ICC President | ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ

Update: 2024-08-28 06:44 GMT

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ(ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಜಾಗತಿಕ ಕ್ರಿಕೆಟ್ ಆಡಳಿತದ ಉನ್ನತ ಸ್ಥಾನ ತಲುಪಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 

2019 ರಿಂದ ಬಿಸಿಸಿಐ ಕಾರ್ಯದರ್ಶಿಯಾಗಿರುವ ಶಾ(35), ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ(62) ಮೂರನೇ ಅವಧಿಗೆ ಸ್ಪರ್ಧಿಸಲು ನಿರಾಕರಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಅವರು ಡಿಸೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್‌, ಮುಂದಿನ ತಿಂಗಳ ಅಂತ್ಯದಲ್ಲಿ ಅಥವಾ ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತಮ್ಮ ಸ್ಥಾನ ತ್ಯಜಿಸಲಿದ್ದಾರೆ.  ದಿವಂಗತ ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್. ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಅವರ ನಂತರ ಈ ಉನ್ನತ ಹುದ್ದೆಗೆ ಆಯ್ಕೆಯಾದ ಐದನೇ ಭಾರತೀಯ ಅವರು. 

ಅಹಮದಾಬಾದ್ ಮೂಲದ ಆಡಳಿತಾರ ಶಾ, ಲಾಸ್ ಏಂಜಲೀಸ್ 2028 ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆ ಸೇರಿದಂತೆ ಕ್ರೀಡೆಯ ಜಾಗತಿಕ ವ್ಯಾಪ್ತಿ ಮತ್ತು ಜನಪ್ರಿಯತೆಯನ್ನು ವಿಸ್ತರಿಸುವ ಜವಾಬ್ದಾರಿಯನ್ನು ಒತ್ತಿ ಹೇಳಿದರು. 

ʻಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಿನಮ್ರವಾಗಿ ಒಪ್ಪಿಕೊಳ್ಳುತ್ತೇನೆ,ʼ ಎಂದು ಐಸಿಸಿ ಬಿಡುಗಡೆಯಲ್ಲಿ ಶಾ ಹೇಳಿದ್ದಾರೆ. 

ʻಅಂತಾರಾಷ್ಟ್ರೀಯ ಕ್ರಿಕೆಟ್ ನಿರ್ಣಾಯಕ ಘಟ್ಟದಲ್ಲಿದೆ. ಆಟದ ಬಹು ಸ್ವರೂಪಗಳ ಸಮತೋಲನ, ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯ ಉತ್ತೇಜನ ಮತ್ತು ಹೊಸ ಜಾಗತಿಕ ಮಾರುಕಟ್ಟೆಗಳಿಗೆ ಪರಿಚಯಿಸಬೇಕಿದೆ. ಕ್ರಿಕೆಟ್ ನ್ನು ಮತ್ತಷ್ಟು ಜಾಗತೀಕರಣಗೊಳಿಸಲು ಐಸಿಸಿ ತಂಡ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇನೆ. ಕ್ರಿಕೆಟ್ ಅನ್ನು ಹಿಂದೆಂದಿಗಿಂತಲೂ ಹೆಚ್ಚು ಜನಪ್ರಿಯಗೊಳಿಸುವುದು ನಮ್ಮ ಗುರಿ,ʼ ಎಂದು ಹೇಳಿದ್ದಾರೆ.

