ದುಬೈನಲ್ಲಿ ಏಕ ದಿನ ಮಾದರಿಯ ವಿಶೇಷ ಸಾಧನೆ ಮಾಡಲಿದ್ದಾರೆ ವಿರಾಟ್​ ಕೊಹ್ಲಿ

ಚಾಂಪಿಯನ್ಸ್ ಟ್ರೋಫಿಯಲ್ಲಿ ಎ ಗುಂಪಿನಲ್ಲಿ ಯಾರು ಅಗ್ರಸ್ಥಾನ ಪಡೆಯುತ್ತಾರೆ ಎಂಬುದನ್ನು ಭಾನುವಾರದ ಪಂದ್ಯ ನಿರ್ಧರಿಸಲಿದೆ. ಭಾರತ ಮತ್ತು ನ್ಯೂಜಿಲೆಂಡ್ ಎರಡೂ ಲೀಗ್ ಹಂತದಲ್ಲಿ ತಲಾ ಎರಡು ಗೆಲುವುಗಳೊಂದಿಗೆ ಅಜೇಯವಾಗಿವೆ.;

Update: 2025-03-01 11:56 GMT

ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಸಜ್ಜಾಗಿರುವ ವಿರಾಟ್​ ಕೊಹ್ಲಿ

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಗ್ರೂಪ್ ಎ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಾನುವಾರ (ಮಾರ್ಚ್ 2) ದುಬೈನಲ್ಲಿ ತಮ್ಮ 300ನೇ ಏಕದಿನ ಪಂದ್ಯವನ್ನು ಆಡಲಿದ್ದಾರೆ. ದುಬೈ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಏಳನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಸಚಿನ್ ತೆಂಡೂಲ್ಕರ್ (463), ಎಂಎಸ್ ಧೋನಿ (350), ರಾಹುಲ್ ದ್ರಾವಿಡ್ (344), ಮೊಹಮ್ಮದ್ ಅಜರುದ್ದೀನ್ (334), ಸೌರವ್ ಗಂಗೂಲಿ (311) ಮತ್ತು ಯುವರಾಜ್ ಸಿಂಗ್ (304).

ಎಲೈಟ್ ಪಟ್ಟಿಯಲ್ಲಿ 7ನೇ ಭಾರತೀಯ

ಒಟ್ಟಾರೆಯಾಗಿ, ಕೊಹ್ಲಿ ಏಕದಿನ ಇತಿಹಾಸದಲ್ಲಿ ಈ ಮೈಲಿಗಲ್ಲನ್ನು ತಲುಪಿದ 22 ನೇ ಆಟಗಾರನಾಗಲಿದ್ದಾರೆ. ಕೊಹ್ಲಿ 299 ಏಕದಿನ ಪಂದ್ಯಗಳಲ್ಲಿ 14,085 ರನ್ ಗಳಿಸಿದ್ದಾರೆ.

2008ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. 50 ಓವರ್​ಗಳ ಸ್ವರೂಪದಲ್ಲಿ ಕ್ರಿಕೆಟ್​ ದಂತಕಥೆ ಎನಿಸಿಕೊಂಡಿದ್ದಾರೆ. ಕಳೆದ ಭಾನುವಾರ (ಫೆಬ್ರವರಿ 23) ಅವರು ದುಬೈನಲ್ಲಿ ಪಾಕಿಸ್ತಾನ ವಿರುದ್ಧ 51 ನೇ ಏಕದಿನ ಶತಕವನ್ನೂ ಪಾಕಿಸ್ತಾನದ ವಿರುದ್ಧ ಬಾರಿಸಿದ್ದರು. ಇದೇ ವೇಳೆ ಕೊಹ್ಲಿ ಏಕದಿನ ಕ್ರಿಕೆಟ್​​ನಲ್ಲಿ 14,000 ರನ್ ಪೂರೈಸಿದ್ದರು.

