Champions Trophy: ಫೆ.23ರಂದು ದುಬೈನಲ್ಲಿ ಭಾರತ-ಪಾಕ್‌ ಮುಖಾಮುಖಿ

ಫೆಬ್ರವರಿ 19ರಿಂದ ಮಾರ್ಚ್ 9 ರವರೆಗೆ ಪಂದ್ಯಾವಳಿ ನಡೆಯಲಿದೆ. ಕರಾಚಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.

Update: 2024-12-23 04:09 GMT
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಕ್ಷಣ (ಸಂಗ್ರಹ ಚಿತ್ರ)

ಹಲವು ತಿಂಗಳುಗಳ ಹಗ್ಜಜಗ್ಗಾಟದ ಬಳಿಕ ಚಾಂಪಿಯನ್ಸ್‌ ಟ್ರೋಫಿಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಭಾರತ ತಂಡವು ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿತ್ತು. ಅಂತಿಮವಾಗಿ ಭಾರತ ತಂಡ ಆಡುವ ಪಂದ್ಯಗಳನ್ನು ತಟಸ್ಥ ಜಾಗದಲ್ಲಿ ನಡೆಸಲು ಐಸಿಸಿ ಹಾಗೂ ಆತಿಥೇಯ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ನಿರ್ಧರಿಸಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತದ ಪಂದ್ಯಗಳು ಹಾಗೂ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ನಡೆಯಲಿವೆ.



ಬ್ಲಾಕ್ಬಸ್ಟರ್ ಭಾರತ ಮತ್ತು ಪಾಕಿಸ್ತಾನ ನಡುವಿನ ಲೀಗ್‌ ಹಂತದ ಪಂದ್ಯವು ಫೆಬ್ರವರಿ 23 ರಂದು (ಭಾನುವಾರ) ದುಬೈನಲ್ಲಿ ನಡೆಯಲಿದೆ ಎಂದು ಭಾನುವಾರ (ಡಿಸೆಂಬರ್ 22) ವರದಿಗಳು ತಿಳಿಸಿವೆ. ಫೆಬ್ರವರಿ 19ರಿಂದ ಮಾರ್ಚ್ 9 ರವರೆಗೆ ಪಂದ್ಯಾವಳಿ ನಡೆಯಲಿದೆ. ಕರಾಚಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.

ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಯುಎಇ ಸಹವರ್ತಿ ಶೇಖ್ ನಹ್ಯಾನ್ ಅಲ್ ಮುಬಾರಕ್ ನಡುವೆ ಶನಿವಾರ ರಾತ್ರಿ ನಡೆದ ಸಭೆಯ ನಂತರ ದುಬೈಯನ್ನು ತಟಸ್ಥ ಸ್ಥಳವಾಗಿ ಆಯ್ಕೆ ಮಾಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ದೃಢಪಡಿಸಿದೆ.

ನಖ್ವಿ ಅವರು ಪಾಕಿಸ್ತಾನ ಆತಿಥ್ಯದ ಮೆಗಾ ಕ್ರಿಕೆಟ್‌ ಟೂರ್ನಿಗೆ ವ್ಯವಸ್ಥಾಪನಾ ಮತ್ತು ಆಡಳಿತಾತ್ಮಕ ಸಂಗತಿಗಳನ್ನು ಅಂತಿಮಗೊಳಿಸಿದರು.

2027ರ ತನಕ ಹೈಬ್ರಿಡ್‌ ವ್ಯವಸ್ಥೆಯ ಭರವಸೆ

2027ರವರೆಗೆ ಭಾರತದ ಆತಿಥ್ಯದಲ್ಲಿ ನಡೆಯುವ ಟಿ20 ಚಾಂಪಿಯನ್ಸ್‌ ಟ್ರೋಫಿಗೂ ಹೈಬ್ರಿಡ್‌ ಮಾದರಿಯನ್ನೇ ಅನುಸರಿಸಲಾಗುವುದು ಎಂದು ಐಸಿಸಿ ಭರವಸೆ ನೀಡಿದ ಬಳಿಕ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಈ ಬಾರಿಯ ಹೈಬ್ರಿಡ್‌ ಮಾದರಿಗೆ ಒಪ್ಪಿಗೆ ಕೊಟ್ಟಿತು. ಹೀಗಾಗಿ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಸಮಸ್ಯೆ ಕೊನೆಗೊಂಡಿತು.

