IND vs NZ: ನ್ಯೂಜಿಲೆಂಡ್‌ ವಿರುದ್ಧದ ಸೋಲಿನ ನೋವಿಗೆ ಆಸ್ಟ್ರೇಲಿಯಾದಲ್ಲಿ ಮದ್ದರೆಯುವುದೇ ಭಾರತ?

ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ತಪ್ಪುಗಳನ್ನೇ ಮಾಡಿದ್ದಾರೆ. ನ್ಯೂಜಿಲೆಂಡ್‌ ವೇಗಿಗಳು ಅವರನ್ನು ಸುಲಭವಾಗಿ ಬಲೆಗೆ ಬೀಳಿಸಿದ್ದಾರೆ. ಬ್ಯಾಟಿಂಗ್ ಮೆಗಾಸ್ಟಾರ್ ಆಗಿದ್ದ ಕೊಹ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಅವಕಾಶ ಸಿಕ್ಕಾಗ ಕುಟುಂಬದ ನೆಪದಲ್ಲಿ ಲಂಡನ್‌ಗೆ ಹಾರುವ ಅವರು ಭಾರತ ತಂಡಕ್ಕೆ ಈಗ ಅತಿಥಿ ಆಟಗಾರ.

By :  R Kaushik
Update: 2024-11-04 03:06 GMT
ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಯ ಸೋಲಿನ ಹತಾಶೆಯಲ್ಲಿ ರೋಹಿತ್‌ ಶರ್ಮಾ

ಭಾರತ ತಂಡದ ತವರಿನ ಟೆಸ್ಟ್‌ ಋತು ಒಂದೂವರೆ ತಿಂಗಳ ಹಿಂದೆ ಚೆನ್ನೈನ ಚೆಪಾಕ್‌ ಸ್ಟೇಡಿಯಮ್‌ನಲ್ಲಿ ಭರ್ಜರಿಯಾಗಿಯೇ ಪ್ರಾರಂಭಗೊಂಡಿತ್ತು.ಪ್ರವಾಸಿ ಬಾಂಗ್ಲಾ ತಂಡವನ್ನು ಹಿಡಿತದಲ್ಲಿ ಇಟ್ಟುಕೊಂಡು ಮಣಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಚಿತ್ರಣ ಬದಲಾಯಿತು. ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧ 3-0 ವೈಟ್‌ವಾಷ್‌ ಮುಖಭಂಗಕ್ಕೆ ಒಳಗಾಗಿದೆ ರೋಹಿತ್‌ ಪಡೆ. ಅದೂ ಮುಂಬೈನ ಐತಿಹಾಸಿಕ ವಾಖೆಂಡೆ ಸ್ಟೇಡಿಯಮ್‌ನಲ್ಲಿನಡೆದ ಕೊನೇ ಪಂದ್ಯದಲ್ಲಿ ಬಾಲಿಷ ಪರಾಜಯ! ಎಲ್ಲಿಯ ತನಕ ಎಂದರೆ ಸೋಲಿನಲ್ಲೂ ಭಾರತ ಕಳಪೆ ದಾಖಲೆ ಬರೆಯಿತು. ಒಂದು ಡಜನ್ ವರ್ಷ ಮತ್ತು 18 ಸರಣಿಗಳಲ್ಲಿ ಭಾರತವನ್ನು ತವರಿನಲ್ಲಿ ತಡೆಯುವವರೇ ಇರಲಿಲ್ಲ. ಆದರೆ ಈ ಬಾರಿ ಹೀನಾಯ ಸ್ಥಿತಿ. ಕಿವೀಸ್‌ ಪಡೆ ಇನ್ನಿಲ್ಲದಂತೆ ಭಾರತವನ್ನು ಬಗ್ಗು ಬಡಿಯಿತು.

ಪಾಕಿಸ್ತಾನ ತಂಡ (ಸದ್ಯಕ್ಕೆ ಬರುವುದಿಲ್ಲ) ಹೊರತುಪಡಿಸಿ ಉಳಿದೆಲ್ಲಾ ತಂಡಗಳು ಭಾರತಕ್ಕೆ ಟೆಸ್ಟ್‌ ಆಡಲು ಬರುವಾಗ ಗೆಲುವಿನ ಭರವಸೆ ಇಟ್ಟುಕೊಂಡಿರುವುದಿಲ್ಲ. ಆದರೆ, ಈ ಬಾರಿ ಹಾಗಾಗಲಿಲ್ಲ. ಎಲ್ಲ ರೀತಿಯ ಅಸ್ತ್ರಗಳನ್ನು ಇಟ್ಟುಕೊಂಡು ಬಂದ ನ್ಯೂಜಿಲೆಂಡ್‌ ಪಡೆ ಸ್ಪಿನ್‌ ಟ್ರ್ಯಾಕ್‌ನಲ್ಲಿ ಭಾರತದ ಬ್ಯಾಟರ್‌ಗಳ ಕೈ- ಕಾಲು ಕಟ್ಟಿ ಹಾಕಿತು. ಭಾರತ ಎಂದೂ ಅನುಭವಿಸದ ಹೀನಾಯ ಸರಣಿ ಸೋಲಿಗೆ ಕಾರಣರಾದರು

ಡಿಸೆಂಬರ್ 2012ಕ್ಕೆ ಹೋಗೋಣ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ 1-2 ಅಂತರದಿಂದ ಟೆಸ್ಟ್‌ ಸರಣಿಯ ಪರಾಭವ ಅನುಭವಿಸಿತ್ತು. ಅದಾದ ಬಳಿಕ ತವರಿನಲ್ಲಿ ಭಾರತ ತಂಡ ಎದುರಾಳಿ ದೇಶಗಳಿಗೆ ವಿಜಯ ಲಕ್ಷ್ಮಿಯನ್ನು ಬಿಟ್ಟುಕೊಟ್ಟಿರಲಿಲ್ಲ . ಅದಕ್ಕೆ ಮುಖ್ಯ ಕಾರಣ ಭಾರತದ ಸ್ಪಿನ್‌ ಸಂಪತ್ತುಗಳು. ಪ್ರಮುಖವಾಗಿ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಸಂಯೋಜನೆ. ಈ ಬಾರಿಯೂ ತಂಡದಲ್ಲಿ ಅವರಿದ್ದರು. ಈ ಜೋಡಿ ಸಾಮರ್ಥ್ಯ ಮೀರಿ ಆಡಿದೆ. ಆದರೆ, ಬ್ಯಾಟರ್‌ಗಳದ್ದೇ ಕೊರತೆ. ಸೋಲಿಗೆ ಅವರೇ ಕಾರಣ.

ಮುಖಭಂಗದೊಂದಿಗೆ ಬಾರ್ಡರ್‌- ಗವಾಸ್ಕರ್‌ ಟ್ರೋಫಿಗಾಗಿ ಪಯಣ

ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿ ಮುಗಿಯುವ ತನಕ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು. ಆದರೀಗ ಎರಡನೇ ಸ್ಥಾನಕ್ಕೆ ಜಾರಿದೆ. ಆಸ್ಟ್ರೇಲಿಯಾ ತಂಡ ಮೇಲಕ್ಕೇರಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ಗೇರುವ ಭಾರತದ ಕನಸಿಗೆ ಇದು ದೊಡ್ಡ ಹೊಡೆತ ಕೊಟ್ಟಿದೆ. ಯಾಕೆಂದರೆ ಭಾರತಕ್ಕೆ ಮುಂದಿನ ಸರಣಿ ಆಸ್ಟ್ರೇಲಿಯಾದ ವಿರುದ್ಧ.

ಸೋಲಿನ ಭಾರದೊಂದಿಗೆ ರೋಹಿತ್‌ ಪಡೆ ಆಸ್ಟ್ರೇಲಿಯಾಗೆ ಪ್ರಯಾಣಿಸಬೇಕಾಗಿದೆ. ಒಟ್ಟು ಐದು ಟೆಸ್ಟ್‌ ಪಂದ್ಯಗಳ ಬಾರ್ಡರ್‌- ಗವಾಸ್ಕರ್‌ ಟ್ರೋಫಿಯನ್ನು ಒಳಗೊಂಡಿರುವ ಸರಣಿಯದು. ಕೊಕಬುರಾ ಚೆಂಡಿನಲ್ಲಿ ಆಡುವ ಈ ಸರಣಿಯಲ್ಲಿ ಗೆಲ್ಲುವುದು ಸುಲಭದ ಮಾತಲ್ಲ. 2020-21ರಲ್ಲಿ ಹೋಗಿದ್ದ ಭಾರತ ತಂಡ 2-1 ಅಂತರದಿಂದ ಸರಣಿ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಭಾರತ ಒತ್ತಡಕ್ಕೆ ಬಿದ್ದಿದೆ. ಸೋಲು ಒಂದು ಕಡೆಯಾದರೆ, ಡಬ್ಲ್ಯುಟಿಸಿ ಫೈನಲ್‌ಗೇರುವ ತವಕ. ಹೀಗಾಗಿ ಬಿರುಕು ಬಿಟ್ಟಿರುವ ವೇಗ ಮತ್ತು ಬೌನ್ಸರ್‌ಗಳ ಆಗರವಾಗಿರುವ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಸರಣಿ ಗೆಲ್ಲುವುದೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ. .

ಬಯಲಾದ ಸತ್ಯ

ನಮ್ಮ ನೆಲದಲ್ಲಿ ಯಾರನ್ನೂ ಬೇಕಾದರೂ ಸೋಲಿಸಬಲ್ಲೆವು ಎಂಬ ಭಾರತ ತಂಡದ ವಿಶ್ವಾಸ ಈ ಬಾರಿ ನೀರಗುಳ್ಳೆಯಂತೆ ಒಡೆದು ಹೋಗಿದೆ. ಕಿವೀಸ್‌ ಪಡೆಯ ಕೆಲವು ಬ್ಯಾಟರ್‌ಗಳು ಭಾರತದ ಸ್ಪಿನ್‌ ದಾಳಿಯನ್ನು ಮೆಟ್ಟಿ ನಿಂತರೆ ಆ ತಂಡದ ಸ್ಪಿನ್‌ ಬೌಲರ್‌ಗಳು ಭಾರತದ ಅಗ್ರ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಹಣ್ಣುಗಾಯಿ, ನೀರುಗಾಯಿ ಮಾಡಿದ್ದಾರೆ. ಈ ಮೂಲಕ ಭಾರತ ತಂಡದ ಅತಿ ಹುಂಬತನದ ಬಣ್ಣ ಕಳಚಿ ಬಯಲಾಗಿದೆ.

ಭಾರತ ತಂಡವು ಒಂದು ಕಾಲದಲ್ಲಿ ಭಯಂಕರ ಸ್ಪಿನ್‌ ಬೌಲರ್‌ಗಳನ್ನು ಕಂಡಿತ್ತು. ಅವರೆಲ್ಲರೂ ಆಯಾ ಕಾಲಕ್ಕೆ ಮಿಂಚಿದವರು. ಈಗಲೂ ಇದ್ದಾರೆ. ವಿದೇಶಿ ತಂಡಗಳು ಭಾರತಕ್ಕೆ ಬಂದಾಗ ಸ್ಪಿನ್ನರ್‌ಗಳ ಕೈಚಳಕಕ್ಕೆ ನಲುಗಿ ಹೋಗುತ್ತಿತ್ತು. ಇಷ್ಟರ ನಡುವೆ ಭಾರತಕ್ಕೆ ಬರುವಾಗ ಅವರ ಬಳಿ ಉತ್ತಮ ಸ್ಪಿನ್‌ ಅಸ್ತ್ರಗಳು ಇರುತ್ತಿರಲಿಲ್ಲ. ಆದರೆ, ಈ ಬಾರಿ ನ್ಯೂಜಿಲ್ಯಾಂಡ್‌ ಸ್ಪಿನ್ನರ್‌ಗಳ ಗಢಣವೇ ಆಗಿತ್ತು. ಮಿಚೆಲ್ ಸ್ಯಾಂಟ್ನರ್ ಮತ್ತು ಅಜಾಜ್ ಪಟೇಲ್ ಭಾರತಕ್ಕೆ ತಂಡಕ್ಕೆ ಪಾಠ ಕಲಿಸಿತ್ತು. ಅವರು ಯಾವುದೇ ತಪ್ಪು ಮಾಡಿಲ್ಲ. ರೋಹಿತ್‌, ಕೊಹ್ಲಿಯಂಥ ಭಯಾನಕ ಬ್ಯಾಟರ್‌ಗಳನ್ನು ಮೂರು ಪಂದ್ಯಗಳಲ್ಲಿ ಕಾಡಿದ್ದಾರೆ.

