Ind vs Aus : ಆರ್‌ ಅಶ್ವಿನ್‌ ವಿಶ್ವದ ಅತ್ಯುತ್ತಮ ಸ್ಪಿನ್ನರ್‌; ಇಎಎಸ್‌ ಪ್ರಸನ್ನ

ಬಾರ್ಡರ್‌- ಗವಾಸ್ಕರ್‌ ಟ್ರೋಫಿ ಹಿನ್ನೆಲೆಯಲ್ಲಿ ʼದ ಫೆಡರಲ್‌ʼ ಹಿರಿಯ ಸ್ಪಿನ್ನರ್‌ ಪ್ರಸನ್ನ ಅವರನ್ನು ಮಾತನಾಡಿಸಿದಾಗ ತಮ್ಮ ಅಂತರ್ಯದ ಮಾತುಗಳು ಹಾಗೂ ಅನುಭವವನ್ನು ಹಂಚಿಕೊಂಡಿದ್ದಾರೆ.;

By :  Aprameya C
Update: 2024-11-21 13:11 GMT

ನವೆಂಬರ್‌ 22ರಂದು ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿ ತನ್ನ ಮೊದಲ ಟೆಸ್ಟ್‌ ಪಂದ್ಯಕ್ಕಾಗಿ ಭಾರತ ತಂಡ ಕಣಕ್ಕೆ ಇಳಿಯಲಿದೆ. ಈ ಸರಣಿ ಕುರಿತು ಮಾತನಾಡಿದ ಭಾರತದ ತಂಡದ ಮಾಜಿ ಸ್ಪಿನ್ನರ್‌ ಇಎಸ್‌ಎ ಪ್ರಸನ್ನ, ಬ್ಯಾಟರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರೆ ಮಾತ್ರ ಆಸೀಸ್‌ ನೆಲದಲ್ಲಿ ʼಹ್ಯಾಟ್ರಿಕ್‌ ಸರಣಿʼ ವಿಜಯ ಸಾಧ್ಯ ಎಂದು ಹೇಳಿದ್ದಾರೆ.


ʼದ ಫೆಡರಲ್‌ ʼಗೆ ವಿಶೇಷ ಸಂದರ್ಶನ ನೀಡಿರುವ ಅವರು ಉಭಯ ತಂಡಗಳಲ್ಲಿ ಇರುವ ಶ್ರೇಷ್ಠ ಸ್ಪಿನ್ನರ್‌ಗಳ ಬಗ್ಗೆ ಮಾತನಾಡಿದ್ದಾರೆ . ರವಿಚಂದ್ರನ್‌ ಅಶ್ವಿನ್‌ ಹಾಗೂ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್‌ ನಥಾನ್‌ ಲಿಯಾನ್‌ ವಿಶ್ವದ ಶ್ರೇಷ್ಠ ಸ್ಪಿನ್‌ ಬೌಲರ್‌ಗಳು. ಆದಾಗ್ಯೂ ಅಶ್ವಿನ್‌ ಒಂದು ಕೈ ಮೇಲು ಎಂಬುದಾಗಿ ಹೇಳಿದ್ದಾರೆ.

"ರವಿಚಂದ್ರನ್‌ ಅಶ್ವಿನ್‌ ಹಾಗೂ ನಥಾನ್‌ ಲಿಯಾನ್‌ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಸ್ಪಿನ್ನರ್‌ಗಳು. ಆದಾಗ್ಯೂ ನನ್ನ ಅನಿಸಿಕೆ ಪ್ರಕಾರ ಆರ್‌ ಅಶ್ವಿನ್‌ ಆಸ್ಟ್ರೇಲಿಯಾದ ಬೌಲರ್‌ಗಿಂತ ಮುಂದಕ್ಕೆ ನಿಲ್ಲುತ್ತಾರೆ. ಯಾಕೆಂದರೆ ಅವರ ಬೌಲಿಂಗ್‌ನಲ್ಲಿ ಹೆಚ್ಚು ವೈವಿಧ್ಯತೆ ಇದೆ. ಇದುವರೆಗೆ ಅವರೇ ಮುಂಚೂಣಿಯಲ್ಲಿ ನಿಂತಿದ್ದಾರೆ ಎಂಬುದು ಖಾತರಿ. ಆದರೆ 38 ವರ್ಷ ತುಂಬಿರುವ ಅವರು ಶೀಘ್ರದಲ್ಲೇ ಆಟಕ್ಕೆ ವಿದಾಯ ಹೇಳಬೇಕಾಗಬಹುದು," ಎಂದು 84 ವರ್ಷದ ಹಿರಿಯ ಕ್ರಿಕೆಟಿಗ ಪ್ರಸನ್ನ ಹೇಳಿದ್ದಾರೆ.

