IND vs NZ Test: ನನ್ನ ವೃತ್ತಿ ಜೀವನದ ಕಳಪೆ ಹಂತ; ಸೋಲಿನ ಕುರಿತು ರೋಹಿತ್‌ ಶರ್ಮಾ ಹತಾಶೆ

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 25 ರನ್‌ಗಳ ಸೋಲನುಭವಿಸಿದ ನಂತರ ಭಾರತವು ಮೊದಲ ಬಾರಿಗೆ ತವರು ನೆಲದಲ್ಲಿ 0-3 ಅಂತರದಿಂದ ಅವಮಾನಕರ ಸೋಲುಂಡ ಕಳಪೆ ದಾಖಲೆ ಮಾಡಿತು.

Update: 2024-11-03 11:42 GMT

IND vs NZ Test: ನನ್ನ ವೃತ್ತಿ ಜೀವನದ ಕಳಪೆ ಹಂತ; ಸೋಲಿನ ಬಳಿಕ ಹತಾಶೆ ವ್ಯಕ್ತಪಡಿಸಿದ ರೋಹಿತ್‌ ಶರ್ಮಾನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 0-3 ಅಂತರದ ವೈಟ್‌ವಾಶ್‌ ಮುಖಭಂಗ ನನ್ನ ವೃತ್ತಿಜೀವನದ ಅತ್ಯಂತ ಕೆಳಮಟ್ಟದ ಹಂತ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 25 ರನ್‌ಗಳ ಸೋಲನುಭವಿಸಿದ ನಂತರ ಭಾರತವು ಮೊದಲ ಬಾರಿಗೆ ತವರು ನೆಲದಲ್ಲಿ 0-3 ಅಂತರದಿಂದ ಅವಮಾನಕರ ಸೋಲುಂಡ ಕಳಪೆ ದಾಖಲೆ ಮಾಡಿತು.

147 ರನ್‌ಗಳ ಗುರಿ ಬೆನ್ನತ್ತಿದ ಭಾರತ 121 ರನ್‌ಗಳಿಗೆ ಆಲೌಟ್ ಆಯಿತು. ಮುಂಬಯಿಯ ಸ್ಪಿನ್‌ ಟ್ರ್ಯಾಕ್‌ನಲ್ಲಿ ಭಾರತಕ್ಕೆ ಚೇತರಿಸಿಕೊಳ್ಳುವುದಕ್ಕೆ ಆಗಲೇ ಇಲ್ಲ. ಘಟಾನುಘಟಿ ಬ್ಯಾಟರ್‌ಗಳು ಕಿವೀಸ್‌ ಸ್ಪಿನ್ನರ್‌ಗಳಿಗೆ ಶರಣಾದರು. ಬೆಂಗಳೂರು ಹಾಗೂ ಪುಣೆಯಲ್ಲಿ ನಡೆದಿದ್ದ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಆತಿಥೇಯರು ಮುಜುಗರದ ಸೋಲು ಕಂಡಿದ್ದರು. ಹೀಗಾಗಿ ಭಾರತಕ್ಕೆ ತಂಡಕ್ಕೆ ಸಹಜವಾಗಿಯೇ ಅವಮಾನ ಆಗಿದೆ. ಪ್ರಮುಖವಾಗಿ ನಾಯಕ ರೋಹಿತ್‌ ಶರ್ಮಾ ಬ್ಯಾಟಿಂಗ್‌ ಹಾಗೂ ನಾಯಕತ್ವದಲ್ಲಿ ವೈಫಲ್ಯ ಅನುಭವಿಸುವಂತಾಗಿದೆ.

ಈ ರೀತಿಯ ಸೋಲು ನನ್ನ ವೃತ್ತಿಜೀವನದ ಅತ್ಯಂತ ಕೆಳಮಟ್ಟದ ಹಂತವಾಗಿದೆ. ನಾನು ಅದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ ಎಂದು ರೋಹಿತ್ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ತವರಿನಲ್ಲಿ ಈ ರೀತಿಯ ಟೆಸ್ಟ್ ಸರಣಿಯನ್ನು ಕಳೆದುಕೊಂಡಿರುವುದು ಸುಲಭವಾಗಿ ಅರಗಿಸಿಕೊಳ್ಳುವ ಸಂಗತಿಯಲ್ಲ ಎಂದು ಅವರು ಹೇಳಿದ್ದಾರೆ.

