ಪತ್ನಿ ಮತ್ತು ಮಗಳ ನಿರ್ವಹಣೆಗೆ ಶಮಿಗೆ ಮಾಸಿಕ 4 ಲಕ್ಷ ರೂಪಾಯಿ ನೀಡಲು ಕೋರ್ಟ್ ಆದೇಶ

2023ರಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶಮಿ ಅವರಿಗೆ ತಮ್ಮ ಪತ್ನಿಗೆ 50,000 ಮತ್ತು ಮಗಳಿಗೆ 80,000 ರೂಪಾಯಿ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಸೀನ್ ಜಹಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.;

Update: 2025-07-02 04:32 GMT

ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ತಮ್ಮ ಪತ್ನಿ ಹಸೀನ್ ಜಹಾನ್ ಮತ್ತು ಮಗಳ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 4 ಲಕ್ಷ ರೂಪಾಯಿ ಪಾವತಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. ಕಾನೂನು ವಿವಾದ ಬಗೆಹರಿಯುವವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ.

2023ರಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶಮಿ ಅವರಿಗೆ ತಮ್ಮ ಪತ್ನಿಗೆ 50,000 ಮತ್ತು ಮಗಳಿಗೆ 80,000 ರೂಪಾಯಿ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಸೀನ್ ಜಹಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಮುಕರ್ಜಿ ಅವರು, "ಅರ್ಜಿದಾರರಿಬ್ಬರ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಪ್ರಕರಣ ಇತ್ಯರ್ಥವಾಗುವವರೆಗೆ ಹಸೀನ್ ಜಹಾನ್‌ಗೆ ಮಾಸಿಕ 1.50 ಲಕ್ಷ ರೂಪಾಯಿ ಮತ್ತು ಮಗಳಿಗೆ 2.50 ಲಕ್ಷ ರೂಪಾಯಿ ನೀಡುವುದು ನ್ಯಾಯಯುತ ಮತ್ತು ಸಮಂಜಸ" ಎಂದು ಹೇಳಿದ್ದಾರೆ. ಅಲ್ಲದೆ, ಮಗಳ ಶಿಕ್ಷಣ ಅಥವಾ ಇತರೆ ಅಗತ್ಯಗಳಿಗಾಗಿ ತಂದೆಯು ಸ್ವಯಂಪ್ರೇರಿತವಾಗಿ ಈ ಮೊತ್ತಕ್ಕಿಂತ ಹೆಚ್ಚು ಹಣವನ್ನು ಭರಿಸಲು ಸ್ವತಂತ್ರರು ಎಂದೂ ಉಲ್ಲೇಖಿಸಿದ್ದಾರೆ.

ದೂರು ಮತ್ತು ಆರೋಪಗಳು

ಶಮಿ ಅವರನ್ನು 2014ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದ ಹಸೀನ್ ಜಹಾನ್, 2018ರಲ್ಲಿ ಅವರ ವಿರುದ್ಧ ದೂರು ದಾಖಲಿಸಿದ್ದರು. ಶಮಿ ಮತ್ತು ಅವರ ಕುಟುಂಬದವರು ತಮಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಮತ್ತು ಮಗಳ ಆರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ, 'ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ (PWDV) ಕಾಯ್ದೆ-2005'ರ ಸೆಕ್ಷನ್ 12ರ ಅಡಿಯಲ್ಲಿ ಜಾದವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕೌಟುಂಬಿಕ ದೌರ್ಜನ್ಯದ ಜೊತೆಗೆ, ಜಹಾನ್ ಅವರು ವರದಕ್ಷಿಣೆ ಕಿರುಕುಳ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನೂ ಶಮಿ ವಿರುದ್ಧ ಮಾಡಿದ್ದರು.

ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ತಮಗೆ ಮಾಸಿಕ 7 ಲಕ್ಷ ಮತ್ತು ಮಗಳಿಗೆ 3 ಲಕ್ಷ ರೂಪಾಯಿ ಮಧ್ಯಂತರ ಆರ್ಥಿಕ ಪರಿಹಾರ ನೀಡುವಂತೆ ಶಮಿಗೆ ಆದೇಶಿಸಬೇಕು ಎಂದು ಮನವಿ ಮಾಡಿದ್ದರು. ಆದರೆ, ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿ, ಮಗಳಿಗೆ 80,000 ನೀಡಲು ನಿರ್ದೇಶಿಸಿತ್ತು. ನಂತರ, ಪತ್ನಿಗೆ 50,000 ರೂಪಾಯಿ ನೀಡುವಂತೆ ಆದೇಶದಲ್ಲಿ ಬದಲಾವಣೆ ಮಾಡಲಾಗಿತ್ತು.   

Tags:    

Similar News