ಏಕ ದಿನ ಪಂದ್ಯದಲ್ಲಿ 435 ರನ್‌ : ಭಾರತ ವನಿತೆಯರ ತಂಡದ ಅಮೋಘ ಸಾಧನೆ

ಭಾರತ ಪುರುಷರ ತಂಡವು 2011ರಲ್ಲಿ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ್ದ 418/5 ರನ್‌ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.;

Update: 2025-01-15 10:05 GMT
ಸ್ಮೃತಿ ಮಂಧಾನ

ಭಾರತದ ಮಹಿಳೆಯರ ತಂಡ (Indian Women's Cricket Team) ಇತ್ತೀಚಿನ ಆಟವೇ ಅಮೋಘ. ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ ವನಿತೆಯರು. ಅಂತೆಯೇ ಇದೀಗ ಐರ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಪಂದ್ಯದಲ್ಲಿ 5 ವಿಕೆಟ್‌ ನಷ್ಟಕ್ಕೆ ಭರ್ಜರಿ 435 ರನ್‌ ಮಾಡಿ ಭಾರತ ಪರ ಏಕ ದಿನ ಮಾದರಿಯಲ್ಲಿ ಗರಿಷ್ಠ ರನ್‌ ಬಾರಿಸಿದ ದಾಖಲೆ ನಿರ್ಮಿಸಿದ್ದಾರೆ.

ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಸರಣಿಯ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡ ಈ ರನ್‌ ಶಿಖರ ನಿರ್ಮಿಸಿತು. ಇದು ವನಿತೆಯರ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ನಾಲ್ಕನೇ ಅತಿ ದೊಡ್ಡ ಮೊತ್ತವಾಗಿದೆ.

ಭಾರತದ ಏಕದಿನ ಕ್ರಿಕೆಟ್‌ (ಪುರುಷರು ಮತ್ತು ಮಹಿಳೆಯರು) ಇತಿಹಾಸದಲ್ಲೇ ಇದು ಅತ್ಯಧಿಕ ರನ್‌. ಭಾರತ ಪುರುಷರ ತಂಡವು 2011ರಲ್ಲಿ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ್ದ 418/5 ರನ್‌ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ ಪುರುಷರಿಗಿಂತ ಮಹಿಳೆಯರೇ ಬಲಿಷ್ಠ ಎಂಬಂತಾಗಿದೆ.

ಪಂದ್ಯದಲ್ಲಿ ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್‌ ಮೊದಲ ವಿಕೆಟ್‌ಗೆ ಭರ್ಜರಿ 233 ರನ್‌ ಕಲೆ ಹಾಕಿದರು. ಇಬ್ಬರೂ ಶತಕ ಸಿಡಿಸಿ ಮಿಂಚಿದರು. 2024ರ ಆರಂಭದಿಂದಲೂ ಪ್ರಚಂಡ ಫಾರ್ಮ್‌ನಲ್ಲಿರುವ ಸ್ಮೃತಿ ಮಂಧಾನ, ತಮ್ಮ ಭರ್ಜರಿ ಪ್ರಭಾವ ಮುಂದುವರಿಸಿದರು.

ಸ್ಮೃತಿ ಏಕದಿನ ಪಂದ್ಯದಲ್ಲಿ ವೇಗದ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಕೇವಲ 70 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಆರಂಭಿಕ ಆಟಗಾರ್ತಿ, 135 ರನ್‌ ಗಳಿಸಿ ಔಟಾದರು. ಇದರಲ್ಲಿ 7 ಸ್ಫೋಟಕ ಸಿಕ್ಸರ್‌ ಕೂಡಾ ಸೇರಿಕೊಂಡಿವೆ. . ವನಿತೆಯರ ಕ್ರಿಕೆಟ್‌ನಲ್ಲಿ ಭಾರತದ ಪರ ಇದು ವೇಗದ ಶತಕ . ಏಕದಿನ ಕ್ರಿಕೆಟ್‌ನಲ್ಲಿ 10ನೇ ಶತಕ ಸಿಡಿಸಿದ ಮಂಧನಾ, ಈ ಸ್ವರೂಪದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನ ಪಡೆದರು.

ಪ್ರತಿಕಾ ರಾವಲ್‌ ಚೊಚ್ಚಲ ಶತಕ

ಯುವ ಪ್ರತಿಭೆ ಪ್ರತಿಕಾ ರಾವಲ್‌ ಚೊಚ್ಚಲ ಏಕದಿನ ಶತಕ ಸಿಡಿಸಿದರು. ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು, ಅಂತಿಮ ಪಂದ್ಯದಲ್ಲಿ 129 ಎಸೆತಗಳಲ್ಲಿ 154 ರನ್‌ ಪೇರಿಸಿದರು. ಸ್ಮೃತಿ ಔಟಾದ ಬಳಿಕ ರಿಚಾ ಘೋಷ್‌ ಜೊತೆಗೂಡಿ ಉತ್ತಮ ರನ್‌ ಶಿಖರ ನಿರ್ಮಿಸಿದರು. . ಇವರಿಬ್ಬರೂ ಎರಡನೇ ವಿಕೆಟ್‌ಗೆ 104 ರನ್‌ ಕಲೆ ಹಾಕಿದರು.

ರಿಚಾ 59 ರನ್‌ ಗಳಿಸಿದರೆ, ತೇಜಲ್‌ ಹಸಬ್ನಿಸ್‌ 28 ರನ್‌ ಪೇರಿಸಿದರು. ದೊಡ್ಡ ಹೊಡೆತಕ್ಕೆ ಕೈ ಹಾಕಿದ ಹರ್ಲೀನ್‌ ಡಿಯೋಲ್‌ 15 ರನ್‌ ಗಳಿಸಿ ಔಟಾದರು.

ವನಿತೆಯರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ

ನ್ಯೂಜಿಲೆಂಡ್‌ - 491/4, ಐರ್ಲೆಂಡ್‌ ವಿರುದ್ಧ (2018)

ನ್ಯೂಜಿಲೆಂಡ್‌ - 455/5, ಪಾಕಿಸ್ತಾನ ವಿರುದ್ಧ (1997)

ನ್ಯೂಜಿಲೆಂಡ್‌ - 440/3, ಐರ್ಲೆಂಡ್‌ ವಿರುದ್ಧ (2018)

ಭಾರತ - 435/5, ಐರ್ಲೆಂಡ್‌ ವಿರುದ್ಧ (2025)

Tags:    

Similar News