ತಿಲ್ಲ. ಲಂಕಾ ಪ್ರವಾಸದಲ್ಲಿನ ಏಕ ದಿನ ಸರಣಿಯಲ್ಲಿ ಹಿನ್ನಡೆ ಅನುಭವಿಸಿದ್ದ ರೋಹಿತ್ ಪಡೆ ಇದೀಗ ತವರಿನಲ್ಲಿಯೇ ನಡೆದ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ 3-0 ಹಿನ್ನಡೆಗೆ ಒಳಗಾಗಿದೆ. ಇದು ಭಾರತ ಕ್ರಿಕೆಟ್ ತಂಡದ ಪಾಲಿಗೆ ಅತ್ಯಂತ ಹೀನಾಯ ಫಲಿತಾಂಶ ಎಂಬುದರಲ್ಲಿ ಎರಡು ಮಾತಿಲ್ಲ. ಜತೆಗೆ ನಾಯಕ ರೋಹಿತ್ ಶರ್ಮಾ ತಂಡದ ಮುಂದಾಳತ್ವ ವಹಿಸಿಕೊಂಡ ಬಳಿಕ ತಂಡ ತೋರಿದ ಅತ್ಯಂತ ಕಳಪೆ ಪ್ರದರ್ಶನ. ಒಟ್ಟಾರೆಯಾಗಿ ಭಾರತದ ಕ್ರಿಕೆಟ್ ಯೋಜನೆಗಳೆಲ್ಲ ಬುಡಮೇಲಾಗುತ್ತಿವೆ.
ಮುಂಬಯಿಯಲ್ಲಿ ನಡೆದ ಸರಣಿಯ ಮೂರನೇ ಪಂದ್ಯದ ಮೂರನೇ ದಿನವಾದ ಭಾನುವಾರ ಒಂದು ಬಾರಿ ಭಾರತ ಗೆದ್ದು ಮರ್ಯಾದೆ ಉಳಿಸಿಕೊಳ್ಳುವ ಸೂಚನೆ ಕೊಟ್ಟರೂ ಅಂತಿಮವಾಗಿ 25 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಸ್ಪಿನ್ ಟ್ರ್ಯಾಕ್‌ನಲ್ಲಿ 147 ರನ್‌ಗಳ ಗುರಿಯನ್ನು ಭೇದಿಸಲೂ ಭಾರತಕ್ಕೆ ತಂಡಕ್ಕೆ ಆಗಲಿಲ್ಲ ಎಂಬುದು ವಿಪರ್ಯಾಸ. ಇಡೀ ಸರಣಿಯಲ್ಲಿ ಭಾರತಕ್ಕೆ ಬ್ಯಾಟರ್‌ಗಳೇ ಮುಳುವಾದರು.
ರಿಷಭ್ ಪಂತ್ ತಮ್ಮ 64 ರನ್‌ಗಳ ಧೈರ್ಯಶಾಲಿ ಇನಿಂಗ್ಸ್ ಆಡಿದ ಕಾರಣ ಭಾರತಕ್ಕೆ ಭರವಸೆ ಮೂಡಿತ್ತು. ಆದರೆ ವಿವಾದಾತ್ಮಕ ಮೂರನೇ ಅಂಪೈರ್ ತೀರ್ಪಿನ ಹಿನ್ನೆಲೆಯಲ್ಲಿ ಅವರು ಪೆವಿಲಿಯನ್‌ಗೆ ಮರಳಬೇಕಾಯಿತು. ಅಲ್ಲಿಂದ ಭಾರತ ಹೆಚ್ಚು ಹೊತ್ತು ಆಡದೇ ಶರಣಾಯಿತು. ಭಾರತದ ನೆಲದಲ್ಲಿ ಟೆಸ್ಟ್ ಸರಣಿಯನ್ನು 3-0 ಕ್ಲೀನ್‌ಸ್ವೀಪ್ ಮಾಡಿದ ಬ್ಲ್ಯಾಕ್ ಕ್ಯಾಪ್ಸ್ ಪಡೆದ ಸಂತಸಕ್ಕೆ ಪಾರವೇ ಇರಲಿಲ್ಲ.
