ಕ್ರಿಕೆಟ್ ಕಾಮೆಂಟರಿ ಹೇಳುವ ಶೋಯೆಬ್ ಅಖ್ತರ್‌ನ ಯೂಟ್ಯೂಬ್ ಚಾನೆಲ್​ಗೂ ಭಾರತದಲ್ಲಿ ನಿಷೇಧ

ಶೋಯೆಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್, 3.5 ಮಿಲಿಯನ್‌ಗಿಂತ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದು, ಭಾರತದ ಕ್ರಿಕೆಟ್ ಅಭಿಮಾನಿಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು.;

Update: 2025-04-28 14:41 GMT

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್ ‘ShoaibAkhtar@100mph’ ಭಾರತದಲ್ಲಿ ಜನಪ್ರಿಯವಾಗಿತ್ತು. ಆದರೆ, ಈಗ ಅದು ಏಕಾಏಕಿ ನಿಷೇಧಕ್ಕೆ ಒಳಗಾಗಿದೆ.  ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಬಳಿಕ ಕೇಂದ್ರ ಸರ್ಕಾರದಿಂದ ಪಾಕ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಅಲ್ಲಿನ ಮಾಧ್ಯಮ ಸಂಸ್ಥೆಗಳಿಗೆ ಸೇರಿರುವ ಯೂಟ್ಯೂಬ್ ಚಾನೆಲ್​ಗಳಿಗೆ ನಿಷೇಧ ಹೇರಿದೆ. ಆದರೆ, ಅಖ್ತರ್ ಅವರ ಚಾನೆಲ್ಈ ಪಟ್ಟಿಯಲ್ಲಿ ಇರಲಿಲ್ಲ. ಆದಾಗ್ಯೂ ಅವರ ಚಾನೆಲ್​ ಲಭ್ಯವಿಲ್ಲ.  

ಪಹಲ್ಗಾಮ್​ನಲ್ಲಿ ಅಮಾಯಕರ ಮೇಲಿನ ದಾಳಿಯನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್​ ತೈಬಾ ಬೆಂಬಲಿತ ‘ದಿ ರೆಸಿಸ್ಟೆನ್ಸ್ ಫ್ರಂಟ್’ ನಡೆಸಿದೆ. ಆ ಬಳಿಕದಿಂದ ಭಾರತ ನರೆಯ ಪಾಕಿಸ್ತಾನ ವಿರುದ್ಧ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅಂತೆಯೇ ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ, ಒಟ್ಟು 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ,

ಈ ಯೂಟ್ಯೂಬ್ ಚಾನೆಲ್​ಗಳು ಸುಮಾರು 63 ದಶಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿವೆ. ಈ ಚಾನೆಲ್‌ಗಳು “ಭಾರತ, ಭಾರತೀಯ ಸೇನೆ, ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಸಾಮಾಜಿಕವಾಗಿ ಸೂಕ್ಷ್ಮ, ತಪ್ಪು ಮತ್ತು ದಾರಿತಪ್ಪಿಸುವ ವಿಷಯವನ್ನು ಹರಡುತ್ತಿವೆ” ಎಂದು ಗೃಹ ಸಚಿವಾಲಯ ಆರೋಪಿಸಿದೆ. ಈ ಪೈಕಿ ಶೋಯೆಬ್ ಅಖ್ತರ್ ಅವರ ಚಾನೆಲ್‌ನ ಜೊತೆಗೆ, ಮಾಜಿ ಪಾಕಿಸ್ತಾನಿ ಕ್ರಿಕೆಟಿಗರಾದ ಬಾಸಿತ್ ಅಲಿ, ರಶೀದ್ ಲತೀಫ್, ಮತ್ತು ತನ್ವೀರ್ ಅಹ್ಮದ್ ಅವರ ಚಾನೆಲ್‌ಗಳೂ ಭಾರತದಲ್ಲಿ ಪ್ರವೇಶಿಸಲಾಗದಂತಾಗಿವೆ. ಇದರ ಜೊತೆಗೆ, ಡಾನ್ ನ್ಯೂಸ್, ಸಮಾ ಟಿವಿ, ಎಆರ್‌ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ಜಿಯೋ ನ್ಯೂಸ್, ಸುನೋ ನ್ಯೂಸ್, ಮತ್ತು ಇತರ ಪಾಕಿಸ್ತಾನಿ ಸುದ್ದಿ ಚಾನೆಲ್‌ಗಳೂ ನಿಷೇಧಕ್ಕೊಳಗಾಗಿವೆ.

ಶೋಯೆಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್, 3.5 ಮಿಲಿಯನ್‌ಗಿಂತ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದು, ಭಾರತದ ಕ್ರಿಕೆಟ್ ಅಭಿಮಾನಿಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಅವರ ಚಾನೆಲ್ ಮುಖ್ಯವಾಗಿ ಕ್ರಿಕೆಟ್ ವಿಶ್ಲೇಷಣೆ, ಪಂದ್ಯಗಳ ಕಾಮೆಂಟರಿ, ಮತ್ತು ವೈಯಕ್ತಿಕ ಅನುಭವಗಳನ್ನು ಒಳಗೊಂಡಿತ್ತು, ಇದು ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಚಾನೆಲ್​ ಆಗಿರಲಿಲ್ಲ. ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನ ಸನ್ನಿವೇಶದಿಂದಾಗಿ, ಈ ಚಾನೆಲ್‌ಗಳನ್ನು ಒಟ್ಟಾರೆಯಾಗಿ ನಿಷೇಧಿಸುವ ಕ್ರಮಕ್ಕೆ ಒಳಪಟ್ಟಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಶೋಯೆಬ್ ಅಖ್ತರ್ ಅವರ ಚಾನೆಲ್‌ಗೆ ಪ್ರವೇಶಿಸಲು ಪ್ರಯತ್ನಿಸಿದಾಗ, “ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸರ್ಕಾರದ ಆದೇಶದಿಂದ ಈ ವಿಷಯವು ಈ ದೇಶದಲ್ಲಿ ಲಭ್ಯವಿಲ್ಲ” ಎಂಬ ಸಂದೇಶವು ಯೂಟ್ಯೂಬ್‌ನಲ್ಲಿ ಗೋಚರಿಸುತ್ತದೆ. ಆದರೆ, ಕೆಲವು ಹಳೆಯ ವಿಡಿಯೋಗಳು ಇನ್ನೂ ಲಭ್ಯವಿವೆ, ಆದರೆ ಚಾನೆಲ್‌ನ ಮುಖಪುಟವನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ.

 

Tags:    

Similar News