ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗದಿರಲು ಭಾರತ ನಿರ್ಧಾರ

ವೇಳಾಪಟ್ಟಿಯ ಕರಡು ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಮಾರ್ಚ್ 1 ರಂದು ಲಾಹೋರ್‌ನಲ್ಲಿ ಮುಖಾಮುಖಿಯಾಗಲಿವೆ;

Update: 2024-07-11 14:15 GMT
ಭಾರತ ತಂಡದ ನಾಯಕ ರೋಹಿತ್ ಶರ್ಮಾಮತ್ತು ಪಾಕಿಸ್ತಾನದ ಆಟಗಾರ ಬಾಬರ್ ಅಜಮ್
Click the Play button to listen to article

2025ರ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದು, ಈ  ಟೂರ್ನಿಯನ್ನಾಡಲು ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ. ಶ್ರೀಲಂಕಾ ಇಲ್ಲವೇ ದುಬೈನಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸಿದರಷ್ಟೇ ತಮ್ಮ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಎಂದು  ಬಿಸಿಸಿಐ ಸಂದೇಶ ರವಾನಿಸಿದೆ ಎಂದು ವರದಿಯಾಗಿದೆ. 

ಭಾರತ ಕ್ರಿಕೆಟ್ ತಂಡವು 2008ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಮಾಡಿ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿತ್ತು. ಇದಾದ ಬಳಿಕ ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ಭದ್ರತೆಯ ಕಾರಣಗಳಿಂದಾಗಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕಿದೆ. ಇನ್ನು 2012ರ ಡಿಸೆಂಬರ್‌ನಿಂದ 2013ರ ಜನವರಿ ವರೆಗೆ ಭಾರತ ಹಾಗೂ ಪಾಕಿಸ್ತಾನ ನಡುವೆ ಭಾರತದಲ್ಲಿ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿ ನಡೆದಿತ್ತು. ಇದಾದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. 

ಈ ಹಿಂದೆ ಚಾಂಪಿಯನ್ ಟ್ರೋಫಿಗೆ ಹೈಬ್ರಿಡ್ ಮಾದರಿಯನ್ನು ಪರಿಗಣಿಸಲು ಪಿಸಿಬಿ ನಿರಾಕರಿಸಿತ್ತು. 2008ರ ಮುಂಬೈ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ನಿರಂತರವಾಗಿ ಹದಗೆಡುತ್ತಿವೆ. ಅಂದಿನಿಂದ ಭಾರತ ತಂಡವು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಪ್ರವಾಸ ಕೈಗೊಂಡಿಲ್ಲ. ಭಾರತ ಕ್ರಿಕೆಟ್ ತಂಡದ ಪಾಕಿಸ್ತಾನ ಪ್ರವಾಸದ ನಿರ್ಧಾರವನ್ನು ಸರ್ಕಾರ ನಿರ್ಧರಿಸುತ್ತದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ನೆರೆಯ ರಾಷ್ಟ್ರವು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಇರುವುದಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟವಾಗಿ ಹೇಳಿದೆ. 

ಏಷ್ಯಾ ಕಪ್ 2023 ಅನ್ನು ಪಾಕಿಸ್ತಾನ ಆಯೋಜಿಸಿದ್ದು, ಭಾರತವು ಶ್ರೀಲಂಕಾದಲ್ಲಿ ತಮ್ಮ ಪಂದ್ಯಗಳನ್ನು ಆಡುವುದರೊಂದಿಗೆ ಹೈಬ್ರಿಡ್ ಮಾದರಿಯಲ್ಲಿ ಆಡಲಾಯಿತು. ಈಗ, ಫೆಬ್ರವರಿ, ಮಾರ್ಚ್ 2025 ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಸಹ ಹೈಬ್ರಿಡ್ ಮಾದರಿಯಲ್ಲಿ ಆಡಬಹುದು ಎಂದು ವರದಿಗಳು ತಿಳಿಸಿವೆ. ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  ಕರಡು ಪ್ರಕಾರ ವೇಳಾಪಟ್ಟಿಯ  ಭಾರತ ಮತ್ತು ಪಾಕಿಸ್ತಾನ ಮಾರ್ಚ್ 1 ರಂದು ಲಾಹೋರ್‌ನಲ್ಲಿ ಮುಖಾಮುಖಿಯಾಗಲಿವೆ.

Tags:    

Similar News