ಮೊದಲ ಬಾರಿಗೆ ಕ್ಲೀನ್ ಸ್ವೀಪ್
147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಪರ ʼಆಧುನಿಕ ಕಾಲದ ಶ್ರೇಷ್ಠ ಬ್ಯಾಟರ್‌ಗಳುʼ ಸಂಪೂರ್ಣ ವೈಫಲ್ಯ ಎದುರಿಸಿದರು. ಎಲ್ಲರೂ ಸೇರಿ ಗಳಿಸಿದ್ದು 121 ರನ್. ಅದು ಮುಂಬೈನ ವಾಂಖೆಡೆ ಸ್ಟೇಡಿಯಮ್‌ನಲ್ಲಿ.
ಅಂದ ಹಾಗೆ ತವರಿನಲ್ಲಿ ನಡೆದ ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಕ್ಲೀನ್ ಸ್ವೀಪ್ ಆಗಿರುವುದು ಇದೇ ಮೊದಲು. 2000ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 0-2 ಅಂತರದಲ್ಲಿ ಸೋತಿದ್ದ ಭಾರತ ಇದೇ ರೀತಿ ಮುಖಭಂಗ ಅನುಭವಿಸಿತ್ತು. ಆದರೆ ಆ ವೇಳೆ 2 ಪಂದ್ಯಗಳು ಮಾತ್ರ ಇದ್ದವು.
ಪ್ರವಾಸಿ ಕಿವೀಸ್ ತಂಡ ಭಾರತ ತಂಡ ನಿರ್ಮಿಸಿಕೊಂಡಿದ್ದ ʼಅಹಂʼ ಅನ್ನು ಗಮನಾರ್ಹವಾಗಿ ಮುರಿಯಿತು. ತಮಗೆ ಅನುಕೂಲಕರ ಪರಿಸ್ಥಿತಿಯಲ್ಲಿ ಅಬ್ಬರಿಸುವ ಭಾರತ ತಂಡದ ಬ್ಯಾಟರ್‌ಗಳ ಜಂಘಾಬಲವನ್ನು ಉಡುಗಿಸಿತು. ಎಲ್ಲಿಯ ತನಕ ಎಂದರೆ ಮೂರನೇ ದಿನದಲ್ಲಿ ಭಾರತ ಕೇವಲ 16 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ನಷ್ಟ ಮಾಡಿಕೊಂಡಿತು. ಭಾರತದ ಸ್ಪಿನ್ ಪಿಚ್‌ನಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್‌ಗಳೇ ಮಿಂಚಿದರು.
ಪಂತ್ ವಿಕೆಟ್ ಉರುಳಿದ್ದೇ ಸೋಲು
ಊಟದ ವಿರಾಮದ ನಂತರ ಭಾರತ ಗೆಲುವಿಗೆ 55 ರನ್‌ಗಳು ಬೇಕಾಗಿದ್ದವು. ಅಲ್ಲದೆ ಐದು ವಿಕೆಟ್‌ಗಳೂ ಉಳಿದಿದ್ದವು. ಹೀಗಾಗಿ ಭಾರತದ ಭರವಸೆಗಳು ಪಂತ್ ಮೇಲೆ ಅವಲಂಬಿತವಾಗಿದ್ದವು. ಆದರೆ ವಿವಾದಾತ್ಮಕ ಮೂರನೇ ಅಂಪೈರ್ ತೀರ್ಪಿನಿಂದಾಗಿ ಪಂದ್ಯ ಕಿವೀಸ್ ಕಡೆ ವಾಲಿತು. ಅಜಾಜ್ ಪಟೇಲ್ (6ವಿಕೆಟ್ 57 ರನ್) ಅವರ ನಿಖರ ಬೌಲಿಂಗ್‌ನಿಂದಾಗಿ ಭಾರತಕ್ಕೆ ಸೋಲಾಯಿತು.
