Gautam Gambhir : ಕೊಹ್ಲಿ, ರೋಹಿತ್ ವೈಫಲ್ಯ ಸಮರ್ಥಿಸಿಕೊಂಡ ಕೋಚ್ ಗಂಭೀರ್
ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್ ಸರಣಿಯಲ್ಲಿ ಭಾರತ 0-3 ವೈಟ್‌ವಾಷ್ ಆಗಿತ್ತು. ಹೀಗಾಗಿ ಭಾರತ ತಂಡದ ಒತ್ತಡದಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಅದನ್ನು ಗಂಭೀರ್ ತಳ್ಳಿಹಾಕಿದ್ದಾರೆ.
ಭಾರತ ತಂಡ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡಲಿದ್ದು ಅದಕ್ಕಿಂತ ಮುಂಚಿತವಾಗಿ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಸೋಮವಾರ (ನವೆಂಬರ್ 11) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಅವರು ಫಾರ್ಮ್ ಕಳೆದುಕೊಂಡಿರುವ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಸಮರ್ಥಿಸಿಕೊಂಡರು. ಅವರಿಬ್ಬರು ಪ್ರದರ್ಶನ ನೀಡಲು ʼʼಅತ್ಯುತ್ತಮ ಸಾಮರ್ಥ್ಯʼ ಹೊಂದಿದ್ದಾರೆ ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಪುಟಿದೇಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಭಾರತ 0-3 ವೈಟ್‌ವಾಷ್ ಮುಖಭಂಗಕ್ಕೆ ಒಳಗಾದ ಹಿನ್ನೆಲೆಯಲ್ಲಿ ಹಿರಿಯ ಆಟಗಾರರು ಒತ್ತಡದಲ್ಲಿ ಇದ್ದಾರೆ ಎಂಬ ವಿಶ್ಲೇಷಣೆಗಳನ್ನು ಗಂಭೀರ್ ತಳ್ಳಿಹಾಕಿದರು.
"ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಹಲವು ಸಾಧನೆಗಳನ್ನು ಮಾಡಿದ ಬ್ಯಾಟರ್‌ಗಳು ಇದ್ದಾರೆ" ಎಂದು ಹೇಳುವ ಮೂಲಕ ಹಿರಿಯ ಆಟಗಾರರ ಮೇಲೆ ವಿಶ್ವಾಸ ಇದೆ ಎಂಬುದನ್ನು ಹೇಳಿಕೊಂಡರು. ಮುಂಬೈನಿಂದ ಭಾರತ ತಂಡ ಆಸ್ಟ್ರೇಲಿಯಾಗೆ ಹೊರಟಿದ್ದು ಅದಕ್ಕೂ ಮೊದಲು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು .
"ನನಗೆ ಹೆಚ್ಚಿನ ಒತ್ತಡವಿಲ್ಲ. ಭಾರತ ತಂಡಕ್ಕೆ ತರಬೇತುದಾರನಾಗಿರುವುದು ಗೌರವ ಮತ್ತು ಸೌಭಾಗ್ಯ" ಎಂಬುದಾಗಿ ಗಂಭೀರ್ ಪುನರುಚ್ಚರಿಸಿದರು. ಮೊದಲ ಟೆಸ್ಟ್ ಪಂದ್ಯ ನವೆಂಬರ್ 22ರಂದು ಪರ್ತ್‌ನಲ್ಲಿ ಆರಂಭವಾಗಲಿದೆ ಎಂಬುದಾಗಿಯೂ ಅವರು ನುಡಿದರು.
ಒತ್ತಡವನ್ನು ಅನುಭವಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಗಂಭೀರ್, "ನಾನು ಪರಿವರ್ತನೆಯ ಬಗ್ಗೆ ಯೋಚಿಸುತ್ತಿಲ್ಲ ಆದರೆ ಮುಂದಿನ ಐದು ಟೆಸ್ಟ್ ಪಂದ್ಯಗಳ ಬಗ್ಗೆ ಯೋಚಿಸುತ್ತಿದ್ದೇನೆ. ಪರಿವರ್ತನೆ ಅಥವಾ ಪರಿವರ್ತನೆ ಇರುವುದು ಗೊತ್ತಿಲ್ಲ . ಏನು ನಡೆಯಬೇಕೊ ಅದು ನಡೆಯುತ್ತದೆ. ಆದರೆ, ಡ್ರೆಸ್ಸಿಂಗ್ ರೂಮ್‌ನಲ್ಲಿ ಹಿರಿಯ ಮತ್ತು ಅನುಭವಿಗಳು ಇದ್ದಾರೆ ಎಂಬುದು ಖಚಿತ. ಅವರು ಉತ್ತಮ ಪ್ರದರ್ಶನ ನೀಡುವುದಕ್ಕೆ ಕಾತರರಾಗಿದ್ದಾರೆ,ʼʼ ಎಂದು ನುಡಿದರು.
ಬುಮ್ರಾ ನಾಯಕ
ರೋಹಿತ್ ಶರ್ಮಾ ವೈಯಕ್ತಿಕ ಕಾರಣಗಳಿಗಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾದರೆ ನಿಯೋಜಿತ ಉಪನಾಯಕನಾಗಿರುವ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕೋಚ್ ಗಂಭೀರ್ ಮಾಹಿತಿ ನೀಡಿದರು.
ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್ ಮತ್ತು ಅಭಿಮನ್ಯು ಈಶ್ವರನ್ ಇದ್ದು ಅವರಿಗೆ ಅವಕಾಶಗಳು ಸಿಗಬಹುದು ಎಂದು ಹೇಳಿದರು.