ಇಂಗ್ಲೆಂಡ್ ಸರಣಿಗೆ ಭಾರತ ಟೆಸ್ಟ್ ತಂಡ ಪ್ರಕಟ: ಗಿಲ್ ನಾಯಕ, ಪಂತ್‌ಗೆ ಉಪನಾಯಕನ ಜವಾಬ್ದಾರಿ

ಮುಂಬೈನಲ್ಲಿ ಅಜಿತ್‌ ಅಗರ್ಕರ್‌ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಶುಭಮನ್‌ ಗಿಲ್‌ ಅವರನ್ನು ಭಾರತ ಟೆಸ್ಟ್‌ ತಂಡದ 37ನೇ ನಾಯಕರನ್ನಾಗಿ ಅಧಿಕೃತವಾಗಿ ನೇಮಿಸಿತು.;

Update: 2025-05-24 09:23 GMT

ಮುಂಬರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಮಹತ್ವದ ಟೆಸ್ಟ್‌ ಸರಣಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ 18 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದೆ. ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಅವರಿಗೆ ನಾಯಕತ್ವದ ಹೊಣೆ ನೀಡಲಾಗಿದ್ದು, ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇತ್ತೀಚೆಗೆ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಹಿನ್ನೆಲೆಯಲ್ಲಿ, ತೆರವಾದ ನಾಯಕನ ಸ್ಥಾನಕ್ಕೆ ಬಿಸಿಸಿಐ ಗಿಲ್ ಅವರನ್ನು ಆಯ್ಕೆ ಮಾಡಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಮೊದಲ ಎರಡು ಆವೃತ್ತಿಗಳಲ್ಲಿ ಫೈನಲ್‌ ತಲುಪಿದ್ದ ಭಾರತ, ಮೂರನೇ ಆವೃತ್ತಿಯಲ್ಲಿ ಅಂತಿಮ ಹಂತಕ್ಕೇರಲು ವಿಫಲವಾಗಿತ್ತು. ಕಳೆದ ವರ್ಷ ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋಲುಗಳು ತಂಡಕ್ಕೆ ಹಿನ್ನಡೆ ಉಂಟುಮಾಡಿದ್ದವು.

ಗಿಲ್‌ಗೆ 37ನೇ ನಾಯಕನ ಪಟ್ಟ

ಮುಂಬೈನಲ್ಲಿ ಅಜಿತ್‌ ಅಗರ್ಕರ್‌ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಶುಭಮನ್‌ ಗಿಲ್‌ ಅವರನ್ನು ಭಾರತ ಟೆಸ್ಟ್‌ ತಂಡದ 37ನೇ ನಾಯಕರನ್ನಾಗಿ ಅಧಿಕೃತವಾಗಿ ನೇಮಿಸಿತು. ಭಾರತ ತಂಡದ ಇಂಗ್ಲೆಂಡ್‌ ಪ್ರವಾಸವು ಜೂನ್‌ 20 ರಂದು ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯದೊಂದಿಗೆ ಆರಂಭವಾಗಲಿದೆ. ಗೌತಮ್‌ ಗಂಭೀರ್‌ ಅವರ ಮಾರ್ಗದರ್ಶನದಲ್ಲಿ, 18 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ಗುರಿಯನ್ನು ಭಾರತ ಹೊಂದಿದೆ.

ಸಾಯಿ ಸುದರ್ಶನ್‌, ಅರ್ಷದೀಪ್‌ ಸಿಂಗ್‌ಗೆ ಅವಕಾಶ

ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿರುವ ತಮಿಳುನಾಡಿನ ಪ್ರತಿಭಾನ್ವಿತ ಬ್ಯಾಟರ್ ಸಾಯಿ ಸುದರ್ಶನ್‌ ಹಾಗೂ ಪಂಜಾಬ್‌ನ ಎಡಗೈ ವೇಗಿ ಅರ್ಷದೀಪ್‌ ಸಿಂಗ್‌ ಅವರಿಗೆ ಇದೇ ಮೊದಲ ಬಾರಿಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡಲಾಗಿದೆ. ಫಿಟ್‌ನೆಸ್‌ ಸಮಸ್ಯೆಯಿಂದಾಗಿ ಅನುಭವಿ ವೇಗಿ ಮೊಹಮ್ಮದ್‌ ಶಮಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಆದರೆ, ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಶಾರ್ದುಲ್‌ ಠಾಕೂರ್‌ ಟೆಸ್ಟ್‌ ತಂಡಕ್ಕೆ ಮರಳಿದ್ದು, ಭಾರತ 'ಎ' ತಂಡದ ನಾಯಕ ಅಭಿಮನ್ಯು ಈಶ್ವರನ್‌ ಅವರಿಗೂ ಮತ್ತೊಮ್ಮೆ ಅವಕಾಶ ದೊರೆತಿದೆ.

