IPL auction : ಐಪಿಎಲ್ ಬಿಡ್‌ನಲ್ಲಿ ದಾಖಲೆ ಸೃಷ್ಟಿಸಿದ ಪಂತ್; 27 ಕೋಟಿ ರೂಪಾಯಿಗೆ ಲಕ್ನೊಗೆ ಸೇಲ್
ರಿಷಭ್ ದೊಡ್ಡ ಮೊತ್ತ ಪಡೆಯುವ ಸ್ವಲ್ಪ ಮೊದಲು ಶ್ರೇಯಸ್ ಅಯ್ಯರ್ ಪಂಜಾಬ್ ತಂಡಕ್ಕೆ 26. 75 ಕೋಟಿ ರೂಪಾಯಿಗೆ ಮಾರಾಟವಾಗಿದ್ದರು. ಈ ವೇಳೆಯೂ ಹೊಸ ದಾಖಲೆಯೊಂದು ಸೃಷ್ಟಿಯಾಗಿತ್ತು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜು ಪ್ರಕ್ರಿಯಲ್ಲಿ ಭಾನುವಾರ ಎರಡೆರಡು ದಾಖಲೆಗಳು ಸೃಷ್ಟಿಯಾಗಿದೆ. 27 ಕೋಟಿ ರೂಪಾಯಿಗಳನ್ನು ಪಡೆದುಕೊಂಡು ಲಕ್ನೊ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಐಪಿಎಲ್ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದ. ಸೋಮವಾರವೂ ಮುಂದುವರಿಯಲಿದೆ.
ರಿಷಭ್ ದೊಡ್ಡ ಮೊತ್ತ ಪಡೆಯುವ ಸ್ವಲ್ಪ ಮೊದಲು ಶ್ರೇಯಸ್ ಅಯ್ಯರ್ ಪಂಜಾಬ್ ತಂಡಕ್ಕೆ 26. 75 ಕೋಟಿ ರೂಪಾಯಿಗೆ ಮಾರಾಟವಾಗಿದ್ದರು. ಈ ವೇಳೆಯೂ ಹೊಸ ದಾಖಲೆಯೊಂದು ಸೃಷ್ಟಿಯಾಗಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ದಾಖಲೆಯನ್ನು ಪಂತ್ ಮುರಿದರು.
ಆಟಗಾರರ ಮಾರಾಟದಲ್ಲಿ ಪಂಜಾಬ್ ಕಿಂಗ್ಸ್ ತಂಡ ಸೇರಿಕೊಂಡಿರುವ ಶ್ರೇಯಸ್ ಅಯ್ಯರ್ ಕಳೆದ ವರ್ಷ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು (24.75 ಕೋಟಿ ರೂ.) ಮುರಿದರು. ಸ್ಟಾರ್ಕ್ ಕಳೆದ ಬಾರಿ ಕೋಲ್ಕೊತಾ ತಂಡ ಸೇರಿಕೊಂಡಿದ್ದರು.
ರಿಷಭ್ ಅವರನ್ನು ಕೆಲವೇ ತಿಂಗಳ ಹಿಂದೆ ಕೈ ಬಿಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹರಾಜಿನಲ್ಲಿ ಜಿದ್ದಿಗೆ ನಿಂತಿತು. ಲಕ್ನೊತಂಡಕ್ಕೆ ಸವಾಲು ಎಸೆಯಿತು. 20.75 ಕೋಟಿ ರೂಪಾಯಿಗೆ ʼರೈಟ್ ಟು ಮ್ಯಾಚ್ ಕಾರ್ಡ್ʼ ಬಳಸಿತು. ಆದರೆ, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಅದರ ಮಾಲೀಕ ಸಂಜೀವ್ ಗೋಯೆಂಕಾ ಪಂತ್ ಅವರನ್ನು 27 ಕೋಟಿ ರೂ.ಗೆ ಬಿಡ್ ಮಾಡಿತು. ಏತನ್ಮಧ್ಯೆ ಲಕ್ನೊ ತಂಡವನ್ನು ಮೂರು ವರ್ಷ ಮುನ್ನಡೆಸಿದ್ದ ಕೆ. ಎಲ್ ರಾಹುಲ್ ಈ ಬಾರಿ 14 ಕೋಟಿ ರೂಪಾಯಿ ಜೇಬಿಗಿಳಿಸಿ ಡೆಲ್ಲಿ ತಂಡ ಸೇರಿದ್ದಾರೆ. ಅವರು ಆ ತಂಡಕ್ಕೆ ನಾಯಕರಾಗುವುದು ಬಹುತೇಕ ಖಚಿತ.
