ನವದೆಹಲಿ, ಫೆ. 13: ದೇಶದ ಹಿರಿಯ ಟೆಸ್ಟ್ ಕ್ರಿಕೆಟಿಗ ಮತ್ತು ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್(95) ಅವರು ವಯೋಸಹಜ ಕಾಯಿಲೆಗಳಿಂದ ಮಂಗಳವಾರ ನಿಧನರಾದರು.
ಮಾಜಿ ಆರಂಭ ಆಟಗಾರ ಮತ್ತು ರಾಷ್ಟ್ರೀಯ ಕೋಚ್ ಅನ್ಷುಮನ್ ಗಾಯಕ್ವಾಡ್ ಅವರ ತಂದೆಯಾದ ದತ್ತಾಜಿರಾವ್ ಅವರು 12 ದಿನಗಳಿಂದ ಬರೋಡಾ ಆಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.
ಈ ಬಲಗೈ ಆಟಗಾರ 1952-1961 ರ ಅವಧಿಯಲ್ಲಿ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1959ರಲ್ಲಿ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ತಂಡದ ನಾಯಕರಾಗಿದ್ದರು. 1952 ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಮತ್ತು 1961ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧ ಅಂತಿಮ ಪಂದ್ಯ ಆಡಿದ್ದರು. ರಣಜಿ ಟ್ರೋಫಿಯಲ್ಲಿ 1947 ರಿಂದ 1961 ರವರೆಗೆ ಬರೋಡಾವನ್ನು ಪ್ರತಿನಿಧಿಸಿದರು. 14 ಶತಕ ಒಳಗೊಂಡಂತೆ 47.56 ರ ಸರಾಸರಿಯಲ್ಲಿ 3,139 ರನ್ ಗಳಿಸಿದರು. 1959-60ರಲ್ಲಿ ಮಹಾರಾಷ್ಟ್ರ ವಿರುದ್ಧ ಔಟಾಗದೆ 249 ರನ್ ಗಳಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು.