ಬೆಂಗಳೂರಿನ ಟೆನಿಸ್​​ ಸ್ಟೇಡಿಯಮ್​ಗೆ ಎಸ್​ಎಂ ಕೃಷ್ಣ ಹೆಸರು ನಾಮಕರಣ

ಕಾರ್ಯಕ್ರಮದಲ್ಲಿ ಕರ್ನಾಟಕದ 10 ಯುವ ಮತ್ತು ಭರವಸೆಯ ಟೆನಿಸ್ ಆಟಗಾರರಿಗೆ ಒಟ್ಟು 12 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನ ನೀಡಲಾಯಿತು.;

Update: 2025-03-28 14:47 GMT

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಗೆ (ಕೆಎಸ್‌ಎಲ್‌ಟಿಎ) ದೀರ್ಘಕಾಲದ ಅಧ್ಯಕ್ಷರಾಗಿದ್ದ ದಿವಂಗತ ಎಸ್‌ಎಂ ಕೃಷ್ಣ ಅವರಿಗೆ ಗೌರವ ಸೂಚಿಸುವ ಸಲುವಾಗಿ, ರಾಜ್ಯದ ಅತ್ಯುನ್ನತ ಟೆನಿಸ್ ಸಂಸ್ಥೆಯು ಶುಕ್ರವಾರ (ಮಾರ್ಚ್ 28) ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಕೆಎಸ್‌ಎಲ್‌ಟಿಎ ಸ್ಟೇಡಿಯಂಗೆ "ಎಸ್‌ಎಂ ಕೃಷ್ಣ ಟೆನಿಸ್ ಸ್ಟೇಡಿಯಂ" ಎಂದು ಮರುನಾಮಕರಣ ಮಾಡಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕದ 10 ಯುವ ಮತ್ತು ಭರವಸೆಯ ಟೆನಿಸ್ ಆಟಗಾರರಿಗೆ ಒಟ್ಟು 12 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನ ನೀಡಲಾಯಿತು ಎಂದು ಕೆಎಸ್‌ಎಲ್‌ಟಿಎ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಮರುನಾಮಕರಣ ಸಮಾರಂಭವನ್ನು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕೆಎಸ್‌ಎಲ್‌ಟಿಎ ಅಧ್ಯಕ್ಷ ಆರ್. ಅಶೋಕ್ ನೇತೃತ್ವದಲ್ಲಿ ನಡೆಸಲಾಯಿತು. ಈ ಸಮಾರಂಭದಲ್ಲಿ ಕೃಷ್ಣ ಅವರ ಪತ್ನಿ ಪ್ರೇಮಾ, ಅವರ ಪುತ್ರಿಯರಾದ ಮಾಳವಿಕಾ ಮತ್ತು ಶಾಂಭವಿ, ಕರ್ನಾಟಕದ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕೆಎಸ್‌ಎಲ್‌ಟಿಎ ಹಿರಿಯ ಉಪಾಧ್ಯಕ್ಷ ಮತ್ತು ಅಂತರರಾಷ್ಟ್ರೀಯ ಟೆನಿಸ್ ತಾರೆ ಹಾಗೂ ಮಾಜಿ ವಿಶ್ವ ನಂ. 1 ಡಬಲ್ಸ್ ಆಟಗಾರ ರೋಹನ್ ಬೊಪ್ಪಣ್ಣ ಇದ್ದರು.