ಆರ್.‌ ಅಶ್ವಿನ್‌ 105 ಟೆಸ್ಟ್‌ ಪಂದ್ಯಗಳಲ್ಲಿ 536 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದೇ ವೇಳೆ ನಥಾನ್‌ ಲಿಯಾನ್‌ 129 ಟೆಸ್ಟ್‌ ಪಂದ್ಯಗಳಲ್ಲಿ 530 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ವಾಷಿಂಗ್ಟನ್‌ ಸುಂದರ್ 'ರನ್‌ ನಿರ್ಬಂಧಿತ ಬೌಲರ್'

ಇತ್ತೀಚೆಗೆ ತವರಿನಲ್ಲಿ ಮುಕ್ತಾಯಗೊಂಡ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ಭಾರತವು 3-0 ಅಂತರದ ವೈಟ್‌ವಾಷ್‌ ಮುಖಭಂಗ ಅನುಭವಿಸಿತ್ತು. ಈ ಸರಣಿಯಲ್ಲಿ ಅಶ್ವಿನ್‌ ಹಾಗೂ ತಮಿಳುನಾಡಿನ ಇನ್ನೊಬ್ಬ ಸ್ಪಿನ್‌ ಬೌಲರ್‌ ವಾಷಿಂಗ್ಟನ್‌ ಸುಂದರ್‌ ಆಡಿದ್ದರು. ಈ ಇಬ್ಬರು ಸ್ಪಿನ್‌ ಮಾಂತ್ರಿಕರಲ್ಲಿ ಸರಣಿಯಲ್ಲಿ ಗಮನ ಸೆಳೆದವರು ಯಾರು ಎಂಬ ಪ್ರಶ್ನೆಗೆ, 49 ಟೆಸ್ಟ್‌ಗಳಲ್ಲಿ 189 ವಿಕೆಟ್‌ಗಳನ್ನು ಪಡೆದಿರುವ ಹಿರಿಯ ಬೌಲರ್‌ ಪ್ರಸನ್ನ ತಾರ್ಕಿಕ ಉತ್ತರ ಕೊಟ್ಟಿದ್ದಾರೆ.