ಪಂತ್ ಕೇವಲ 57 ಎಸೆತಗಳಲ್ಲಿ 9 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ 64 ರನ್ ಗಳಿಸಿದರು. ಆದರೆ 22 ನೇ ಓವರ್‌ನಲ್ಲಿ ಬಂದ ಮನವಿಯಲ್ಲಿ ಪಟೇಲ್ ಅವರ ಎಸೆತವು ಬ್ಯಾಟ್ ಅಥವಾ ಗ್ಲವ್ಸ್‌ಗೆ ತಾಗಿಲ್ಲ ಎಂಬ ತೀರ್ಮಾನದೊಂದಿಗೆ ಔಟ್ ನೀಡಿದರು. ಇನ್ನಿಂಗ್ಸ್‌ನಲ್ಲಿ ಐದನೇ ಮತ್ತು ಪಂದ್ಯದಲ್ಲಿ10ನೇ ವಿಕೆಟ್ ಪಡೆದ ಅಜಾಜ್ ಪಟೇಲ್ ವಿರುದ್ಧ ಪಂತ್ ಅಬ್ಬರಿಸಿದ್ದರು. ಅವರು ನ್ಯೂಜಿಲೆಂಡ್ ಸ್ಪಿನ್ನರ್ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದ್ದರು.
1 ರನ್ ಸಿಡಿಸಿ ಔಟಾದ ಕೊಹ್ಲಿ
ವಿರಾಟ್ ಕೊಹ್ಲಿ (1) ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರು. ಅವರು ಬ್ಯಾಟ್ ಭುಜದ ಮೇಲೆ ಹೊತ್ತುಕೊಂಡು ಬರುವಾಗ ಇದ್ದ ವಿಶ್ವಾಸ ಅವರು ಔಟಾದಾಗ ಶೂನ್ಯ ಎನಿಸಿತು. ಇನ್ನೊಂದು ತುದಿಯಿಂದ, ಯಶಸ್ವಿ ಜೈಸ್ವಾಲ್ (5) ಬೇಗ ಔಟಾದರು. ಗ್ಲೆನ್ ಫಿಲಿಪ್ಸ್ (3/42) ಭಾರತ ತಂಡದ ಸೋಲಿಗೆ ಮುನ್ನುಡಿ ಬರೆದರು.
ಸರ್ಫರಾಜ್ ಖಾನ್ (0) ಟೆಸ್ಟ್‌ನಲ್ಲಿ ಎರಡನೇ ಬಾರಿಗೆ ಮೊದಲ ಎಸೆತದಲ್ಲಿ ಪೂರ್ವನಿಯೋಜಿತ ಸ್ವೀಪ್ ಶಾಟ್‌ಗೆ ಮುಂದಾದರು. ರಚಿನ್ ರವೀಂದ್ರ ಅವರು ಸ್ಕ್ವೇರ್ ಲೆಗ್‌ನಲ್ಲಿ ಕ್ಯಾಚ್ ಹಿಡಿದು ಅವರನ್ನು ಔಟ್ ಮಾಡಿದರು.
ರವೀಂದ್ರ ಜಡೇಜಾ (6) ಅವರು ಪಂತ್ ಅವರೊಂದಿಗೆ 42 ರನ್‌ಗಳ ಜೊತೆಯಾಟದಲ್ಲಿ ಭಾರತವನ್ನು ಗುರಿಯ ಸಮೀಪಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದರು. ಅವರು ವಿಲ್ ಯಂಗ್ ಪಡೆದ ಕ್ಯಾಚ್ ಬಲಿಯಾದರೆ ಕೊನೆಯಲ್ಲಿ ಸುಂದರ್ ಮತ್ತು ಆರ್ ಅಶ್ವಿನ್ (6) ಸೋಲಿನೊಂದಿಗೆ ಇನಿಂಗ್ಸ್ ಕೊನೆಗೊಳಿಸಿದರು.