ಕೊಹ್ಲಿ 8,000, 9,000, 10,000, 11,000, 12,000 ಮತ್ತು 13,000 ಏಕದಿನ ರನ್​ಗಳನ್ನೂ ಅತಿವೇಗದಲ್ಲಿ ಸಾಧಿಸಿದವರು.

ಕೆ. ಎಲ್​ ರಾಹುಲ್ ಪ್ರತಿಕ್ರಿಯೆ

300 ನೇ ಏಕದಿನ ಪಂದ್ಯದ ಬಗ್ಗೆ, ತಂಡದ ಸಹ ಆಟಗಾರ ಕೆಎಲ್ ರಾಹುಲ್ ಶುಕ್ರವಾರ (ಫೆಬ್ರವರಿ 28) ಮಾಧ್ಯಮಗಳೊಂದಿಗೆ ಮಾತನಾಡಿ "300 ಪಂದ್ಯಗಳು ಅವರು ಎಷ್ಟು ಉತ್ತಮ ಆಟಗಾರ ಎಂಬುದನ್ನು ಸಾಬೀತುಪಡಿಸಿದೆ. ಭಾರತೀಯ ಕ್ರಿಕೆಟ್​​ನ ಶ್ರೇಷ್ಠ ಪ್ರತಿಭೆ ಎಂದು ಹೇಳುವುದಕ್ಕೆ ಪದಗಳು ಕಡಿಮೆ,"ಎಂದು ಹೇಳಿದ್ದಾರೆ.

"ಕಳೆದ ಪಂದ್ಯದಲ್ಲೂ ಅವರು ಶತಕ ಗಳಿಸಿರುವುದನ್ನು ನೋಡಿ ನಿಜವಾಗಿಯೂ ಸಂತೋಷವಾಗಿದೆ. ಅವರು ನಿಜವಾಗಿಯೂ ಉತ್ತಮ ಬ್ಯಾಟರ್​. ಅವರಿಗೆ ದೊಡ್ಡ ಮತ್ತು ಪಂದ್ಯವನ್ನು ಗೆಲ್ಲುವ ಶತಕವನ್ನು ಗಳಿಸುವ ಎಲ್ಲ ಸಾಮರ್ಥ್ಯವಿದೆ, ಎಂದು ಹೇಳಿದ್ದಾರೆ.

ಸೆಮಿಫೈನಲ್​​ನಲ್ಲಿ ಭಾರತಕ್ಕೆ ಎದುರಾಳಿ ಯಾರು?

ಎ ಗುಂಪಿನಲ್ಲಿ ಯಾವ ತಂಡ ಅಗ್ರಸ್ಥಾನ ಪಡೆಯುತ್ತದೆ ಎಂಬುದನ್ನು ಭಾನುವಾರದ ಪಂದ್ಯ ನಿರ್ಧರಿಸಲಿದೆ. ಭಾರತ ಮತ್ತು ನ್ಯೂಜಿಲೆಂಡ್ ಎರಡೂ ಲೀಗ್ ಹಂತದಲ್ಲಿ ತಲಾ ಎರಡು ಗೆಲುವುಗಳೊಂದಿಗೆ ಅಜೇಯವಾಗಿವೆ ಮತ್ತು ಈಗಾಗಲೇ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್​​ಗೆ ಅರ್ಹತೆ ಪಡೆದಿವೆ.

ಮಂಗಳವಾರ (ಮಾರ್ಚ್ 4) ದುಬೈನಲ್ಲಿ ನಡೆಯಲಿರುವ ಅಂತಿಮ ನಾಲ್ಕರ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಅಥವಾ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಎಂಟು ತಂಡಗಳ ಪಂದ್ಯಾವಳಿಯ ಆತಿಥ್ಯ ವಹಿಸಿರುವ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ರೋಹಿತ್ ಶರ್ಮಾ ನೇತೃತ್ವದ ತಂಡವು ತಮ್ಮ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ.

Tags:    

Similar News