ಟೆಸ್ಟ್ ಕ್ರಿಕೆಟ್‌ನ 'ಆಧುನಿಕ ಗೋಡೆ'ಗೆ ವಿದಾಯ: ಚೇತೇಶ್ವರ್ ಪೂಜಾರ ಕ್ರಿಕೆಟ್ ಜಗತ್ತಿಗೆ ನಿವೃತ್ತಿ

36ರ ಹರೆಯದ ಪೂಜಾರ, ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 43.60ರ ಉತ್ತಮ ಸರಾಸರಿಯಲ್ಲಿ 19 ಶತಕಗಳೊಂದಿಗೆ 7,195 ರನ್‌ಗಳನ್ನು ಗಳಿಸಿದ್ದಾರೆ.;

Update: 2025-08-24 06:43 GMT

ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲಿ 'ತಾಳ್ಮೆ' ಮತ್ತು 'ಸ್ಥಿರತೆ'ಗೆ ಇನ್ನೊಂದು ಹೆಸರಿನಂತಿದ್ದ ಚೇತೇಶ್ವರ್ ಪೂಜಾರ, ತಮ್ಮ ಅಮೋಘ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸಿದ ಪೂಜಾರ, ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದ ಅವರ ಬ್ಯಾಟಿಂಗ್ ಶೈಲಿಯನ್ನು ಇನ್ನು ಮುಂದೆ ಕಾಣಲಾಗುವುದಿಲ್ಲ. ರಾಹುಲ್ ದ್ರಾವಿಡ್ ನಂತರ ಟೆಸ್ಟ್ ಕ್ರಿಕೆಟ್‌ನ ಮೂರನೇ ಕ್ರಮಾಂಕದಲ್ಲಿ ಭಾರತಕ್ಕೆ ಆಸರೆಯಾಗಿದ್ದ ಇವರು, 'ಆಧುನಿಕ ಗೋಡೆ' ಎಂದೇ ಖ್ಯಾತಿ ಪಡೆದಿದ್ದರು.

ಅಂಕಿಅಂಶಗಳಲ್ಲಿ ಪೂಜಾರರ ಸಾಧನೆ

36ರ ಹರೆಯದ ಪೂಜಾರ, ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 43.60ರ ಉತ್ತಮ ಸರಾಸರಿಯಲ್ಲಿ 19 ಶತಕಗಳೊಂದಿಗೆ 7,195 ರನ್‌ಗಳನ್ನು ಗಳಿಸಿದ್ದಾರೆ. ಈ ಸಾಧನೆಯು ಭಾರತದ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅವರನ್ನು ಎಂಟನೇ ಸ್ಥಾನಕ್ಕೆ ಏರಿಸಿದೆ. ಕೇವಲ ರನ್ ಗಳಿಸುವುದಷ್ಟೇ ಅಲ್ಲ, ಪಿಚ್ ಮೇಲೆ ದೀರ್ಘಕಾಲ ನಿಂತು ಎದುರಾಳಿ ಬೌಲರ್‌ಗಳನ್ನು ದಣಿಸುವ ಅವರ ಸಾಮರ್ಥ್ಯ ಅನನ್ಯವಾಗಿತ್ತು.

