Exclusive Interview: ಅಶ್ವಿನ್‌ಗೆ ಭಾರತ ತಂಡದ ನಾಯಕತ್ವ ಸಿಗದಿರುವುದು ದುರದೃಷ್ಟ: ಸುನಿಲ್ ಜೋಶಿ
Exclusive Interview: 'ದ ಫೆಡರಲ್‌ಗೆ'' ವಿಶೇಷ ಸಂದರ್ಶನ ನೀಡಿದ ಭಾರತ ತಂಡದ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ಅವರು ಅಶ್ವಿನ್ ಅವರ ಬೌಲಿಂಗ್ ಸಾಮರ್ಥ್ಯ ಹಾಗೂ ಭಾರತ ತಂಡದ ಸ್ಪಿನ್ ಬೌಲಿಂಗ್ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.;
ಭಾರತ ಕ್ರಿಕೆಟ್ ಕ್ಷೇತ್ರ ಕಂಡಿರುವ ಶ್ರೇಷ್ಠ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಸ್ಪ್ರೇಲಿಯಾ ಪ್ರವಾಸದ ನಡುವೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ತವರಿಗೆ ವಾಪಸಾಗಿದ್ದಾರೆ. ಅವರ ನಿರ್ಧಾರ ಕ್ರಿಕೆಟ್ ಕ್ಷೇತ್ರದ ಪರಿಣತರಿಗೆ ಹಾಗೂ ಅಭಿಮಾನಿಗಳಿಗೆ ಅಚ್ಚರಿಯನ್ನು ಉಂಟು ಮಾಡಿದೆ. ಆದರೆ, ಭಾರತ ತಂಡ ಮಾಜಿ ಆಲ್‌ರೌಂಡರ್ ಸುನಿಲ್ ಜೋಶಿ ಅವರು ಅಶ್ವಿನ್ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ ಹಾಗೂ ಅದನ್ನು ನಾವು ಗೌರವಿಸಬೇಕಾಗಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ತಂಡದ ಮುಖ್ಯ ಕೋಚ್ ಆಗಿರುವ ಕನ್ನಡಿಗ ಸುನೀಶ್ ಜೋಶಿ, ʼದ ಫೆಡರಲ್ʼ ಜತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿ, ಅಶ್ವಿನ್ ಅವರನ್ನು "ಆಧುನಿಕ ಯುಗದ ಮಹಾನ್ ಕ್ರಿಕೆಟಿಗ" ಮತ್ತು "ಚಾಂಪಿಯನ್ ಕ್ರಿಕೆಟರ್" ಎಂದು ಕೊಂಡಾಡಿದ್ದಾರೆ. ಆದರೆ, ಅಶ್ವಿನ್ ಅವರನ್ನು ಭಾರತ ಟೆಸ್ಟ್ ತಂಡದ ನಾಯಕನನ್ನಾಗಿ ನೇಮಕ ಮಾಡದಿರುವುದು ದುರದೃಷ್ಟಕರ ನಿರ್ಧಾರ ಎಂದು ಹೇಳಿದ್ದಾರೆ.
“ಆರ್. ಅಶ್ವಿನ್ ಚಾಂಪಿಯನ್ ಕ್ರಿಕೆಟರ್. ಅವರ ನಿವೃತ್ತಿ ನಿರ್ಧಾರ ಬಗ್ಗೆ ನಾನು ಆಚ್ಚರಿಗೆ ಒಳಗಾಗಿಲ್ಲ. ಅವರು ಪ್ರಬುದ್ಧರು ಹಾಗೂ ಏನು ಮಾಡಬೇಕು ಎಂಬುದರ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಮೈದಾನದಲ್ಲಿ ಸೃಷ್ಟಿಸಿರುವ ದಾಖಲೆಗಳೇ ಇದಕ್ಕೆ ಸಾಕ್ಷಿ. ನಿಸ್ಸಂದೇಹವಾಗಿ ಆಧುನಿಕ ಕ್ರಿಕೆಟ್‌ನ ದಂತಕಥೆ ಅವರಾಗಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸಬೇಕು,” ಎಂದು ಮಾಜಿ ಬಿಸಿಸಿಐ ಮುಖ್ಯ ಆಯ್ಕೆದಾರರಾಗಿದ್ದ ಸುನೀಲ್ ಜೋಶಿ ಹೇಳಿದ್ದಾರೆ.
