ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ, ಇನ್ನೂ ಹಲವರಿಗೆ ಹುಡುಕಾಟ

ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಅವರು ನದಿ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಇಳಿಸುವ ಸಮಯದಲ್ಲಿ ಈ ದಾಳಿ ನಡೆದಿದೆ.;

Update: 2025-05-29 05:15 GMT

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಅಬ್ದುಲ್ ರಹಿಮಾನ್ (32) ಹತ್ಯೆ ಮತ್ತು ಕಲಂದರ್ ಶಾಫಿ ಮೇಲಿನ ಕೊಲೆ ಯತ್ನ ಪ್ರಕರಣ‌ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಮಂಗಳವಾರ ರಾತ್ರಿ ಕೊಳತ್ತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ ಹಾಗೂ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ಅವರ‌ ಕೊಲೆ ಮತ್ತು ಕಲಂದರ್ ಶಾಫಿ ಕೊಲೆ ಯತ್ನ ನಡೆದಿತ್ತು. ಪ್ರಕರಣದ ಪ್ರಮುಖ ಆರೋಪಿಗಳಾದ ದೀಪಕ್‌, ಸುಮಿತ್‌ ಸೇರಿದಂತೆ ಮೂವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ದೀಪಕ್ ಮತ್ತು ಸುಮಿತ್ ಸೇರಿ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬಂಧಿತರಾದ ದೀಪಕ್ ಮತ್ತು ಸುಮಿತ್ ಕೊಲೆಯಾದ ಅಬ್ದುಲ್ ರಹಿಮಾನ್ ಮತ್ತು ಕೊಲೆ ಯತ್ನಕ್ಕೀಡಾದ ಕಲಂದರ್ ಅವರಿಗೆ ಪರಿಚಯಸ್ಥರೇ ಆಗಿದ್ದಾರೆ ಎಂದು ತಿಳಿದು ಬಂದಿದೆ. ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಅವರು ನದಿ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಇಳಿಸುವ ಸಮಯದಲ್ಲಿ ಈ ದಾಳಿ ನಡೆದಿದೆ. ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು ಇವರೊಂದಿಗೆ ಬಂದಿದ್ದ 15 ಮಂದಿ ಏಕಾಏಕಿ ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು, ತಲವಾರು, ಚೂರಿ ಮತ್ತು ರಾಡ್‌ಗಳಿಂದ ತಿವಿದು, ಕಡಿದಿದ್ದಾರೆ.

ದಾಳಿಯನ್ನು ತಡೆಯಲು ಹೋದ ಕಲಂದರ್ ಶಾಫಿ ಮೇಲೂ ಆರೋಪಿಗಳು ಚೂರಿಯಿಂದ ಎದೆ, ಬೆನ್ನು, ಕೈಗಳಿಗೆ ತಿವಿದು, ತಲವಾರಿನಿಂದ ಕಡಿದಿದ್ದಾರೆ. ಈ ವೇಳೆ ಅಲ್ಲಿದ್ದವರು ಬೊಬ್ಬೆ ಹಾಕಿದಾಗ, ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾಗಿ ಆಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಕಲಂದರ್ ಶಾಫಿ ಅವರು, ಹಲ್ಲೆಗೈದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಮಾಹಿತಿ ನೀಡಿದ್ದಾರೆ. ಈ ಮಾಹಿತಿಯನ್ನು ಆಧರಿಸಿ, ಕಲಂದರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಮುಹಮ್ಮದ್ ನಿಸಾರ್ ಎಂಬವರು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲು ಮತ್ತು ತನಿಖೆ

ಮೃತ ಅಬ್ದುಲ್ ರಹಿಮಾನ್ ಅವರು ಕೊಳ್ತಮಜಲು ಜುಮ್ಮಾ ಮಸೀದಿಯ ಕಾರ್ಯದರ್ಶಿಯಾಗಿದ್ದರು. ತೀವ್ರವಾಗಿ ಗಾಯಗೊಂಡ ಕಲಂದರ್ ಶಾಫಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರೂ ಊರಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ತಿಳಿದು ಬಂದಿದೆ. 

Tags:    

Similar News