ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಸಿ.ಎಂ ಸಿದ್ದರಾಮಯ್ಯ ಸೇರಿ ಗಣ್ಯರ ಅಭಿನಂದನೆ

ಎರಡನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.;

Update: 2024-06-30 07:17 GMT
ಮುಖ್ಯಮಂತ್ರಿ ಸಿದ್ದರಾಮಯ್ಯ
Click the Play button to listen to article

ಟಿ-20 ವಿಶ್ವಕಪ್ ಗೆದ್ದ ಭಾರತ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿ.ಎಂ ಸಿದ್ದರಾಮಯ್ಯ, ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಅಭಿನಂದನೆಗಳು. ನಿರ್ಣಾಯಕ ಹಂತದಲ್ಲಿ ನಮ್ಮವರು ತೋರಿದ ಸಂಘಟಿತ ಪ್ರದರ್ಶನ ಪಂದ್ಯದ ದಿಕ್ಕನ್ನೇ ಬದಲಿಸಿತು. ಇಡೀ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನೂ ಸೋಲದೆ ಅಜೇಯರಾಗುಳಿದು ವಿಶ್ವಕಪ್ ಟಿ20 ಜಯಿಸಿದ ಭಾರತ ತಂಡದ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.

ಒಂದು ಹಂತದಲ್ಲಿ ಗೆಲುವಿನ ಸನಿಹಕ್ಕೆ ಬಂದು ಕಡೇ ಕ್ಷಣದಲ್ಲಿ ಪಂದ್ಯ ಸೋತಿರುವ ದಕ್ಷಿಣ ಆಫ್ರಿಕಾ ತಂಡದ ಆಟವೂ ಮೆಚ್ಚತಕ್ಕದ್ದೆ. ಇದೊಂದು ಐತಿಹಾಸಿಕ ಕ್ಷಣ. ಕ್ರಿಕೆಟ್ ಪ್ರೇಮಿಯಾದ ನನಗೆ ನಮ್ಮವರ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಕೋಟ್ಯಂತರ ಜನರ ಹರಕೆ, ಹಾರೈಕೆಗಳು ಕಡೆಗೂ ಫಲಕೊಟ್ಟಿದೆ, ವಿಶ್ವಕಪ್ ಮರಳಿ ಭಾರತದ ಮಡಿಲು ಸೇರಿದೆ ಎಂದು ತಿಳಿಸಿದ್ದಾರೆ.

ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ: ಡಿಕೆಶಿ

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದು, ಟಿ-20 ವಿಶ್ವಕಪ್ 2024ರ ಫೈನಲ್ಸ್‌ನಲ್ಲಿ ಭಾರತ ತಂಡದ್ದು ಅದ್ಭುತ ಪ್ರದರ್ಶನ. ಪಂದ್ಯಾವಳಿಯುದ್ದಕ್ಕೂ ತಂಡ ತೋರಿದ ಸಮರ್ಪಣೆ ಮತ್ತು ಪರಿಶ್ರಮ ಸ್ಪಷ್ಟವಾಗಿತ್ತು. ಈ ಅದ್ಭುತ ಗೆಲುವನ್ನು ಸಾಧಿಸುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅಭಿನಂದನೆ ಸಲ್ಲಿಸಿದ ಹೆಚ್ ಡಿ.ಕುಮಾರಸ್ವಾಮಿ

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪೋಸ್ಟ್ ಮಾಡಿ, "ಟಿ20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ ರೋಹಿತ್ ಶರ್ಮ ನೇತೃತ್ವದ ಭಾರತ ತಂಡಕ್ಕೆ ಶುಭಾಶಯಗಳು ಮತ್ತು ಸಮಸ್ತ ಭಾರತೀಯರ ಪರವಾಗಿ ಅಭಿನಂದನೆಗಳು" ಎಂದಿದ್ದಾರೆ.

ಅನೇಕ ರೋಚಕ ತಿರುವುಗಳ ಫೈನಲ್ ಪಂದ್ಯ ಭಾರತೀಯರೆಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿತ್ತು. ಎಲ್ಲರ ಆಕಾಂಕ್ಷೆ, ನಿರೀಕ್ಷೆಯಂತೆ ಭಾರತ ಗೆದ್ದು ಬೀಗಿದೆ. ನಮ್ಮ ಹೆಮ್ಮೆಯ ತಂಡಕ್ಕೆ ಶುಭವಾಗಲಿ ಎಂದು ತಿಳಿಸಿದ್ದಾರೆ.

ಹೆಮ್ಮೆಯ ಕ್ರಿಕೆಟ್​ ತಂಡಕ್ಕೆ ಶುಭವಾಗಲಿ: ದಿನೇಶ್‌ ಗುಂಡೂರಾವ್‌

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, 'ಅನೇಕ ರೋಚಕ ತಿರುವುಗಳ ಫೈನಲ್ ಪಂದ್ಯ ಭಾರತೀಯರೆಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿತ್ತು. ಎಲ್ಲರ ಆಕಾಂಕ್ಷೆ, ನಿರೀಕ್ಷೆಯಂತೆ ತಂಡ ಗೆದ್ದು ಬೀಗಿದೆ. ಹೆಮ್ಮೆಯ ಕ್ರಿಕೆಟ್​ ತಂಡಕ್ಕೆ ಶುಭವಾಗಲಿ' ಎಂದು ಹಾರೈಸಿದ್ದಾರೆ.

ಶನಿವಾರ (ಜೂ.29) ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್​​ ಪಂದ್ಯದಲ್ಲಿ 7 ರನ್​ಗಳ ಜಯ ಸಾಧಿಸಿದ ಭಾರತ, 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದುಕೊಂಡಿದೆ.

Tags:    

Similar News