ಡಿ. 22ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು

ಸಿಂಧು ಅವರನ್ನು 2019ರಲ್ಲಿ ಚಿನ್ನ ಸೇರಿದಂತೆ ಐದು ವಿಶ್ವ ಚಾಂಪಿಯನ್​ಶಿಪ್​ ಪದಕಗಳನ್ನು ಹೊಂದಿರುವ ಕಾರಣ ಭಾರತದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

Update: 2024-12-03 03:43 GMT
PV Sindhu

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಷಟ್ಲರ್​ ಪಿ.ವಿ.ಸಿಂಧು ಡಿಸೆಂಬರ್ 22 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಭಾನುವಾರ ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಟರ್​ನ್ಯಾಷನಲ್​ ಟ್ರೋಫಿ ಗೆಲುವಿನೊಂದಿಗೆ ಸುದೀರ್ಘ ಪ್ರಶಸ್ತಿ ಬರ ಕೊನೆಗೊಳಿಸಿದ ಮಾಜಿ ವಿಶ್ವ ಚಾಂಪಿಯನ್, ಪೊಸಿಡೆಕ್ಸ್ ಟೆಕ್ನಾಲಜೀಸ್​​ನ ಕಾರ್ಯನಿರ್ವಾಹಕ ನಿರ್ದೇಶಕ ಹೈದರಾಬಾದ್ ಮೂಲದ ವೆಂಕಟ ದತ್ತ ಸಾಯಿ ಅವರನ್ನು ಮದುವೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


"ಎರಡೂ ಕುಟುಂಬಗಳು ಪರಸ್ಪರ ಪರಿಚಿತ. ಒಂದು ತಿಂಗಳ ಹಿಂದೆಯಷ್ಟೇ ಮದುವೆ ಮಾತುಕತೆಯನ್ನು ಅಂತಿಮಗೊಳಿಸಲಾಯಿತು. ಜನವರಿಯಿಂದ ಸಿಂಧು ಅವರ ಕ್ರೀಡಾ ವೇಳಾಪಟ್ಟಿಯಲ್ಲಿ ಬಿಡುವಿಲ್ಲದ ಕಾರಣ ಡಿಸೆಂಬರ್​ ಸೂಕ್ತ ಅವಧಿಯಾಗಿದೆ" ಎಂದು ಸಿಂಧು ಅವರ ತಂದೆ ಪಿ.ವಿ.ರಮಣ ಪಿಟಿಐಗೆ ತಿಳಿಸಿದ್ದಾರೆ.

ಈ ಕಾರಣಕ್ಕಾಗಿಯೇ ಎರಡೂ ಕುಟುಂಬಗಳು ಡಿಸೆಂಬರ್ 22 ರಂದು ವಿವಾಹ ಸಮಾರಂಭವನ್ನು ನಡೆಸಲು ನಿರ್ಧರಿಸಿವೆ. ಡಿಸೆಂಬರ್ 24ರಂದು ಹೈದರಾಬಾದ್​​ನಲ್ಲಿ ಆರತಕ್ಷತೆ ನಡೆಯಲಿದೆ. ಮುಂದಿನ ಋತುವು ಮುಖ್ಯವಾಗಲಿರುವುದರಿಂದ ಅವರು ಶೀಘ್ರದಲ್ಲೇ ತಮ್ಮ ತರಬೇತಿ ಪ್ರಾರಂಭಿಸಲಿದ್ದಾರೆ. ಮದುವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಡಿಸೆಂಬರ್ 20 ರಿಂದ ಪ್ರಾರಂಭವಾಗಲಿವೆ ಎಂದು ರಮಣ್ ಹೇಳಿದ್ದಾರೆ.

ಭಾರತದ ಶ್ರೇಷ್ಠ ಕ್ರೀಡಾಪಟು

ಸಿಂಧು ಅವರನ್ನು 2019ರಲ್ಲಿ ಚಿನ್ನ ಸೇರಿದಂತೆ ಐದು ವಿಶ್ವ ಚಾಂಪಿಯನ್​ಶಿಪ್​ ಪದಕಗಳನ್ನು ಹೊಂದಿರುವ ಕಾರಣ ಭಾರತದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ರಿಯೋ 2016 ಮತ್ತು ಟೋಕಿಯೊ 2020 ರಲ್ಲಿ ಸತತವಾಗಿ ಒಲಿಂಪಿಕ್ ಪದಕಗಳನ್ನು ಗೆದ್ದಿದ್ದಾರೆ. 2017ರಲ್ಲಿ ವೃತ್ತಿಜೀವನದ ಅತ್ಯುನ್ನತ ವಿಶ್ವ ಶ್ರೇಯಾಂಕದಲ್ಲಿ 2 ನೇ ಸ್ಥಾನವನ್ನು ಗಳಿಸಿದ್ದರು

ಒಂದು ವರ್ಷದ ಪ್ರೀತಿ

ಮೂಲಗಳ ಪ್ರಕಾರ ಸಿಂಧು ಮತ್ತು ಸಾಯಿ ಒಂದು ವರ್ಷದಿಂದ ಪರಸ್ಪರ ಪರಿಚಿತರು. ಜೋಡಿ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ . ಪಂದ್ಯದ ವೇಳೆ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಸಿಂಧು ಅವರ ಹಿರಿಯ ಸಹೋದರಿ ದಿವ್ಯಾ ಕೂಡ ಸಾಫ್ಟ್ವೇರ್ ಎಂಜಿನಿಯರ್ ಅವರನ್ನು ವಿವಾಹವಾಗಿದ್ದರು. ಕಳೆದ ತಿಂಗಳು ವಿಶ್ವದ ಮಾಜಿ ನಂ.1 ಕಿಡಂಬಿ ಶ್ರೀಕಾಂತ್ ಅವರು ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಸೋದರ ಸೊಸೆ ಶ್ರಾವ್ಯ ಅವರನ್ನು ವಿವಾಹವಾಗಿದ್ದರು.

ಪ್ರಸ್ತುತ ಆಂಧ್ರಪ್ರದೇಶ ಸರ್ಕಾರದಲ್ಲಿ ಡೆಪ್ಯೂಟಿ ಕಲೆಕ್ಟರ್ ಆಗಿರುವ 29 ವರ್ಷದ ಸಿಂಧು, ಪುಲ್ಲೇಲ ಗೋಪಿಚಂದ್ ಅವರ ಮಾರ್ಗದರ್ಶನದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು. . 2013ರಲ್ಲಿ ವಿಶ್ವ ಚಾಂಪಿಯನ್​ಶಿಪ್​ ಪದಕ ಗೆಲ್ಲುವ ಮೂಲಕ ಅವರು ಮುನ್ನೆಲೆಗೆ ಬಂದರು. ನಂತರ ಅವರು 2019 ರಲ್ಲಿ ವಿಶ್ವ ಚಾಂಪಿಯನ್ಶಿಪ್ ಚಿನ್ನ ಗೆದ್ದರು.

Tags:    

Similar News