ಶುಭಮನ್‌ ಗಿಲ್‌ ಟೆಸ್ಟ್‌ ಸಾಧನೆ

ಶುಭಮನ್‌ ಗಿಲ್‌ ಇದುವರೆಗೆ 32 ಟೆಸ್ಟ್‌ ಪಂದ್ಯಗಳನ್ನಾಡಿದ್ದು, 5 ಶತಕಗಳ ನೆರವಿನಿಂದ 1,893 ರನ್‌ ಕಲೆಹಾಕಿದ್ದಾರೆ. ದೀರ್ಘಕಾಲೀನ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನಾಯಕತ್ವ ನೀಡಲಾಗಿದೆ. ಜಸ್‌ಪ್ರೀತ್‌ ಬುಮ್ರಾ ಕೂಡ ನಾಯಕತ್ವದ ಸ್ಪರ್ಧೆಯಲ್ಲಿದ್ದರಾದರೂ, ಅವರ ಕಾರ್ಯದೊತ್ತಡ ನಿರ್ವಹಣೆಯ ಕಾರಣದಿಂದಾಗಿ ಅವರನ್ನು ಪರಿಗಣಿಸಲಾಗಿಲ್ಲ ಎಂದು ತಿಳಿದುಬಂದಿದೆ.

ಕರುಣ್‌ ನಾಯರ್‌ ಕಮ್‌ಬ್ಯಾಕ್‌

ಕನ್ನಡಿಗ ಅನುಭವಿ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ಬರೋಬ್ಬರಿ 8 ವರ್ಷಗಳ ನಂತರ ಭಾರತ ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ. ಅವರು ಕೊನೆಯದಾಗಿ 2017ರಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಪಂದ್ಯವನ್ನಾಡಿದ್ದರು. ನಂತರ ತಂಡದಿಂದ ಸ್ಥಾನ ಕಳೆದುಕೊಂಡಿದ್ದ ನಾಯರ್‌, 2023-24 ಮತ್ತು 2024-25ರ ದೇಶಿ ಕ್ರಿಕೆಟ್‌ನಲ್ಲಿ ವಿದರ್ಭ ತಂಡದ ಪರ ರನ್‌ಗಳ ಹೊಳೆ ಹರಿಸಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಅವರು ಆಡಿದ 6 ಟೆಸ್ಟ್‌ ಪಂದ್ಯಗಳಿಂದ 67ರ ಸರಾಸರಿಯಲ್ಲಿ 374 ರನ್‌ ಗಳಿಸಿದ್ದು, ಇದರಲ್ಲಿ ಒಂದು ತ್ರಿಶತಕವೂ ಸೇರಿದೆ.

ಭಾರತ ತಂಡ ಈ ರೀತಿ ಇದೆ

ಶುಭಮನ್‌ ಗಿಲ್‌ (ನಾಯಕ), ರಿಷಭ್‌ ಪಂತ್‌ (ಉಪ ನಾಯಕ), ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ಸಾಯಿ ಸುದರ್ಶನ್‌, ಅಭಿಮನ್ಯು ಈಶ್ವರನ್‌, ಕರುಣ್‌ ನಾಯರ್‌, ನಿತೀಶ್‌ ಕುಮಾರ್‌ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್‌ ಜುರೆಲ್‌, ವಾಷಿಂಗ್ಟನ್‌ ಸುಂದರ್‌, ಶಾರ್ದುಲ್‌ ಠಾಕೂರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ, ಆಕಾಶ್‌ ಸಿಂಗ್‌, ಅರ್ಷದೀಪ್‌ ಸಿಂಗ್‌, ಕುಲ್ದೀಪ್‌ ಯಾದವ್‌.

Tags:    

Similar News