ಜಾಗತಿಕ ಸಂಸ್ಥೆಯ ಆದಾಯದ ಶೇ. 75 ಕ್ಕಿಂತ ಹೆಚ್ಚು ಕೊಡುಗೆ ನೀಡುವ ಬಿಸಿಸಿಐ ನೇತೃತ್ವ ವಹಿಸಿರುವ ಶಾ ಅವರ ಆಯ್ಕೆ ಖಂಡಿತವಾಗಿತ್ತು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಗಳಲ್ಲಿ ಒಬ್ಬರು ಷಾ ಅವರ ಹೆಸರು ಪ್ರಸ್ತಾಪಿಸಿದರು ಮತ್ತು ಇನ್ನೊಂದು ಮಂಡಳಿ ಅನುಮೋದಿಸಿತು. ಐಸಿಸಿ ಸಂವಿಧಾನದ ಪ್ರಕಾರ, 12 ಟೆಸ್ಟ್ ಆಡುವ ರಾಷ್ಟ್ರಗಳು, ಅಧ್ಯಕ್ಷರು, ಉಪ ಅಧ್ಯಕ್ಷರು, ಇಬ್ಬರು ಅಸೋಸಿಯೇಟ್ ಸದಸ್ಯ ನಾಮನಿರ್ದೇಶಿತರು ಮತ್ತು ಒಬ್ಬ ಸ್ವತಂತ್ರ ಮಹಿಳಾ ನಿರ್ದೇಶಕರು ಸೇರಿದಂತೆ 17 ಮತಗಳಿವೆ. 

2022 ರಲ್ಲಿ ಐಸಿಸಿಯ ಅತ್ಯಂತ ಶಕ್ತಿಶಾಲಿ ಉಪ ಸಮಿತಿಯಾದ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ (F&CA) ಮುಖ್ಯಸ್ಥರಾಗಿ ನೇಮಕಗೊಂಡಾಗ, ಅವರು ಅಧ್ಯಕ್ಷ ಸ್ಥಾನದ ಸಂಭಾವ್ಯ ಆಯ್ಕೆ ಎಂಬುದು ಸ್ಪಷ್ಟವಾಗಿತ್ತು. 

ಸವಾಲುಗಳು: ಶಾ ಎದುರಿಸುವ ತಕ್ಷಣದ ಸವಾಲೆಂದರೆ, ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಸುವುದು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ಷಾ ಹೈಬ್ರಿಡ್ ಮಾದರಿಯ ಬೆಂಬಲಿಗರಾಗಿದ್ದರು. ಪಾಕಿಸ್ತಾನ ಮತ್ತು ಶ್ರೀಲಂಕಾ 2023 ರಲ್ಲಿ ಏಷ್ಯಾ ಕಪ್ ಒಡಿಐ ಕಾರ್ಯಕ್ರಮದ ಸಹ ಆತಿಥ್ಯ ವಹಿಸಿದ್ದವು ಎಂಬುದನ್ನು ಗಮನಿಸಬೇಕು. ಭಾರತ ಸರ್ಕಾರವು ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡುವುದಿಲ್ಲ. ಹೀಗಾಗಿ, ಶಾ ಈ ವಿಷಯವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಬೇಕಿದೆ.

ಅವರ ದೀರ್ಘಾವಧಿಯ ಸವಾಲುಗಳೆಂದರೆ, ಟೆಸ್ಟ್ ಕ್ರಿಕೆಟ್‌ನ ಭವಿಷ್ಯದ ರಕ್ಷಣೆ, ಒಂದು ದಿನದ ಪಂದ್ಯಗಳನ್ನು ಸುಸ್ಥಿರವಾಗಿರಿಸುವುದು ಮತ್ತು ಟಿ 20 ಲೀಗ್‌ಗಳಲ್ಲಿ ಪ್ರತಿಭೆಗಳು ಕಳೆದುಕೊಳ್ಳದಂತೆ ರಕ್ಷಿಸುವುದು. 

ʻಲಾಸ್‌ ಎಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಯು ಕ್ರೀಡೆಯ ಬೆಳವಣಿಗೆಗೆ ಮಹತ್ವದ ತಿರುವು ನೀಡುತ್ತದೆ, ಅಭೂತಪೂರ್ವ ರೀತಿಯಲ್ಲಿ ಮುನ್ನಡೆಸುತ್ತದೆ ಎಂಬ ವಿಶ್ವಾಸವಿದೆ,ʼ ಎಂದು ಶಾ ಹೇಳಿದರು.

Tags:    

Similar News