ʼʼಸುಂದರ್‌ ಇನ್ನೂ ಯುವ ಆಟಗಾರ. ಅವರು ಸ್ಪರ್ಧಾತ್ಮಕ ಪಿಚ್‌ನಲ್ಲಿ ಯಾವ ರೀತಿ ಬೌಲಿಂಗ್‌ ಮಾಡುತ್ತಾರೆ ಎಂಬುದು ಇನ್ನೂ ಸಾಬೀತಾಗಿಲ್ಲ. ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿ ಭಾರತದಲ್ಲಿ ನಡೆದಿದ್ದು ಅವರು ಆಡಿರುವುದು ತಿರುವು ಪಡೆಯುತ್ತಿದ್ದ ಪಿಚ್‌ಗಳಲ್ಲಿ. ಆದರೆ, ಸಪಾಟು ಮತ್ತು ಬ್ಯಾಟರ್‌ಗಳಿಗೆ ಸ್ವರ್ಗ ಎನಿಸಿಕೊಳ್ಳುವ ಪಿಚ್‌ಗಳಲ್ಲಿ ಹೇಗೆ ಆಡುತ್ತಾರೆ ಎಂಬುದನ್ನು ನೋಡಬೇಕಾಗಿದೆ. ಇದುವರೆಗೆ ನಾನು ಗಮನಿಸಿದ ಪ್ರಕಾರ ಅವರು ಉತ್ತಮ ಪಿಚ್‌ಗಳಲ್ಲಿ ವಿಕೆಟ್‌ಗಳನ್ನು ಉರುಳಿಸುವುದಕ್ಕಿಂತ ಹೆಚ್ಚಾಗಿ ನಿರ್ಬಂಧಿತ ಬೌಲರ್‌ (ರನ್‌ಗಳಿಗೆ ಕಡಿವಾಣ ಹಾಕುವುದು) ಆಗಿದ್ದಾರೆ. ಅವರು ಟಿ20 ಬೌಲರ್‌ಗಳ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಶ್ವಿನ್‌ ರೀತಿಯಲ್ಲಿ ಸಾಧನೆ ಮಾಡಬೇಕಾದರೆ ಸಾಕಷ್ಟು ದೀರ್ಘ ಕಾಲ ಆಡಬೇಕಾಗುತ್ತದೆ. ಆದರೆ, ಅವರು ಟೆಸ್ಟ್‌ ಮಾದರಿಯಲ್ಲಿ ದೀರ್ಘ ಕಾಲ ಆಡುತ್ತಾರೆ ಎಂಬುದನ್ನು ನಾನು ಊಹಿಸುವುದಿಲ್ಲ. ಯಾಕೆಂದರೆ ಆ ಮಾದರಿಯ ಬೌಲರ್‌ಗಳು ಭಾರತದಲ್ಲಿ ಸಾಕಷ್ಟು ಮಂದಿ ಇದ್ದಾರೆ,ʼʼ ಎಂದು ಹೇಳಿದರು.

ಭಾರತ ಕ್ರಿಕೆಟ್‌ ತಂಡ ಕಂಡಿರುವ ಶ್ರೇಷ್ಠ ಸ್ಪಿನ್‌ ಬೌಲರ್‌ ಪ್ರಸನ್ನ ಅವರ ಪ್ರಕಾರ, ಮುಂಬರುವ ಟೆಸ್ಟ್‌ನಲ್ಲಿ ಭಾರತದ ಬ್ಯಾಟರ್‌ಗಳು ಹೆಚ್ಚು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಬ್ಯಾಟರ್‌ಗಳು ಪ್ರತಿ ಇನಿಂಗ್ಸ್‌ನಲ್ಲಿ ಕನಿಷ್ಠ 350 ರನ್‌ ಗಳಿಸಿದರಷ್ಟೇ ಐದು ಪಂದ್ಯಗಳ ಸರಣಿಯಲ್ಲಿ ಗೆಲುವು ಸಾಧ್ಯ ಎಂದು ಹೇಳಿದರು.

ಟಿ20ಯಿಂದಾಗಿ ಬೌಲಿಂಗ್‌ ಗುಣಮಟ್ಟ ಕುಸಿತ

ಟಿ20 ಕ್ರಿಕೆಟ್‌ ಕುರಿತು ಮಾತನಾಡಿದ ಪ್ರಸನ್ನ ಅವರು, ಚುಟುಕು ಮಾದರಿಯ ಜನಪ್ರಿಯತೆ ಪರಿಣಾಮವಾಗಿ ಕ್ರಿಕೆಟ್‌ನಲ್ಲಿ ಫೀಲ್ಡಿಂಗ್‌ ಮಾನದಂಡಗಳು ವೃದ್ಧಿಸಿವೆ. ಆದರೆ, ಬೌಲಿಂಗ್‌ ಗುಣಮಟ್ಟ ಇಳಿಮುಖ ಕಂಡಿದೆ ಎಂದು ಅಭಿಪ್ರಾಯಪಟ್ಟರು.

