U19 Womens T20 World Cup : ಸತತ 2ನೇ ಬಾರಿ ವಿಶ್ವ ಕಪ್ ಎತ್ತಿ ಹಿಡಿದ ಭಾರತದ ವನಿತೆಯರು
U19 Womens T20 World Cup : 2024ರಲ್ಲಿ ನಡೆದಿದ್ದ ಹಿರಿಯ ಪುರುಷರ ಟಿ20 ವಿಶ್ವ ಕಪ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನೇ ಸೋಲಿಸಿ ಟ್ರೋಫಿ ಗೆದ್ದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.;
ಭಾರತ 19ರ ವಯೋಮಿತಿಯ ವನಿತೆಯರ ತಂಡವು ಐಸಿಸಿ 19 ವರ್ಷದೊಳಗಿನ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ ಈ ಮೂಲಕ 'ವಿಮೆನ್ ಇನ್ ಬ್ಲ್ಯೂ' ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಹಿಂದಿನ ಆವೃತ್ತಿಯ ವಿಶ್ವ ಕಪ್‌ನಲ್ಲಿ ಭಾರತವೇ ಟ್ರೋಫಿ ಗೆದ್ದುಕೊಂಡಿತ್ತು.
2024ರಲ್ಲಿ ನಡೆದಿದ್ದ ಹಿರಿಯ ಪುರುಷರ ಟಿ20 ವಿಶ್ವ ಕಪ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನೇ ಸೋಲಿಸಿ ಟ್ರೋಫಿ ಗೆದ್ದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. 83 ರನ್‌ಗಳ ಸಣ್ಣ ಮೊತ್ತದ ಗೆಲುವಿನ ಗುರಿ ಬೆನ್ನಟ್ಟಿದ ಭಾರತ 11.2 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ವಿಜಯ ಮಾಲೆಯನ್ನು ಹಾಕಿಕೊಂಡಿತು.
ಭಾರತ ತಂಡವನ್ನು ಕರ್ನಾಟಕದ ಆಟಗಾರ್ತಿ ನಿಕಿ ಪ್ರಸಾದ್ ಮುನ್ನಡೆಸಿದ್ದರು. ಹೀಗಾಗಿ ಕನ್ನಡಿಗರ ಪಾಲಿಗೂ ಇದು ಸಂಭ್ರಮದ ವಿಚಾರ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ಭಾರತದ ವನಿತೆಯರ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 82 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ತ್ರಿಷಾ ಗೊಂಗಡಿ 3 ಮತ್ತು ವೈಷ್ಣವಿ ಶರ್ಮಾ, ಆಯುಷಿ ಶುಕ್ಲಾ ಮತ್ತು ಪಾರುಣಿಕ ಸಿಸೋಡಿಯಾ ತಲಾ 2 ವಿಕೆಟ್‌ಗಳನ್ನುಉರುಳಿಸಿದರು.
ಸುಲಭ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲಿ ಆತಂಕ ಎದುರಿಸಿತು. ಜಿ. ಕಮಲಿನಿ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ಸನಿಕ ಚಾಲ್ಕೆ ಜೊತೆ ಸೇರಿಕೊಂಡ ತ್ರಿಷಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ತೃಷಾ 33 ಎಸೆತಗಳಲ್ಲಿ 44 ರನ್ (8 ಬೌಂಡರಿ) ಗಳಿಸಿ ಔಟಾಗದೆ ಉಳಿದರು. ಸನಿಕ ಚಾಲ್ಕೆ ಅಜೇಯ 26 ರನ್ ಗಳಿಸಿದರು.
ಒಂದೂ ಪಂದ್ಯದಲ್ಲೂ ಸೋಲು ಕಾಣದೇ ಭಾರತ ಕಿರೀಟ ಜಯಿಸಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿತ್ತು ಹಾಗೂ ರನ್ನರ್ ಅಪ್‌ಗೆ ತೃಪ್ತಿಪಡುವಂತಾಯಿತು.