ಟೆನಿಸ್​ಗೆ ಕೃಷ್ಣ ಅವರ ಕೊಡುಗೆ

ಟೆನಿಸ್‌ ಆಟಗಾರರಾಗಿದ್ದ ಕೃಷ್ಣ ಅವರು 1999 ರಿಂದ 2019 ರವರೆಗೆ ಕೆಎಸ್‌ಎಲ್‌ಟಿಎ ಅಧ್ಯಕ್ಷರಾಗಿದ್ದರು. ಅವರು 2015ರಿಂದ 2023 ರವರೆಗೆ ಆಲ್ ಇಂಡಿಯಾ ಟೆನಿಸ್ ಅಸೋಸಿಯೇಷನ್‌ನ (ಎಐಟಿಎ) ಜೀವಮಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಕ್ರೀಡೆಯ ಬಗ್ಗೆ ಆಸಕ್ತಿ ಮತ್ತು ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಬದ್ಧತೆಯೊಂದಿಗೆ, ಕೃಷ್ಣ ಅವರು ಆಗಿನ ಕೆಎಸ್‌ಎಲ್‌ಟಿಎ ಸೌಲಭ್ಯವನ್ನು ಉನ್ನತೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆರಂಭದಲ್ಲಿ ಅದು ಕೇವಲ ಮಣ್ಣಿನ ಕೋರ್ಟ್ ಆಗಿತ್ತು. ಅದನ್ನು ಉತ್ಖೃಷ್ಟ ದರ್ಜೆಯ ಕೋರ್ಟ್​ ಆಗಿ ಮಾರ್ಪಡಿಸಿದ್ದರು.

ಬೆಂಗಳೂರಿಗೆ ಲೆಜೆಂಡ್ಸ್ ಟೂರ್, ಎಟಿಪಿ ವರ್ಲ್ಡ್ ಡಬಲ್ಸ್ ಚಾಂಪಿಯನ್‌ಶಿಪ್ ಮತ್ತು ಡಬ್ಲ್ಯೂಟಿಎ ಇಂಡಿಯನ್ ಓಪನ್‌ನಂತಹ ವಿಶ್ವ ದರ್ಜೆಯ ಟೂರ್ನಮೆಂಟ್‌ಗಳನ್ನು ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸೆರೆನಾ ಮತ್ತು ವೀನಸ್ ವಿಲಿಯಮ್ಸ್ ಸಹೋದರಿಯರನ್ನು ಬೆಂಗಳೂರಿಗೆ ಕರೆಸಿದ್ದರು.

ಟೆನಿಸ್​ ಅನ್ನು ಎರಡನೇ ಹಂತದ ನಗರಗಳು ಮತ್ತು ಇತರ ಜಿಲ್ಲೆಗಳಿಗೆ ಕೊಂಡೊಯ್ಯಲು ಕೃಷ್ಣ ನೆರವಾಗಿದ್ದರು. ಇಂದು 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಐಟಿಎಫ್ ಟೂರ್ನಮೆಂಟ್‌ಗಳು ನಡೆಯುತ್ತವೆ.

ಪ್ರೇಮಾ ಅವರ ನೆನಪು

ತಮ್ಮ ಪತಿ ಕೃಷ್ಣ ಅವರ ಟೆನಿಸ್ ಪ್ರೀತಿಯ ಬಗ್ಗೆ ಭಾವುಕರಾದ ಪ್ರೇಮಾ, "ಸಂಸತ್ ಚುನಾವಣೆಯ ಸಮಯವಿತ್ತು, ನಾವು ಗೆಲ್ಲುವುದಿಲ್ಲ ಎಂಬುದು ಖಚಿತವಾದಾಗಲೂ ಅವರು ಈಗಾಗಲೇ ಟೆನಿಸ್ ಜೆರ್ಸಿ ತೊಟ್ಟು ಆಡಲು ಸಿದ್ಧರಾಗಿದ್ದರು. ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಬಹಳ ಮುಖ್ಯ. ಈ ಗೌರವಕ್ಕೆ ಕೆಎಸ್‌ಎಲ್‌ಟಿಎಗೆ ನಮ್ಮ ಕುಟುಂಬದ ಎಲ್ಲರೂ ಕೃತಜ್ಞರಾಗಿದ್ದೇವೆ" ಎಂದು ಹೇಳಿದರು.