ಕ್ರಿಕೆಟ್‌ನಿಂದಲೇ ಜೀವನ ಸಾಗಿಸಲು ಪ್ರಯತ್ನಿಸುವವರಿಗೆ ಟಿ20 ಮಾದರಿ ಉತ್ತಮ. ಭಾರತ ತಂಡದ ಪರವಾಗಿ ಕೆಲವರಿಗೆ ಮಾತ್ರ ಆಡಲು ಸಾಧ್ಯವಾಗುತ್ತದೆ. ಆದರೆ, ಟಿ20 ಲೀಗ್‌ ಕ್ರಿಕೆಟ್‌ನಿಂದ ಮಧ್ಯಮ ವರ್ಗದ ಕುಟುಂಬದಿಂದ ಬಂದವರಿಗೂ ಕ್ರಿಕೆಟ್‌ ಆಡಲು ಅವಕಾಶ ಸಿಗುತ್ತದೆ ಹಾಗೂ ಒಂದಿಷ್ಟು ಆದಾಯ ಗಳಿಸಲು ಸಾಧ್ಯವಾಗುತ್ತದೆ. ಅವರ ಪಾಲಿಗೆ ಟಿ20 ಅನುಕೂಲಕರ. ಒಂದು ಪಂದ್ಯದಲ್ಲಿ ಗರಿಷ್ಠ ನಾಲ್ಕು ಓವರ್‌ಗಳನ್ನು ಮಾತ್ರ ಎಸೆಯಲು ಅವಕಾಶ ಇರುವಾಗ ರನ್‌ ಬಿಟ್ಟುಕೊಡದಂತೆ ನೋಡಿಕೊಂಡರೆ ಸಾಕು. ಇದು ಸಪಾಟು ಪಿಚ್‌ನಲ್ಲಿ ಬೌಲಿಂಗ್‌ ಮಾಡುವ ಸಾಮರ್ಥ್ಯವನ್ನು ತ್ಯಾಗ ಮಾಡಿದಂತೆ. ಟಿ20 ಕ್ರಿಕೆಟ್‌ನಿಂದಾಗಿ ಕ್ರಿಕೆಟ್‌ನ ಫೀಲ್ಡಿಂಗ್‌ ಗುಣಮಟ್ಟ ಗಣನೀಯವಾಗಿ ಹೆಚ್ಚಳಗೊಂಡಿದೆ. ಆದರೆ ಬೌಲಿಂಗ್‌ ಮಾನದಂಡವು ಕುಸಿದಿದೆ ಎಂದು ಹಿರಿಯ ಆಟಗಾರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ವಾಸವಿರುವ ಪ್ರಸನ್ನ ಅವರು ನಿವೃತ್ತ ಜೀವನ ಅತ್ಯಂತ ಸವಾಲಿನದ್ದು ಎಂದು ನುಡಿದಿದ್ದಾರೆ. ಹಿಂದಿನಂತೆ ಈಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪಂದ್ಯ ವೀಕ್ಷಿಸಲು ಹೋಗುವುದಿಲ್ಲ ಎಂಬುದಾಗಿಯೂ ಹೇಳಿದರು.

ʼʼನಿವೃತ್ತ ಜೀವನ ಅಷ್ಟೊಂದು ಸುಲಭವಲ್ಲ. ಆದರೂ ಈ ಹಂತವನ್ನು ಆನಂದಿಸಬಹುದು. ದೇವರ ದಯೆಯಿಂದ ಎಲ್ಲವೂಉತ್ತಮವಾಗಿ ಸಾಗುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ನಡೆಯುವ ಪಂದ್ಯಗಳನ್ನು ವೀಕ್ಷಿಸಲು ನಾನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗುವುದಿಲ್ಲ. ಈ ವಯಸ್ಸಿನಲ್ಲಿ ಅಲ್ಲಿಗೆ ಹೋಗುವುದು ಸುಲಭವಲ್ಲ,ʼʼ ಎಂದು ಹೇಳಿದರು. 

Tags:    

Similar News