ದುಲೀಪ್ ಟ್ರೋಫಿ: ಕೊಹ್ಲಿ, ರೋಹಿತ್ ಗೆ ವಿನಾಯಿತಿ; ಅಶ್ವಿನ್, ಬೂಮ್ರಾ ಆಡುವ ಸಾಧ್ಯತೆ ಇಲ್ಲ

Update: 2024-08-12 08:50 GMT
ಟಿ 20 ವಿಶ್ವಕಪ್ 2024 ಟ್ರೋಫಿಯೊಂದಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ

ಬೆಂಗಳೂರು: ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೊರತುಪಡಿಸಿ , ಭಾರತೀಯ ತಂಡದ ಹೆಚ್ಚಿನ ಆಟಗಾರರು ದುಲೀಪ್ ಟ್ರೋಫಿಯ ಮೊದಲ ಸುತ್ತಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಬಿಸಿಸಿಐ ಆರಂಭಿಕ ಪಂದ್ಯಗಳಲ್ಲಿ ಒಂದನ್ನು ಅನಂತಪುರದಿಂದ ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದೆ.

ಹಿರಿಯ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಪಂದ್ಯಾವಳಿಯಿಂದ ವಿನಾಯಿತಿ ಪಡೆಯಬಹುದು; ಆದರೆ, ಆಯ್ಕೆಯನ್ನು ಅವರಿಗೆ ಬಿಡಲಾಗಿದೆ. 

ದುಲೀಪ್ ಟ್ರೋಫಿಯನ್ನು ಸೆಪ್ಟೆಂಬರ್ 5 ರಿಂದ ಆಂಧ್ರಪ್ರದೇಶದ ಅನಂತಪುರದಲ್ಲಿ ಎರಡು ಪಂದ್ಯಗಳೊಂದಿಗೆ ಆರಂಭಿಸಲು ನಿರ್ಧರಿಸ ಲಾಗಿತ್ತು. ಆದರೆ, ಈಗ ಒಂದು ಪಂದ್ಯವನ್ನು ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ. ಅನಂತಪುರ, ಬೆಂಗಳೂರಿನಿಂದ ಸುಮಾರು 230 ಕಿಮೀ ದೂರದಲ್ಲಿದ್ದು, ವೈಮಾನಿಕ ಸಂಪರ್ಕ ಹೊಂದಿಲ್ಲ.

ʻಕೆಲವು ಹಿರಿಯ ಆಟಗಾರರಿಗೆ ಅವಕಾಶ ಕಲ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಕೆಂಪು ಚೆಂಡಿನಲ್ಲಿ ಆಟದ ಅನುಭವ ಪಡೆಯುತ್ತಾರೆ,ʼ ಎಂದು ಮೂಲಗಳು ತಿಳಿಸಿವೆ.

ಭಾರತವು ಬಾಂಗ್ಲಾದೇಶದ ವಿರುದ್ಧ ಸೆಪ್ಟೆಂಬರ್ 19 ರಂದು ಚೆನ್ನೈ ಮತ್ತು ಸೆಪ್ಟೆಂಬರ್ 27 ರಂದು ಕಾನ್ಪುರದಲ್ಲಿ ಎರಡು ಟೆಸ್ಟ್ ಪಂದ್ಯ ಆಡಲಿದೆ. ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕೆ.ಎಲ್. ರಾಹುಲ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್ ಮತ್ತಿತರ ಪ್ರಮುಖ ಆಟಗಾರರು ಪಂದ್ಯಾವಳಿಗೆ ಸಂಪೂರ್ಣವಾಗಿ ಅಥವಾ ಭಾಗಶಃ ಲಭ್ಯವಾಗುವ ನಿರೀಕ್ಷೆಯಿದೆ. ಆದರೆ, ಬುಮ್ರಾ ಮತ್ತು ಅಶ್ವಿನ್ ಅವರು ಪಂದ್ಯಾವಳಿಯಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ.

ದುಲೀಪ್ ಟ್ರೋಫಿಯಲ್ಲಿ ಆಡಲು ರಿಷಬ್ ಪಂತ್‌ಗೆ ಅವಕಾಶ ನೀಡುವ ಸಾಧ್ಯತೆಯಿದ್ದು, 2022 ರ ಭೀಕರ ಕಾರು ಅಪಘಾತದ ಬಳಿಕ ಇದು ಅವರ ಮೊದಲ ಕೆಂಪು ಚೆಂಡಿನ ಪಂದ್ಯ ಆಗಿರಲಿದೆ. ಪಂತ್ ಅವರು ಬಿಳಿ ಚೆಂಡಿನ ತಂಡದ ಭಾಗವಾಗಿದ್ದಾರೆ ಮತ್ತು ಅವರು ಟಿ 20 ವಿಶ್ವಕಪ್‌ನಲ್ಲಿ ಆಟವಾಡಿದ್ದರು.

ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಮೊಹಮ್ಮದ್ ಶಮಿ, ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ.

ರಾಷ್ಟ್ರೀಯ ತಂಡದಲ್ಲಿ ಇಲ್ಲದವರು, ದೇಶಿ ಕ್ರಿಕೆಟ್ ಪಂದ್ಯಗಳಲ್ಲಿ ಆಡಬೇಕಾಗುತ್ತದೆ. ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ (ಮುಂಬೈ) ಮತ್ತು ಆಯ್ಕೆಯಾಗದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (ಜಾರ್ಖಂಡ್) ಆಗಸ್ಟ್ 15 ರಿಂದ ಪ್ರಾರಂಭವಾಗುವ ಬುಚ್ಚಿ ಬಾಬು ಟ್ರೋಫಿಯಲ್ಲಿ ಆಡಲಿದ್ದಾರೆ.

Tags:    

Similar News