ಸರ್ವಶ್ರೇಷ್ಠ ಬೌಲರ್
38 ವರ್ಷದ ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ 537 ವಿಕೆಟ್ ಉರುಳಿಸಿದ್ದಾರೆ. ಈ ಮಾದರಿಯಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ 337 ಪಂದ್ಯಗಳಲ್ಲಿ 619 ವಿಕೆಟ್ ಪಡೆದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಅಶ್ವಿನ್ ಡಿಸೆಂಬರ್ 18ರಂದು ಬ್ರಿಸ್ಬೇನ್ ಟೆಸ್ಟ್ ಮುಗಿದ ತಕ್ಷಣ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದ್ದರು. ಅಶ್ವಿನ್ ತಮ್ಮ ಮಾಜಿ ನಾಯಕ ಎಂಎಸ್ ಧೋನಿಯ ಅವರಂತೆಯೇ ಮಾಡಿದ್ದಾರೆ. ಧೋನಿ 2014ರಲ್ಲಿ ಆಸ್ಟ್ರೇಲಿಯಾ ಸರಣಿಯ ನಡುವೆಯೇ ಟೆಸ್ಟ್‌ನಿಂದ ನಿವೃತ್ತಿ ಘೋಷಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಮುಖ ಆಫ್-ಸ್ಪಿನ್ನರ್ ಆಗಿದ್ದ ಅಶ್ವಿನ್ ಏಕದಿನ ಮಾದರಿಯಲ್ಲಿ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಹ ಅಮೋಘ ಸಾಧನೆ ಮಾಡಿದ್ದಾರೆ. 2011ರ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಆಲ್‌ರೌಂಡರ್ ರೂಪದಲ್ಲಿ ಆಡುತ್ತಿದ್ದ ಅವರು ಬ್ಯಾಟಿಂಗ್‌ನಲ್ಲಿ 6 ಟೆಸ್ಟ್ ಶತಕಗಳನ್ನು ದಾಖಲಿಸಿದ್ದಾರೆ. ಅತ್ಯುತ್ತಮ ಐದು ಸ್ಪಿನ್ನರ್‌ಗಳಲ್ಲಿ ಒಬ್ಬರು
ಅಶ್ವಿನ್ ಅವರ ಬೌಲಿಂಗ್ ಸಾಮರ್ಥ್ಯಕ್ಕೆ ಎಷ್ಟು ಅಂಕಗಳನ್ನು ನೀಡಬಲ್ಲಿರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೋಶಿ, ಅಗ್ರ ಐವರಲ್ಲಿ ಒಬ್ಬರು ಎಂದು ನುಡಿದಿದ್ದಾರೆ. ʼʼಎದುರಾಳಿ ತಂಡಕ್ಕೆ ಅಶ್ವಿನ್ ಬಗ್ಗೆ ಅಪಾರ ಗೌರವವಿತ್ತು. ಅವರು ಭಾರತದ ಸಾರ್ವಕಾಲಿಕ ಅಗ್ರ ಐದು ಸ್ಪಿನ್ನರ್‌ಗಳಲ್ಲಿ ಒಬ್ಬರು. ನಾನು ಅವರನ್ನು ಯಾರೊಂದಿಗೂ ಹೋಲಿಸಲು ಪ್ರಯತ್ನಿಸುತ್ತಿಲ್ಲ, ಆದರೆ ಆಧುನಿಕ ಕ್ರಿಕೆಟ್‌ನ ಅವಶ್ಯಕತೆಗಳು, ಸ್ಪರ್ಧೆ ಮತ್ತು ಕೌಶಲಗಳನ್ನು ನೋಡಿದರೆ ಅವರು ಖಂಡಿತವಾಗಿಯೂ ಅಗ್ರ ಐದು ಸ್ಥಾನದಲ್ಲಿದ್ದರು,ʼʼ ಎಂದು ಜೋಶಿ ಹೇಳಿದ್ದಾರೆ.
ನಾಯಕತ್ವದ ಅದೃಷ್ಟವೇ ಇಲ್ಲ
ಅತ್ಯುತ್ತಮ ಕ್ರಿಕೆಟ್ ಚಿಂತಕರಲ್ಲಿ ಒಬ್ಬರಾದ ಅಶ್ವಿನ್ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಮುನ್ನಡೆಸುವ ಅವಕಾಶ ಸಿಗಲಿಲ್ಲ. ಇದು ದುರದೃಷ್ಟಕರ ಸಂಗತಿ ಜೋಶಿ ಖೇದ ವ್ಯಕ್ತಪಡಿಸಿದ್ದಾರೆ.