ಐಸಿಸಿ ಈಗ ಈವೆಂಟ್‌ನ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಪಾಕಿಸ್ತಾನವು 9 ರಿಂದ 10 ಪಂದ್ಯಗಳಿಗೆ ಆತಿಥ್ಯ ವಹಿಸುವ ನಿರೀಕ್ಷೆಯಿದೆ. ಭಾರತ ಫೈನಲ್‌ ಅರ್ಹತೆ ಪಡೆಯದಿದ್ದರೆ ಫೈನಲ್ ಲಾಹೋರ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

2025ರ ಚಾಂಪಿಯನ್ಸ್ ಟ್ರೋಫಿ (ಪಾಕಿಸ್ತಾನ), ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ ಮತ್ತು 2026ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗಳಿಗೆ ಹೈಬ್ರಿಡ್ ಮಾದರಿ ಅನ್ವಯವಾಗಲಿದೆ.

ಭಾರತದ ಪ್ರಯಾಣ ನಿರಾಕರಣೆ

ಫೆಬ್ರವರಿ-ಮಾರ್ಚ್‌ನಲ್ಲಿ ನಿಗದಿಯಾಗಿದ್ದ ಚಾಂಪಿಯನ್ಸ್‌ ಟ್ರೋಫಿಗೆ, ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ತಂಡ ನಿರಾಕರಿಸಿತ್ತು. 150 ಜನರ ಸಾವಿಗೆ ಕಾರಣವಾದ 2008 ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಭಾರತೀಯರು ಪಾಕಿಸ್ತಾನದಲ್ಲಿ ಆಡಿಲ್ಲ. ಉಭಯ ದೇಶಗಳ ಕೊನೆಯ ದ್ವಿಪಕ್ಷೀಯ ಟೂರ್ನಿ 2012 ರಲ್ಲಿ ನಡೆದಿತ್ತು.

ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ಸರ್ಕಾರದ ಅನುಮತಿಯ ಅಗತ್ಯವಿರುತ್ತದೆ ಎಂದು ಬಿಸಿಸಿಐ ಹೇಳಿತ್ತು. ಬಿಸಿಸಿಐನ ನಿಲುವು ಸ್ಪಷ್ಟವಾಗಿತ್ತು. ಆದಾಗ್ಯೂ ಹೈಬ್ರಿಡ್‌ ವ್ಯವಸ್ಥೆಗೆ "ಏಕಪಕ್ಷೀಯ" ನಿರ್ಧಾರ ತೆಗೆದುಕೊಳ್ಳಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಒಪ್ಪಿರಲಿಲ್ಲ.

ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ತನ್ನ ತಂಡವನ್ನು ಭಾರತಕ್ಕೆ ಕಳುಹಿಸಿದ್ದ ಪಿಸಿಬಿ, ಹೈಬ್ರಿಡ್ ಮಾದರಿಯನ್ನು ಸ್ಪಷ್ಟವಾಗಿ ವಿರೋಧಿಸಿತ್ತು ಆದರೆ ಅಂತಿಮವಾಗಿ ಪರಸ್ಪರ ಒಪ್ಪಂದದ ಮೇಳೆ ಒಪ್ಪಿಕೊಂಡಿತು.

ಚಾಂಪಿಯನ್ಸ್ ಟ್ರೋಫಿ 2025ರ ತಂಡ ಗುಂಪುಗಳು  

ಗ್ರೂಪ್ ಎ: ಪಾಕಿಸ್ತಾನ, ಬಾಂಗ್ಲಾದೇಶ, ಭಾರತ, ನ್ಯೂಜಿಲೆಂಡ್

ಬಿ ಗುಂಪು: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ

Tags:    

Similar News