ಹೊಸ ಟೆನಿಸ್ ಸಂಕೀರ್ಣ ಯೋಜನೆ

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಆರ್. ಅಶೋಕ್, "ಎಸ್‌ಎಂ ಕೃಷ್ಣ ಅವರು ಈ ಕ್ರೀಡೆಯನ್ನು ತುಂಬಾ ಪ್ರೀತಿಸುತ್ತಿದ್ದರು. ನಾನು ಅವರ ಮನೆಗೆ ಹೋದಾಗಲೆಲ್ಲಾ ಅವರು ವಿಂಬಲ್ಡನ್ ಬಗ್ಗೆ ಉಲ್ಲೇಖಿಸುತ್ತಿದ್ದರು. ಈ ಸ್ಟೇಡಿಯಂ ಅವರ ಕಠಿಣ ಪರಿಶ್ರಮದ ಫಲ. ಸರ್ಕಾರವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅತ್ಯಾಧುನಿಕ ಟೆನಿಸ್ ಸಂಕೀರ್ಣ ನಿರ್ಮಿಸಲು ಏಳು ಎಕರೆ ಜಾಗ ಮಂಜೂರು ಮಾಡಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಪ್ರತಿ ವರ್ಷ ಎಸ್‌ಎಂ ಕೃಷ್ಣ ಸ್ಮಾರಕ ಟೂರ್ನಮೆಂಟ್ ಆಯೋಜಿಸುವುದರ ಜೊತೆಗೆ, ರಾಜ್ಯದ ಯುವ ಟೆನಿಸ್ ಆಟಗಾರರಿಗೆ ಎಸ್‌ಎಂ ಕೃಷ್ಣ ಸ್ಮಾರಕ ವಿದ್ಯಾರ್ಥಿವೇತನ ಸಹ ನೀಡುತ್ತೇವೆ ಎಂದು ಘೋಷಿಸಲು ಸಂತೋಷವಾಗುತ್ತಿದೆ" ಎಂದರು.

ರೋಹನ್ ಬೊಪ್ಪಣ್ಣ ಮಾತನಾಡಿ, "ವರ್ಲ್ಡ್ ಡಬಲ್ಸ್ ಬೆಂಗಳೂರಿನಲ್ಲಿ ನಡೆದಾಗ ನನಗೆ 19 ವರ್ಷ ವಯಸ್ಸಾಗಿತ್ತು. ಯುವ ಆಟಗಾರನಾಗಿ ಅಂತರರಾಷ್ಟ್ರೀಯ ಆಟಗಾರರನ್ನು ನೋಡುವುದು ನನಗೆ ದೊಡ್ಡ ಪ್ರೇರಣೆಯಾಗಿತ್ತು. ಇಂದು ಇಲ್ಲಿ ಎಲ್ಲ ಅಭಿವೃದ್ಧಿ ಮತ್ತು ಬೆಳವಣಿಗೆ ಕಾಣುತ್ತಿದೆ. ಈ ಐಕಾನಿಕ್ ಸ್ಟೇಡಿಯಂಗೆ ಅವರ ಹೆಸರನ್ನು ಇಡುವುದು ಸೂಕ್ತ ಗೌರವ. ಕೃಷ್ಣ ಸರ್ ಅವರ ನಾಯಕತ್ವದಲ್ಲಿ, ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ಟೆನಿಸ್ ತಲುಪಿತು. ನಾನು ಆ ಆಟಗಾರರಲ್ಲಿ ಒಬ್ಬನಾಗಿದ್ದೇನೆ," ಎಂದು ಹೇಳಿದರು.

ಹೊಸದಾಗಿ ಹೆಸರಿಸಲಾದ ಈ ಸ್ಟೇಡಿಯಂನಲ್ಲಿ, ಎಸ್‌ಎಂ ಕೃಷ್ಣ ಸ್ಮಾರಕ ಟೂರ್ನಮೆಂಟ್ - ಐಟಿಎಫ್ ಪುರುಷರ ಎಂ25 ಈವೆಂಟ್ ಅನ್ನು 30,000 ಡಾಲರ್ ಬಹುಮಾನದೊಂದಿಗೆ ಏಪ್ರಿಲ್ 1 ರಿಂದ 6 ರವರೆಗೆ ಆಯೋಜಿಸಲಿದೆ.

Tags:    

Similar News