"ದುರದೃಷ್ಟವಶಾತ್, ಅಶ್ವಿನ್‌ಗೆ ಭಾರತೀಯ ನಾಯಕತ್ವವನ್ನು ಪಡೆಯಲು ಸಾಧ್ಯವಾಗಲಿಲ್ಲ. ಅತ್ಯುತ್ತಮ ಕ್ರಿಕೆಟ್ ರಣತಂತ್ರಗಾರ ಅನಿಲ್ ಕುಂಬ್ಳೆ ಅವರ ಉದಾಹರಣೆ ನಮ್ಮ ಮುಂದಿದೆ. ಅವರು ಕೊನೇ ಹಂತದಲ್ಲಿ ನಾಯಕತ್ವ ಪಡೆದರು. ವೃತ್ತಿಜೀವನದಲ್ಲಿ ಕೊನೆಯಲ್ಲಿ ಅಶ್ವಿನ್‌ಗೆ ಟೀಮ್ ಇಂಡಿಯಾ ಮುನ್ನಡೆಸುವ ಅವಕಾಶ ಸಿಗದಿರುವುದು ದುರದೃಷ್ಟಕರ, "ಎಂದು ಕರ್ನಾಟಕದ ಮಾಜಿ ಎಡಗೈ ಸ್ಪಿನ್ನರ್ ಜೋಶಿ ಅಭಿಪ್ರಾಯಪಟ್ಟರು. .
ಆಕ್ರಮಣಕಾರಿ ಬೌಲಿಂಗ್
ಸ್ಪಿನ್ನರ್ ಆಗಿ ಅಶ್ವಿನ್ ಅವರ ಸಾಮರ್ಥ್ಯದ ಬಗ್ಗೆ ಮಾತನಾಡಿದ ಜೋಶಿ, ಅವರು ಆಕ್ರಮಣಕಾರಿ ಬೌಲರ್ ಆಗಿದ್ದು, ಯಾವಾಗಲೂ ವಿಕೆಟ್ ಪಡೆಯುವ ಬಗ್ಗೆ ಯೋಚಿಸುತ್ತಿದ್ದರು ಎಂದು ಹೇಳಿದರು.
"ನನ್ನ ಪ್ರಕಾರ ಅಶ್ವಿನ್ ಆಕ್ರಮಣಕಾರಿ ಬೌಲರ್. ಅವರ ಬೌಲಿಂಗ್‌ನಲ್ಲಿ ಏರಿಳಿತಗಳಿಗಿಂತ ಹೆಚ್ಚಾಗಿ ಮ್ಯಾಚ್ ವಿನ್ನಿಂಗ್ ಬೌಲಿಂಗ್ ಮಾಡುತ್ತಿದ್ದರು. ಅವರು ಯಾವಾಗಲೂ ವಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದರು. ಈ ಗುಣವು ಇತರ ಬೌಲರ್‌ಗಳಿಗಿಂತ ಅವರು ಭಿನ್ನ ಎಂಬುದನ್ನು ಸಾಬೀತುಪಡಿಸಿತ್ತು. ಅವರು ಎಂದಿಗೂ ರಕ್ಷಣಾತ್ಮಕ ಬೌಲರ್ ಆಗಿರಲಿಲ್ಲ. ಪ್ರತಿ ಬಾರಿಯೂ ಚೆಂಡನ್ನು ತಿರುಗಿಸುತ್ತಿದ್ದರು. ಅದು ಕೆಂಪು ಅಥವಾ ಬಿಳಿ ಚೆಂಡಿನ ಸ್ವರೂಪವಾಗಿರಬಹುದು. ಬ್ಯಾಟ್ಸ್‌ಮನ್‌ಗಳನ್ನುಅ ವರು ಚೆನ್ನಾಗಿ ಊಹಿಸುತ್ತಿದ್ದರು. ನನ್ನ ಪ್ರಕಾರ, ಅಶ್ವಿನ್ ಅವರ ಶಕ್ತಿಯೆಂದರೆ ಅವರು ಆಕ್ರಮಣಕಾರಿ ಬೌಲಿಂಗ್, "ಎಂದು ಜೋಶಿ ಹೇಳಿದರು.
