ಡೈಮಂಡ್ ಲೀಗ್ ಫೈನಲ್: ನೀರಜ್ ಚೋಪ್ರಾ ಮತ್ತೆ ರನ್ನರ್-ಅಪ್, ವೆಬರ್‌ಗೆ ಚಿನ್ನ
ಜರ್ಮನಿಯ ವೆಬರ್, ತಮ್ಮ ಎರಡನೇ ಪ್ರಯತ್ನದಲ್ಲಿ 91.57 ಮೀಟರ್ ದೂರ ಎಸೆಯುವ ಮೂಲಕ ಋತುವಿನ ವಿಶ್ವದ ಶ್ರೇಷ್ಠ ಪ್ರದರ್ಶನ ನೀಡಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆಯನ್ನು ದಾಖಲಿಸಿದರು.;
ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಮತ್ತೊಮ್ಮೆ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಜರ್ಮನಿಯ ಜೂಲಿಯನ್ ವೆಬರ್ 91.57 ಮೀಟರ್‌ಗಳಷ್ಟು ದೂರ ಎಸೆಯುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಗುರುವಾರ (ಆಗಸ್ಟ್ 28) ನಡೆದ ಫೈನಲ್ಸ್‌ನಲ್ಲಿ, ಚೋಪ್ರಾ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲರಾದರು. ತಮ್ಮ ಅಂತಿಮ ಪ್ರಯತ್ನದಲ್ಲಿ 85.01 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಎರಡನೇ ಸ್ಥಾನ ಪಡೆದರು. ಇದು ಸತತ ಮೂರನೇ ಬಾರಿಗೆ ಚೋಪ್ರಾ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದಾರೆ. ಅವರು 2022ರಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದರು.
ಜರ್ಮನಿಯ ವೆಬರ್, ತಮ್ಮ ಎರಡನೇ ಪ್ರಯತ್ನದಲ್ಲಿ 91.57 ಮೀಟರ್ ದೂರ ಎಸೆಯುವ ಮೂಲಕ ಋತುವಿನ ವಿಶ್ವದ ಶ್ರೇಷ್ಠ ಪ್ರದರ್ಶನ ನೀಡಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆಯನ್ನು ದಾಖಲಿಸಿದರು. ಅವರ ಮೊದಲ ಪ್ರಯತ್ನ ಕೂಡ 91.37 ಮೀಟರ್ ಆಗಿತ್ತು. ಟ್ರಿನಿಡಾಡ್ ಮತ್ತು ಟೊಬಾಗೊದ ಕೇಶಾರ್ನ್ ವಾಲ್ಕಾಟ್ 84.95 ಮೀಟರ್ ಎಸೆಯುವ ಮೂಲಕ ಮೂರನೇ ಸ್ಥಾನ ಪಡೆದರು.
ಈ ಋತುವಿನಲ್ಲಿ ವೆಬರ್, ಚೋಪ್ರಾ ವಿರುದ್ಧ 3-1 ಮುನ್ನಡೆ ಸಾಧಿಸಿದ್ದಾರೆ. ಮುಂದಿನ ತಿಂಗಳು ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಮುನ್ನ ಈ ಫಲಿತಾಂಶವು ಚೋಪ್ರಾ ಅವರಿಗೆ ಹಿನ್ನಡೆ ಎಂದು ಪರಿಗಣಿಸಲಾಗಿದೆ. "ಇನ್ನೂ ಕೆಲವು ತರಬೇತಿಯ ಅಗತ್ಯವಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎಲ್ಲವೂ ವಿಭಿನ್ನವಾಗಿರುತ್ತದೆ," ಎಂದು ಚೋಪ್ರಾ ಪಂದ್ಯದ ನಂತರ ಪ್ರತಿಕ್ರಿಯಿಸಿದ್ದಾರೆ.