ದ್ರಾವಿಡ್‌ನ ಉತ್ತರಾಧಿಕಾರಿ, ಆಸ್ಟ್ರೇಲಿಯಾದಲ್ಲಿ ಹೀರೋ

ಪೂಜಾರರ ಬ್ಯಾಟಿಂಗ್ ಶೈಲಿ ಮತ್ತು ಮನೋಸ್ಥೈರ್ಯ, ರಾಹುಲ್ ದ್ರಾವಿಡ್ ಅವರನ್ನು ನೆನಪಿಸುತ್ತಿತ್ತು. ರಾಜ್‌ಕೋಟ್ ಮೂಲದ ಈ ಆಟಗಾರ ತಮ್ಮ ವೃತ್ತಿಜೀವನದುದ್ದಕ್ಕೂ ಮೂರನೇ ಕ್ರಮಾಂಕದಲ್ಲಿ ಭಾರತ ತಂಡಕ್ಕೆ ಆಧಾರಸ್ತಂಭವಾಗಿದ್ದರು. 2018-19ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಮೊದಲ ಬಾರಿಗೆ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವಲ್ಲಿ ಅವರ ಪಾತ್ರ ನಿರ್ಣಾಯಕವಾಗಿತ್ತು. ಆ ಸರಣಿಯಲ್ಲಿ ಅವರು 521 ರನ್ ಗಳಿಸಿ, 1,258 ಎಸೆತಗಳನ್ನು ಎದುರಿಸಿ, ಮೂರು ಭರ್ಜರಿ ಶತಕ ಸಿಡಿಸಿದ್ದರು. ಆಸ್ಟ್ರೇಲಿಯಾದ ಬೌಲರ್‌ಗಳನ್ನು ತಾಳ್ಮೆಯಿಂದ ದಣಿಸಿದ ಅವರ ಇನ್ನಿಂಗ್ಸ್‌ಗಳು ಭಾರತದ ಐತಿಹಾಸಿಕ ಗೆಲುವಿಗೆ ಬುನಾದಿ ಹಾಕಿದ್ದವು. ನಂತರದ ಆಸ್ಟ್ರೇಲಿಯಾ ಪ್ರವಾಸದಲ್ಲೂ ಅವರ ಕೊಡುಗೆ ಅಪಾರವಾಗಿತ್ತು.

ಭಾವನಾತ್ಮಕ ವಿದಾಯ

ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರ ಬರೆದಿರುವ ಪೂಜಾರ, "ಭಾರತದ ಜೆರ್ಸಿ ಧರಿಸಿ, ರಾಷ್ಟ್ರಗೀತೆ ಹಾಡಿ ಪ್ರತಿ ಬಾರಿಯೂ ಮೈದಾನಕ್ಕಿಳಿದಾಗ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದ್ದು ನನ್ನ ಬದುಕಿನ ಸಾರ್ಥಕ ಕ್ಷಣಗಳು. ಆ ಭಾವನೆಯನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ" ಎಂದು ಹೇಳಿಕೊಂಡಿದ್ದಾರೆ. "ಎಲ್ಲದಕ್ಕೂ ಒಂದು ಕೊನೆಯಿರುತ್ತದೆ ಎಂಬಂತೆ, ನಾನು ಭಾರತೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ. ನನ್ನ ಈ ಪಯಣದಲ್ಲಿ ಬೆಂಬಲ ನೀಡಿದ ಎಲ್ಲರಿಗೂ ನನ್ನ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಪೂಜಾರ ಕೊನೆಯ ಬಾರಿಗೆ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಓವಲ್‌ನಲ್ಲಿ ಭಾರತ ತಂಡದ ಜೆರ್ಸಿ ತೊಟ್ಟಿದ್ದರು. ಅಂದಿನಿಂದ, ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಅವರನ್ನು ತಂಡದಿಂದ ಕೈಬಿಡಲಾಗಿತ್ತು. 'ಬಾಝ್‌ಬಾಲ್'ನಂತಹ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮೇಲುಗೈ ಸಾಧಿಸುತ್ತಿರುವ ಈ ಕಾಲದಲ್ಲಿ, ಪೂಜಾರರಂತಹ ತಾಳ್ಮೆಯ ಆಟಗಾರರ ನಿವೃತ್ತಿಯು ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಯುಗಾಂತ್ಯವನ್ನು ಸೂಚಿಸುತ್ತದೆ. ಅವರ ವೃತ್ತಿಜೀವನವು ಯುವ ಆಟಗಾರರಿಗೆ ಶಿಸ್ತು, ಏಕಾಗ್ರತೆ ಮತ್ತು ತಂಡದ ಹಿತಾಸಕ್ತಿ ಮುಖ್ಯ ಎಂಬ ಸಂದೇಶವನ್ನು ರವಾನಿಸುತ್ತದೆ.

Tags:    

Similar News