ಅರ್ಶ್‌ದೀಪ್‌ಗೆ 18 ಕೋಟಿ ರೂಪಾಯಿ
ಬಿಡ್ ಆರಂಭದಲ್ಲಿಯೇ ಅರ್ಶ್‌ದೀಪ್ ಸಿಂಗ್ ಪಂಜಾಬ್ ತಂಡದ ಜತೆ ಒಪ್ಪಂದ ಮಾಡಿಕೊಂಡರು. ಅದಕ್ಕಾಗಿ ಅವರು 18 ಕೋಟಿ ರೂಪಾಯಿ ಪಡೆದುಕೊಂಡರು. ಏತನ್ಮಧ್ಯೆ ಕಳೆದ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದುಕೊಂಡಿದ್ದ ಸ್ಟಾರ್ಕ್ ಈ ಬಾರಿ 11.75 ಕೋಟಿ ರೂಪಾಯಿಗೆ ಡೆಲ್ಲಿ ತಂಡ ಸೇರಿಕೊಂಡರು. ಈ ಮೂಲಕ ಅವರ ಬೆಲೆ ಅರ್ಧಕ್ಕಿಂತಲೂ ಕಡಿಮೆ ಆಯಿತು.
ಇಂಗ್ಲೆಂಡ್ ವೇಗಿ ಕಗಿಸೋ ರಬಾಡ 10.75 ಕೋಟಿ ರೂಪಾಯಿ ಬಿಡ್ ಮೂಲಕ ಗುಜರಾತ್ ಟೈಟಾನ್ಸ್ ತಂಡ ಸೇರಿಕೊಂಡರು. ಕಳೆದ ಕೆಲವು ಆವೃತ್ತಿಯಲ್ಲಿ ರಾಜಸ್ಥಾನ್ ತಂಡ ಬ್ಯಾಟಿಂಗ್ ಬೆನ್ನೆಲುಬು ಆಗಿದ್ದ ಜೋಸ್ ಬಟ್ಲರ್ 15.75 ಕೋಟಿ ರೂಪಾಯಿ ಪಡೆದು ಗುಜರಾತ್ ತಂಡ ಸೇರಿಕೊಂಡಿದ್ದಾರೆ. ಗುಜರಾತ್ ತಂಡದಲ್ಲಿ ಕಳೆದ ಬಾರಿ ಆಡಿದ್ದ ಭಾರತದ ವೇಗಿ ಮೊಹಮ್ಮದ್ ಶಮಿ 10 ಕೋಟಿ ರೂಪಾಯಿ ಬೆಲೆಯೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್ ಹಾಗೂ ಆಪತ್ಬಾಂಧವ ಡೇವಿಡ್ ಮಿಲ್ಲರ್ 7.50 ಕೋಟಿ ರೂಪಾಯಿ ಪಡೆದು ಲಕ್ನೋ ತಂಡದ ಸದಸ್ಯರಾದರು.