ಅಭ್ಯಾಸವೇ ಇಲ್ಲ, ಬರೀ ಅನುಭವದ ಮಾತು

ಟರ್ನಿಂಗ್ ಬಾಲ್ ವಿರುದ್ಧ ಆಧುನಿಕ ಭಾರತೀಯ ಬ್ಯಾಟರ್‌ಗಳ ಬ್ಯಾಟಿಂಗ್‌ ಕೌಶಲ ಕುಸಿಯುತ್ತಿದೆ. ಅವರು ಸಾಕಷ್ಟು ದೇಶೀಯ ಕ್ರಿಕೆಟ್ ಆಡದ ಕಾರಣ ಹೀಗಾಗುತ್ತಿದೆ. ಅವರು ತಮ್ಮ ಡಿಫೆನ್ಸ್ ಚಾಕಚಕ್ಯತೆ ನಂಬುತ್ತಿಲ್ಲ. ಬಿಡುಬೀಸು ಆಟಕ್ಕೆ ಮುಂದಾಗಿದ್ದಾರೆ. ಒಂದು ಬಾರಿ ಕೈಕೊಟ್ಟರೆ ಉಳಿಗಾಲ್ಲ ಇಲ್ಲ ಎಂಬುದು ಈಗ ಸಾಬೀತಾಗಿದೆ. ಸ್ಟಾರ್‌ ಆಟಗಾರರಾದ ಕೊಹ್ಲಿ, ರೋಹಿತ್‌, ಗಿಲ್‌, ರಾಹುಲ್‌ ಎಲ್ಲರೂ ಈ ಬಾರಿ ಚೆನ್ನಾಗಿ ಆಗಿಲ್ಲ. ಅವರಿಗೆ ದೇಶಿಯ ಕ್ರಿಕೆಟ್‌ ಆಡಲು ಸಾಧ್ಯವಿಲ್ಲ ಏಕೆಂದರೆ ಎಲ್ಲರೂ ಸ್ಟಾರ್‌ ಆಟಗಾರರು. ಬಿಸಿಸಿಐಯಿಂದ ಅವರಿಗೆ ವಿನಾಯಿತಿ ಬೇರೆ ಇದೆ. ಇವೆಲ್ಲವೂ ಈ ಬಾರಿ ಪರಾಮರ್ಶೆಗೆ ಒಳಗಾಗಲಿದೆ.

ಅಶುಭ ಚಿಹ್ನೆಗಳು

ಕಳೆದ ಎರಡು ವಾರಗಳಲ್ಲಿ ಪುಣೆ ಮತ್ತು ಮುಂಬೈನಲ್ಲಿ ಕ್ರಮವಾಗಿ ನ್ಯೂಜಿಲ್ಯಾಂಡ್‌ನ ಸ್ಯಾಂಟ್ನರ್‌ ಮತ್ತು ಅಜಾಜ್ ಅವರು ಪ್ರಶಂಸನೀಯ ಮತ್ತು ಗಮನಾರ್ಹ ಪ್ರದರ್ಶನ ನೀಡಿದ್ದರು. ಹೀಗಾಗಿ ತವರು ಸರಣಿಯಲ್ಲಿ ಭಾರತದ ಬ್ಯಾಟರ್‌ಗಳು ಸುರಕ್ಷಿತವಲ್ಲ. ವಿದೇಶಿ ತಂಡಗಳೂ ಉತ್ತಮ ಸ್ಪಿನ್ನರ್‌ಗಳನ್ನು ಹೊಂದಿರುವುದು ಖಾತರಿಯಾಗಿದೆ.

ಟೆಸ್ಟ್ ಕ್ರಿಕೆಟ್‌ ಬದ್ಧತೆಗೆ ಹೆಸರಾದದ್ದು. ಪರಿಪೂರ್ಣ ಬ್ಯಾಟಿಂಗ್‌ನಿಂದ ಮಾತ್ರ ಟೆಸ್ಟ್ ರನ್ ಗಳಿಸಬಹುದು. ಮೂರನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶುಭ್‌ಮನ್‌ ಗಿಲ್‌ 90 ರನ್‌ ಗಳಿಸಿದ್ದೇ ಇದಕ್ಕೆ ಸಾಕ್ಷಿ. ಆದರೆ, ಉಳಿದವರ ಪ್ರಯತ್ನಗಳೇ ಶೂನ್ಯ. ಹೀಗಾಗಿ ಭಾರತಕ್ಕೆ ಪರಿಪೂರ್ಣ ಬ್ಯಾಟರ್‌ಗಳ ಅಗತ್ಯ ಎದುರಾಗಿದೆ ಎನ್ನಬಹುದು.