ಅಶ್ವಿನ್ ಅವರ ಬೌಲಿಂಗ್ ಶಕ್ತಿಗೆ ಸರಿಸಾಟಿಯೇ ಇಲ್ಲ. ಆಟದ ರಣತಂತ್ರ ರೂಪಿಸುವಲ್ಲೂ ನಿಸ್ಸಿಮರು. ಪ್ರತಿ ಎಸೆತವನ್ನೂ ವಿಕೆಟ್ ಪಡೆಯುವ ಉದ್ದೇಶದಿಂದ ಎಸೆದವರು. ಅಶ್ವಿನ್ ರನ್ ನೀಡದ ರಕ್ಷಣಾತ್ಮಕ ಬೌಲರ್ ಆಗಿರಲಿಲ್ಲ. ಅವರ ಬೌಲಿಂಗ್‌ನಲ್ಲಿ ಪಕ್ವತೆ ಇತ್ತು,” ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ವಾಷಿಂಗ್ಟನ್ ಸುಂದರ್‌ಗೆ ಬೆಳೆಯಲು ಅವಕಾಶ ನೀಡಿ
ಅಶ್ವಿನ್ ಅವರ ಕ್ರಿಕೆಟ್ ಪ್ರಯಾಣವು ಕೊನೆಗೊಂಡಿಲ್ಲ. ಮುಂದಿನ ಋತುವಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಕಾಣಿಸಿಕೊಳ್ಳುವುದನ್ನು ಮುಂದುವರಿಸಲಿದ್ದಾರೆ. ನಿವೃತ್ತಿಯ ನಂತರ ಪಂದ್ಯಾವಳಿಯಲ್ಲಿ ಆಡುವುದು ಅವರಿಗೆ ಸವಾಲಿನವ ಸಂಗತಿ ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.
"ಐಪಿಎಲ್ 2025ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಶ್ವಿನ್ ಅವರೂ ತಂಡಕ್ಕೆ ಸೇವೆ ನೀಡಲು ಉತ್ಸುಕರಾಗಿದ್ದಾರೆ. ಆದಾಗ್ಯೂ, ಅವರು ಆಟದ ಇತರ ಸ್ವರೂಪಗಳನ್ನು ಆಡದ ಕಾರಣ ಅವರಿಗೆ ಅದು ಸುಲಭವಲ್ಲ. ಐಪಿಎಲ್‌ನಲ್ಲಿ ಮಾತ್ರ ಆಡುವುದು ಅವರಿಗೆ ಸವಾಲಿನ ಸಂಗತಿ, "ಎಂದು ಅವರು ಅಭಿಪ್ರಾಯಪಟ್ಟರು.
ಅಶ್ವಿನ್ ಅವರ ನಿವೃತ್ತಿಯು ತಮಿಳುನಾಡಿನ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರಿಗೆ ಟೆಸ್ಟ್‌ನಲ್ಲಿ ಅವಕಾಶದ ಬಾಗಿಲು ತೆರೆದಿದೆ. ಅವರು ರವೀಂದ್ರ ಜಡೇಜಾ ಅವರ ಹೊಸ ಪಾಲುದಾರರಾಗಬಹುದು
ಹರ್ಭಜನ್ ಸಿಂಗ್ ಮತ್ತು ಇತರರು. ಅಶ್ವಿನ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರಯಾಣ ಪ್ರಾರಂಭಿಸಿದಾಗ ಮಾರ್ಗದರ್ಶನ ನೀಡಿದ್ದರು. ಅಂತೆಯೇ ಸುಂದರ್‌ಗೆ ಕೂಡ ಬೆಳೆಯಲು ಸಮಯ ನೀಡಬೇಕು ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.
"ಹೊಸ ಕ್ರಿಕೆಟಿಗನಿಗೆ ಬೆಳೆಯಲು ಅವಕಾಶ ನೀಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಅಶ್ವಿನ್ ಬಂದಾಗ ಹರ್ಭಜನ್ ತಂಡದಲ್ಲಿದ್ದರು. ಅಶ್ವಿನ್‌ಗೆ ಅವರು ಮಾರ್ಗದರ್ಶನ ನೀಡಿದ್ದರು. ಅಂತೆಯೇ, ವಾಶಿ (ವಾಷಿಂಗ್ಟನ್ ಸುಂದರ್) ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ನಿಯೋಗದಲ್ಲಿದ್ದಾರೆ. ಕಳೆದ ಟೆಸ್ಟ್ ಸರಣಿಯಲ್ಲಿ (ನ್ಯೂಜಿಲೆಂಡ್ ವಿರುದ್ಧ) ತವರಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ, ಅವರಿಗೆ ಕೋಚ್ ಮತ್ತು ನಾಯಕನ ವಿಶ್ವಾಸ ಮತ್ತು ಬೆಂಬಲಬೇಕಾಗಿದೆ. ಕ್ರಿಕೆಟಿಗನಾಗಿ ಬೆಳೆಯಲು ಮತ್ತು ಪಕ್ವಗೊಳ್ಳಲು ಅವಕಾಶ ನೀಡಬೇಕಾಗಿದೆ. ಅವರು ಈಗ ದೇಶದ ಅಗ್ರ ಸ್ಪಿನ್ನರ್‌ಗಳಲ್ಲಿ ಒಬ್ಬರು. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ, "ಎಂದು ಜೋಶಿ ಹೇಳಿದ್ದಾರೆ.