ಯಜ್ವೇಂದ್ರ ಗರಿಷ್ಠ ಮೊತ್ತ ಪಡೆದ ಸ್ಪಿನ್ನರ್
ಹಲವು ವರ್ಷ ಆರ್‌ಸಿಬಿ ಮತ್ತು ಕಳೆದ ಮೂರು ಆವೃತ್ತಿಗಳಲ್ಲಿ ರಾಜಸ್ಥಾನ್ ತಂಡದಲ್ಲಿದ್ದ ಮಣಿಕಟ್ಟು ಸ್ಪಿನ್ನರ್ ಯಜುವೇಂದ್ರ ಚಹಲ್ 18 ಕೋಟಿ ರೂಪಾಯಿ ಪಡೆದು ಪಂಜಾಬ್ ತಂಡ ಸೇರಿದ್ದಾರೆ. ಇದು ಕೂಡ ಸ್ಪಿನ್ ಬೌಲರ್ ಪಾಲಿಗೆ ದಾಖಲೆ. ಐಪಿಎಲ್ ಇತಿಹಾಸದಲ್ಲಿ ಸ್ಪಿನ್ ಬೌಲರ್ ಇಷ್ಟೊಂದು ಮೊತ್ತ ಪಡೆದಿರುವುದು ಇದೇ ಮೊದಲು.
ಇನ್ನು ಆರ್‌ಸಿಬಿ ಅವಿಭಾಜ್ಯ ಅಂಗವಾಗಿದ್ದ ಮೊಹಮ್ಮದ್ ಸಿರಾಜ್ ಈ ಬಾರಿ ಗುಜರಾತ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ ಅವರು. 12.25 ಕೋಟಿ ರೂಪಾಯಿ ಪಡೆದಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟನ್ 8.75 ಕೋಟಿ ರೂಪಾಯಿ ಮೊತ್ತದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಮೊದಲ ದಿನ ದೊಡ್ಡ ಬಿಡ್‌ಗಳ ವಿವರ ಇಲ್ಲಿದೆ
- ರಿಷಭ್ ಪಂತ್ (27 ಕೋಟಿ ರೂ.) - ಲಕ್ನೋ ಸೂಪರ್ ಜೈಂಟ್ಸ್
- ಶ್ರೇಯಸ್ ಅಯ್ಯರ್ (26.75 ಕೋಟಿ ರೂ.) - ಪಂಜಾಬ್ ಕಿಂಗ್ಸ್
- ಅರ್ಶದೀಪ್ ಸಿಂಗ್ (18 ಕೋಟಿ ರೂ.) - ಪಂಜಾಬ್ ಕಿಂಗ್ಸ್
- ಯಜುವೇಂದ್ರ ಚಾಹಲ್ (18 ಕೋಟಿ ರೂ.) - ಪಂಜಾಬ್ ಕಿಂಗ್ಸ್
- ಕಗಿಸೊ ರಬಾಡ (10.75 ಕೋಟಿ ರೂ.) - ಗುಜರಾತ್ ಟೈಟಾನ್ಸ್ )
- ಜೋಸ್ ಬಟ್ಲರ್ (15.75 ಕೋಟಿ ರೂ.) - ಗುಜರಾತ್ ಟೈಟಾನ್ಸ್
- ಮಿಚೆಲ್ ಸ್ಟಾರ್ಕ್ (11.75 ಕೋಟಿ ರೂ.) - ಡೆಲ್ಲಿ ಕ್ಯಾಪಿಟಲ್ಸ್
- ಮೊಹಮ್ಮದ್ ಶಮಿ (10 ಕೋಟಿ ರೂ.) - ಸನ್ರೈಸರ್ಸ್ ಹೈದರಾಬಾದ್
- ಡೇವಿಡ್ ಮಿಲ್ಲರ್ (7.50 ಕೋಟಿ ರೂ.) - ಲಕ್ನೋ ಸೂಪರ್ ಜೈಂಟ್ಸ್
- ಮೊಹಮ್ಮದ್ ಸಿರಾಜ್ (12.25 ಕೋಟಿ ರೂ.) - ಗುಜರಾತ್ ಟೈಟಾನ್ಸ್
- ಲಿಯಾಮ್ ಲಿವಿಂಗ್‌ಸ್ಟನ್ (8.75 ಕೋಟಿ ರೂ.) - ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಕೆಎಲ್ ರಾಹುಲ್ (14 ಕೋಟಿ ರೂ.) - ಡೆಲ್ಲಿ ಕ್ಯಾಪಿಟಲ್ಸ್