ತಪ್ಪುಗಳ ಸರಮಾಲೆ

ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ತಪ್ಪುಗಳನ್ನೇ ಮಾಡಿದ್ದಾರೆ. ನ್ಯೂಜಿಲೆಂಡ್‌ ವೇಗಿಗಳು ಅವರನ್ನು ಸುಲಭವಾಗಿ ಬಲೆಗೆ ಬೀಳಿಸಿದ್ದಾರೆ. ಯುವ ಬ್ಯಾಟರ್‌ಗಳಿಗೆ ನೆರವಾಗಲು ರೋಹಿತ್‌ಗೆ ಸಾಧ್ಯವಾಗಿಲ್ಲ. ಇನ್ನು ಒಂದು ಕಾಲದಲ್ಲಿ ಬ್ಯಾಟಿಂಗ್ ಮೆಗಾಸ್ಟಾರ್ ಆಗಿದ್ದ ಕೊಹ್ಲಿ ಕಳಪೆ ಫಾರ್ಮ್‌ನಿಂದ ನೊಂದು ಹೋಗಿದ್ದಾರೆ. ಅವಕಾಶ ಸಿಕ್ಕಾಗ ಕುಟುಂಬದ ನೆಪದಲ್ಲಿ ಲಂಡನ್‌ಗೆ ಹಾರುವ ಅವರು ಭಾರತ ತಂಡಕ್ಕೆ ಈಗ ಅತಿಥಿ ಆಟಗಾರ. ಅದು ತಪ್ಪುಗಳು ಆಟದಲ್ಲಿ ಪ್ರತಿಫಲಿಸಿದೆ.

ಭಾರತವು 12 ವರ್ಷಗಳಲ್ಲಿ ಮೊದಲ ಬಾರಿಗೆ ತವರು ಸರಣಿಯನ್ನು ಕಳೆದುಕೊಂಡಿದೆ ಮಾತ್ರವಲ್ಲ, ಮೊದಲ ಬಾರಿಗೆ ತನ್ನದೇ ನೆಲದಲ್ಲಿ ಎರಡಕ್ಕಿಂತ ಹೆಚ್ಚು ಟೆಸ್ಟ್‌ಗಳ ಸರಣಿಯಲ್ಲಿ ವೈಟ್‌ವಾಷ್‌ ಮುಖಭಂಗ ಅನುಭವಿಸಿದೆ. ಇನ್ನು ಒಂದು ವಾರದಲ್ಲಿ ಭಾರತ ತಂಡ ಎರಡು ವಿಭಾಗವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.

ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಸರಣಿಯನ್ನು 4-0 ಅಥವಾ ಅದಕ್ಕಿಂತ ಉತ್ತಮವಾಗಿ ಗೆಲ್ಲಲೇಬೇಕು. ಭಾರತದ ಬ್ಯಾಟಿಂಗ್ ಸ್ಥಿತಿ ನೋಡಿದರೆ ಇದು ಬಹುತೇಕ ಅಸಾದ್ಯ.

ನವೆಂಬರ್ 22 ರಿಂದ ಪರ್ತ್‌ನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್‌ನಿಂದ ರೋಹಿತ್ ಹೊರಗುಳಿಯಲಿದ್ದಾರೆ. ಅಂದರೆ ಜಸ್ಪ್ರೀತ್ ಬುಮ್ರಾ ಎರಡನೇ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ. 2022ರ ಜುಲೈನಲ್ಲಿ ಬರ್ಮಿಂಗ್ಹಮ್‌ನಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರು.

ಕೊನೇ ಮಾತು ಭಾರತದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸ್ಟಾರ್‌ ಆಟಗಾರರ ಬಗ್ಗೆ ಟೀಕೆಗಳು ಶುರುವಾಗಿವೆ. ತಂಡ ಚೇತರಿಸಿಕೊಳ್ಳಲೇಬೇಕು. ಸ್ಟಾರ್‌ ಬ್ಯಾಟರ್‌ಗಳು ಮಿಂಚಲೇಬೇಕು. ಇಲ್ಲದಿದ್ದರೆ ತಂಡದಲ್ಲಿ ಬದಲಾವಣೆ ಪರ್ವ ಆರಂಭವಾಗಲಿದೆ.

Tags:    

Similar News