ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಸಿಡ್ನಿಯಲ್ಲಿ ಅಕಾಡೆಮಿ

ಭಾರತವನ್ನು ಹೊರತುಪಡಿಸಿ ಅಮೆರಿಕ (ಡಲ್ಲಾಸ್) ಮತ್ತು ಇಂಗ್ಲೆಂಡ್ (ರೀಡಿಂಗ್)ನಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿ ತರಬೇತಿ ಕೇಂದ್ರಗಳನ್ನು ಹೊಂದಿದ್ದು, ಸಿಡ್ನಿ ಮೂರನೇ ಅಂತಾರಾಷ್ಟ್ರೀಯ ತಾಣವಾಗಿದೆ. ಸೆಪ್ಟೆಂಬರ್‌ ನಲ್ಲಿ ತರಬೇತಿ ಕಾರ್ಯಕ್ರಮಗಳು ಆರಂಭವಾಗಲಿವೆ.

Update: 2024-07-17 13:26 GMT

ಆಸ್ಟ್ರೇಲಿಯದ ಸಿಡ್ನಿಯಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿಯನ್ನು ತೆರೆಯಲಾಗುತ್ತದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹೇಳಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಸ್ಟ್ರೇಲಿಯದೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದೆ. ಮೈಕೆಲ್ ಹಸ್ಸಿ, ಮ್ಯಾಥ್ಯೂ ಹೇಡನ್‌, ಶೇನ್ ವ್ಯಾಟ್ಸನ್ ಸೇರಿದಂತೆ ಹಲವರು ಸಿಎಸ್‌ಕೆ ತಂಡದ ಭಾಗವಾಗಿದ್ದರು. ಸಿಡ್ನಿಯಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿಯನ್ನು ಆರಂಭಿಸುವುದರೊಂದಿಗೆ, ಸಿಎಸ್‌ಕೆ  ಹೊಸ ಆಯಾಮಕ್ಕೆ ತೆರೆದುಕೊಂಡಿದೆ ಎಂದು ಸಿಎಸ್‌ಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಅಮೆರಿಕ (ಡಲ್ಲಾಸ್) ಮತ್ತು ಇಂಗ್ಲೆಂಡ್‌ (ರೀಡಿಂಗ್)‌ ನಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿ ಇದೆ. ಸಿಡ್ನಿಯ ಸೂಪರ್ ಕಿಂಗ್ಸ್ ಅಕಾಡೆಮಿಯು ಕ್ರಿಕೆಟ್ ಸೆಂಟ್ರಲ್, 161, ಸಿಲ್ವರ್‌ ವಾಟರ್ ರಸ್ತೆ, ಸಿಡ್ನಿ ಒಲಿಂಪಿಕ್ ಪಾರ್ಕ್‌ನಲ್ಲಿ ಇರಲಿದೆ.

ಇದೊಂದು ಅತ್ಯಾಧುನಿಕ ಕೇಂದ್ರವಾಗಿದ್ದು, ವರ್ಷವಿಡೀ ಹೊರಾಂಗಣ ಮತ್ತು ಒಳಾಂಗಣದಲ್ಲಿ ತರಬೇತಿ ನೀಡಬಹುದಾಗಿದೆ. ಸೆಪ್ಟೆಂಬರ್‌ನಲ್ಲಿ ಬಾಲಕ ಮತ್ತು ಬಾಲಕಿಯರಿಗೆ ತರಬೇತಿ ಆರಂಭವಾಗಲಿದೆ. 

ಚೆನ್ನೈ ಸೂಪರ್ ಕಿಂಗ್ಸ್‌ನ ಸಿಇಒ ಕೆ.ಎಸ್. ವಿಶ್ವನಾಥನ್, ʻ2008 ರಲ್ಲಿ ಐಪಿಎಲ್ ಪ್ರಾರಂಭದೊಂದಿಗೆ ಆಸ್ಟ್ರೇಲಿಯದೊಂದಿಗೆ ನಮ್ಮ ಪ್ರಯಾಣ ಆರಂಭವಾಗಿದ್ದು, ಅದನ್ನು ವಿಸ್ತರಿಸಲು ಸಂತೋಷಪಡುತ್ತೇವೆ,ʼ ಎಂದು ಹೇಳಿದರು. 

