ಬಾಂಗ್ಲಾದೇಶ: ಪಾಕಿಸ್ತಾನ ವಿರುದ್ಧ ಆಟವಾಡಿದ ಪದಚ್ಯುತ ಸಂಸದ ಶಕೀಬ್

Update: 2024-08-21 13:18 GMT

ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಮತ್ತು ಮಾಜಿ ಸಂಸದ ಶಕೀಬ್ ಅಲ್ ಹಸನ್ ಅವರು ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬುಧವಾರ ಕಾಣಿಸಿಕೊಂಡರು. 

ಶೇಕ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಟಿಕೆಟ್‌ನಲ್ಲಿ ಶಕೀಬ್‌ ಅವರು ಮಗರಾ ಕ್ಷೇತ್ರದಿಂದ ಕಳೆದ ಜನವರಿಯಲ್ಲಿ ಗೆದ್ದಿದ್ದರು. ಶಕೀಬ್(37) ಅವರನ್ನು ಬಾಂಗ್ಲಾದೇಶದ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಬಾರದು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ಮಧ್ಯಂತರ ಸರ್ಕಾರ ಅವರ ಸೇರ್ಪಡೆಗೆ ಅನುಮತಿ ನೀಡಿತು. ಪಾಕಿಸ್ತಾನದ ವಿರುದ್ಧದ ಎರಡು ಟೆಸ್ಟ್‌ಗಳಲ್ಲಿ ಮೊದಲನೆಯದು ಬುಧವಾರ ಪ್ರಾರಂಭವಾಯಿತು. 

ದೇಶದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಕ್ಕಾಗಿ ಅನೇಕ ಬಾಂಗ್ಲಾದೇಶೀಯರು ಶಕೀಬ್ ಮೇಲೆ ಕೋಪಗೊಂಡಿದ್ದರು. ಇತ್ತೀಚೆಗೆ ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ20 ಲೀಗ್‌ನಲ್ಲಿ ಅವರ ವಿರುದ್ಧ ಘೋಷಣೆ ಕೂಗಲಾಗಿತ್ತು. 

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಾಜಿ ಸದಸ್ಯ ರಫೀಕುಲ್ ಇಸ್ಲಾಂ,ʻವಿದ್ಯಾರ್ಥಿಗಳು ಕೊಲ್ಲಲ್ಪಟ್ಟಾಗ ಶಕೀಬ್‌ ಪ್ರತಿಭಟಿಸಲಿಲ್ಲ.ವಿದ್ಯಾರ್ಥಿಗಳು ಅವರನ್ನು ಐಕಾನ್ ಎಂದು ಪರಿಗಣಿಸಿದ್ದಾರೆ. ತಮ್ಮ ಮೌನಕ್ಕೆ ಅವರು ವಿವರಣೆ ನೀಡಬೇಕಿತ್ತು,ʼ ಎಂದು ಹೇಳಿದರು.

ಬಾಂಗ್ಲಾದೇಶದ ಟೆಸ್ಟ್ ನಾಯಕ ನಜ್ಮುಲ್ ಹೊಸೈನ್ ಶಾಂಟೊ,ʻಶಕೀಬ್ ಒಬ್ಬ ಕ್ರಿಕೆಟಿಗನೇ ಹೊರತು ರಾಜಕಾರಣಿಯಲ್ಲ.ಅವರು ಇಷ್ಟು ದಿನ ಆಟ ಆಡಿದ್ದಾರೆ. ತಮ್ಮ ಪಾತ್ರವೇನು, ತನ್ನನ್ನು ಹೇಗೆ ಸಿದ್ಧಪಡಿಸಿಕೊಳ್ಳಬೇಕು ಎಂಬುದು ಗೊತ್ತಿದೆ. ನಾವೆಲ್ಲರೂ ಆತ ವೃತ್ತಿಪರ ಕ್ರಿಕೆಟಿಗ ಎಂದು ಪರಿಗಣಿಸುತ್ತೇವೆ,ʼ ಎಂದು ಮೊದಲ ಟೆಸ್ಟ್‌ನ ಮುನ್ನಾದಿನ ಹೇಳಿದ್ದರು.

ಶಕೀಬ್ ಬಾಂಗ್ಲಾದೇಶದ ಶ್ರೇಷ್ಠ ಕ್ರಿಕೆಟಿಗ ಎಂದು ಹೇಳಬಹುದು. 67 ಟೆಸ್ಟ್‌, 247 ಒಂದು ದಿನದ ಪಂದ್ಯ ಮತ್ತು 129 ಟಿ20 ಪಂದ್ಯ ಆಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14,000ಕ್ಕೂ ಹೆಚ್ಚು ರನ್ ಮತ್ತು 650 ಕ್ಕೂ ಹೆಚ್ಚು ವಿಕೆಟ್‌ ಗಳಿಸಿದ್ದಾರೆ.

Tags:    

Similar News