55 ಎಸೆತದಲ್ಲಿ 19 ಸಿಕ್ಸರ್ ಸಿಡಿಸಿದ ಆಯುಷ್ ಬದೋನಿ

ಬದೋನಿ ಮತ್ತು ಆರ್ಯ ಎರಡನೇ ವಿಕೆಟ್‌ಗೆ 286 ರನ್‌ ಸೇರಿಸಿ, ಟಿ20 ಯಲ್ಲಿ ಅತ್ಯಧಿಕ ರ‌ನ್ ಜೊತೆಯಾಟದ ದಾಖಲೆ ಮಾಡಿದರು. ಬದೋನಿ, ಕ್ರಿಸ್‌ ಗೇಲ್‌ ಅವರ ದಾಖಲೆಯನ್ನು ಮರಿದರು.

Update: 2024-08-31 12:51 GMT

ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ಟಿ20 ಟೂರ್ನಮೆಂಟ್‌ನಲ್ಲಿ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಜ್ ನಾಯಕ ಆಯುಷ್ ಬದೋನಿ ಅವರು ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧ 55 ಎಸೆತಗಳಲ್ಲಿ 19 ಸಿಕ್ಸರ್‌ ಒಳಗೊಂಡ 165 ರನ್ ಗಳಿಸಿ, ದಾಖಲೆ ಮಾಡಿದ್ದಾರೆ. 

ಟಿ20 ಕ್ರಿಕೆಟ್‌ನಲ್ಲಿ ಕ್ರಿಸ್‌ ಗೇಲ್‌ ಹಾಗೂ ಎಸ್ಟೋನಿಯಾದ ಸಾಹಿಲ್ ಚೌಹಾಣ್ 18 ಸಿಕ್ಸರ್‌ ಗಳ ದಾಖಲೆಯನ್ನು ಮುರಿದಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) 2017 ರ ಆವೃತ್ತಿಯಲ್ಲಿ ಢಾಕಾ ಡೈನಮೈಟ್ಸ್ ವಿರುದ್ಧ ರಂಗ್‌ಪುರ ರೈಡರ್ಸ್‌ಗಾಗಿ ಗೇಲ್ 69 ಎಸೆತಗಳಲ್ಲಿ ಐದು ಬೌಂಡರಿ, 18 ಸಿಕ್ಸರ್‌ಗಳ 146 ರನ್ ಗಳಿಸಿದ್ದರು. ಈ ವರ್ಷ ಜೂನ್‌ನಲ್ಲಿ ಸೈಪ್ರಸ್ ವಿರುದ್ಧ ಎಸ್ಟೋನಿಯಾ ಪರ 41 ಎಸೆತಗಳಲ್ಲಿ 144 ರನ್ ಗಳಿಸಿದ್ದ ಭಾರತೀಯ ಮೂಲದ ಆಟಗಾರ ಚೌಹಾಣ್ 18 ಸಿಕ್ಸರ್‌ ಸಿಡಿಸಿದ್ದರು. 

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಪರ ಆಡುತ್ತಿರುವ ಬದೋನಿ, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಅವರ 165 (55 ಎಸೆತ, 8x4, 19x6) ಮತ್ತು ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಅವರ 50 ಎಸೆತಗಳಲ್ಲಿ 10 ಬೌಂಡರಿ ಮತ್ತು 10 ಸಿಕ್ಸರ್‌ಗಳ 120 ರನ್‌ಗಳಿಂದ ಡೆಲ್ಲಿ ಸೂಪರ್‌ಸ್ಟಾರ್ಜ್ 20 ಓವರ್‌ಗಳಲ್ಲಿ 5 ವಿಕೆಟ್‌ ಗೆ 308 ರನ್‌ ಗಳಿಸಿತು.

ಆರ್ಯ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ ಬಾರಿಸುವ ಮೂಲಕ ಯುವರಾಜ್ ಸಿಂಗ್ ಆಟವನ್ನು ಮರುಕಳಿಸಿದರು. ಬದೋನಿ ಮತ್ತು ಆರ್ಯ ಎರಡನೇ ವಿಕೆಟ್‌ಗೆ 286 ರನ್‌ಗಳ ಜೊತೆಯಾಟದಲ್ಲಿ ಟಿ20 ಯಲ್ಲಿ ಅತ್ಯಧಿಕ ಜೊತೆಯಾಟದ ದಾಖಲೆ ಮಾಡಿದರು. ಫೆಬ್ರವರಿಯಲ್ಲಿ ಚೀನಾ ವಿರುದ್ಧ ಮೊದಲ ವಿಕೆಟ್‌ಗೆ 258 ರನ್‌ ಸೇರಿಸಿದ್ದ ಜಪಾನಿನ ಲಾಚ್ಲಾನ್ ಯಮಾಮೊಟೊ ಲೇಕ್ ಮತ್ತು ಕೆಂಡೆಲ್ ಕಡೋವಾಕಿ ಫ್ಲೆಮಿಂಗ್ ಅವರ ದಾಖಲೆಯನ್ನು ಹಿಂದಿಕ್ಕಿದರು.

Tags:    

Similar News