ಹೌದು ಖಂಡಿತವಾಗಿಯೂ ಇದೊಂದು ಕಹಿ ಪ್ರಸಂಗ. ತವರಿನಲ್ಲಿ ಸರಣಿ ಹಾಗೂ ಟೆಸ್ಟ್ ಪಂದ್ಯ ಸೋಲುವುದು ಎಂದಿಗೂ ಒಳ್ಳೆಯ ಲಕ್ಷಣವಲ್ಲ. ಅದು ಸುಲಭವಾಗಿ ಅರಗಿಸಿಕೊಳ್ಳಲು ಆಗದ ಸಂಗತಿ. ನಾವು ನಮ್ಮ ಅತ್ಯುತ್ತಮ ಕ್ರಿಕೆಟ್ ಆಡಲಿಲ್ಲ. ಸರಣಿಯುದ್ದಕ್ಕೂ ನ್ಯೂಜಿಲೆಂಡ್ ಉತ್ತಮವಾಗಿ ಆಡಿತು. ನಾವು ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ, "ಎಂದು ರೋಹಿತ್ ಪಂದ್ಯದ ನಂತರದ ಸಮಾರಂಭದಲ್ಲಿ ಹೇಳಿದರು.ʼ

ʼಮೊದಲ ಎರಡು ಟೆಸ್ಟ್‌ಗಳಲ್ಲಿ ನಾವು ಮೊದಲ ಇನ್ನಿಂಗ್ಸ್‌ನಲ್ಲಿ ಸಾಕಷ್ಟು ರನ್ ಗಳಿಸಲಿಲ್ಲ. ಈ ಪಂದ್ಯದಲ್ಲಿ ನಾವು 30 ರನ್ (28) ಮುನ್ನಡೆ ಸಾಧಿಸಿದ್ದೆವು. ಹೀಗಾಗಿ ಗುರಿ ಬೆನ್ನಟ್ಟುವ ಅವಕಾಶ ಇತ್ತು. ಅದನ್ನೂ ನಷ್ಟ ಮಾಡಿಕೊಂಡೆವು ಎಂದು ರೋಹಿತ್ ಹೇಳಿದ್ದಾರೆ.‌

"ನಾವು ಒಂದು ತಂಡವಾಗಿ ಆಡುವಲ್ಲಿ ವಿಫಲರಾಗಿದ್ದೇವೆ. ಅಂತಹ ಗುರಿಯನ್ನು ಬೆನ್ನಟ್ಟುತ್ತಿರುವಾಗ ಸತತವಾಗಿ ರನ್‌ಗಳನ್ನು ಮಾಡಬೇಕಾಗುತ್ತದೆ. ಅದು ನನ್ನ ಮನಸ್ಸಿನಲ್ಲಿ ಇದ್ದ ಯೋಜನೆಯಾಗಿತ್ತು. ಆದರೆ, ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.

ಇದೇ ವೇಳೆ ರೋಹಿತ್ , ತಮ್ಮ ಪ್ರದರ್ಶನದಿಂದ ನಿರಾಶೆಗೊಂಡಿರುವುದಾಗಿ ಒಪ್ಪಿಕೊಂಡರು.

"ನಾನು ಕೆಲವು ಯೋಜನೆಗಳೊಂದಿಗೆ ಹೋಗಿದ್ದೆ. ಅವುಗಳು ಈ ಸರಣಿಯಲ್ಲಿ ಫಲ ನೀಡಲಿಲ್ಲ. ಈ ಪರಿಸ್ಥಿತಿಗಳಲ್ಲಿ ನಾವು ನಮ್ಮ ಅತ್ಯುತ್ತಮ ಕ್ರಿಕೆಟ್ ಆಡಲಿಲ್ಲ. ಅದರ ಫಲಿತಾಂಶವನ್ನು ಎದುರಿಸುತ್ತಿದ್ದೇವೆ,ʼʼ ಎಂದು ನುಡಿದರು.

ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ಮತ್ತು ಬ್ಯಾಟಿಂಗ್‌ನಲ್ಲಿಯೂ ನಾನು ಅತ್ಯುತ್ತಮ ಪ್ರದರ್ಶನ ನೀಡಲಿಲ್ಲ. ಒಟ್ಟಾರೆಯಾಗಿ ಒಂದು ಘಟಕವಾಗಿ ನಾವು ಪ್ರದರ್ಶನ ನೀಡಲು ವಿಫಲರಾಗಿದ್ದೇವೆ, "ಎಂದು ಭಾರತದ ನಾಯಕ ಹೇಳಿದ್ದಾರೆ. 

Tags:    

Similar News