ʻಆಸ್ಟ್ರೇಲಿಯ ಉತ್ತಮ ಕ್ರೀಡಾ ಸಂಸ್ಕೃತಿ ಮತ್ತು ಶ್ರೀಮಂತ ಕ್ರಿಕೆಟ್ ಪರಂಪರೆಯನ್ನು ಹೊಂದಿರುವ ಚಾಂಪಿಯನ್ ದೇಶ. ಸೂಪರ್ ಕಿಂಗ್ಸ್ ಅಕಾಡೆಮಿಯು ಇಲ್ಲಿನ ಕ್ರೀಡಾಸಕ್ತರಿಗೆ ನೆರವಾಗಲಿದೆ. ಕೆಲವು ವರ್ಷಗಳಿಂದ ಕ್ರಿಕೆಟ್‌ನಲ್ಲಿ ಭೌಗೋಳಿಕ ಗಡಿಗಳು ಕುಗ್ಗುತ್ತಿವೆ. ಭಾರತ, ಅಮೆರಿಕ,‌ ಇಂ‌ಗ್ಲೆಂಡ್ ಮತ್ತು ಈಗ ಆಸ್ಟ್ರೇಲಿಯದಲ್ಲಿ ವಿಶ್ವ ದರ್ಜೆಯ ಸೌಲಭ್ಯ, ತರಬೇತಿ ಪಠ್ಯಕ್ರಮ, ವಿನಿಮಯ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಯ ಕ್ರಿಕೆಟಿಗರನ್ನು ಸಿದ್ಧಗೊಳಿಸಲು ಮುಂದಾಗಿದ್ದೇವೆ,ʼ ಎಂದು ಹೇಳಿದರು. 

ಸಿಡ್ನಿಯಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿಯ ಫ್ರಾಂಚೈಸಿ ಪಾಲುದಾರ, ಎಕೆಲಾನ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಆನಂದ್ ಕರುಪ್ಪಯ್ಯ ಮಾತನಾಡಿ, ʼಸೂಪರ್ ಕಿಂಗ್ಸ್ ಅಕಾಡೆಮಿಯನ್ನು ಆಸ್ಟ್ರೇಲಿಯಕ್ಕೆ ತರಲು ಉತ್ಸುಕರಾಗಿದ್ದೇವೆ. ಭಾರತ ಮತ್ತು ಆಸ್ಟ್ರೇಲಿಯದ ನಡುವೆ ಕ್ರಿಕೆಟ್ ಸಾಮಾನ್ಯ ವಿಷಯ. ಸಿಡ್ನಿ ಶ್ರೀಮಂತ ಕ್ರಿಕೆಟ್ ಇತಿಹಾಸ ಮತ್ತು ಕ್ರಿಕೆಟ್ ಪ್ರೀತಿಸುವ ಬಹುಸಂಸ್ಕೃತಿಯ ಸಮಾಜವನ್ನು ಹೊಂದಿರುವ ನಗರ,ʼ ಎಂದು ಹೇಳಿದರು.

ʻಈ ಪ್ರದೇಶದ ಕ್ರಿಕೆಟಿಗರು ನಮ್ಮ ತರಬೇತಿ ವಿಧಾನಗಳಿಂದ ಪ್ರಯೋಜನ ಪಡೆಯುತ್ತಾರೆ. ಭಾರತ, ಯುಕೆ ಮತ್ತು ಯುಎಸ್ಎಗಳಲ್ಲಿನ ಇತರ ಸೂಪರ್ ಕಿಂಗ್ಸ್ ಅಕಾಡೆಮಿ ಕೇಂದ್ರಗಳೊಂದಿಗೆ ಸಂಭಾವ್ಯ ವಿನಿಮಯ ಅವಕಾಶಗಳು ಇರಲಿವೆ,ʼ ಎಂದರು.

ಸೂಪರ್‌ ಕಿಂಗ್ಸ್‌ ಅಕಾಡೆಮಿಯನ್ನು ಏಪ್ರಿಲ್ 2022 ರಲ್ಲಿ ಪ್ರಾರಂಭಿಸಲಾಯಿತು. ಅಕಾಡೆಮಿ ಪ್ರಸ್ತುತ ಚೆನ್ನೈ (ತೊರೈಪಕ್ಕಂ, ವೆಲಚೇರಿಯ ಗುರುನಾನಕ್ ಕಾಲೇಜು ಮತ್ತು ಶ್ರೀ ರಾಮಚಂದ್ರ ವೈದ್ಯಕೀಯ ಕಾಲೇಜು, ಪೊರೂರು), ಕೊಯಮತ್ತೂರು, ತಿರುಪ್ಪೂರ್, ಸೇಲಂ, ತಿರುಚ್ಚಿ, ಹೊಸೂರು, ತಿರುನೆಲ್ವೇಲಿ ಮತ್ತು ಕಾರೈಕುಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರೀಡಿಂಗ್‌ (ಯುನೈಟೆಡ್ ಕಿಂಗ್‌ಡಂ), ಡಲ್ಲಾಸ್ (ಯುಎಸ್‌ಎ) ಮತ್ತು ಸಿಡ್ನಿ (ಆಸ್ಟ್ರೇಲಿಯ)‌ ಹೊರದೇಶದಲ್ಲಿರುವ ಕೇಂದ್ರಗಳಾಗಿವೆ.

Tags:    

Similar News