2ನೇ ODI: ಭಾರತ 32 ರನ್‌ ಗಳಿಂದ ಸೋಲು; ಜೆಫ್ರಿ ವಾಂಡರ್ಸೆಗೆ 6 ವಿಕೆಟ್

Update: 2024-08-05 07:42 GMT

ಕೊಲಂಬೊ: ಎರಡನೇ ಏಕದಿನ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಅವರ ಮಾಂತ್ರಿಕ ಬೌಲಿಂಗ್‌ ನಿಂದ ಶ್ರೀಲಂಕಾ ತಂಡವು ಭಾರತ ವಿರುದ್ಧ 32 ರನ್‌ಗಳ ಗೆಲುವು ಸಾಧಿಸಿದೆ.

ಮೊದಲ ಪಂದ್ಯ ಡ್ರಾ ಆಗಿದ್ದು, ಶ್ರೀಲಂಕಾ ಮೂರು ಪಂದ್ಯಗಳ ಸರಣಿಯಲ್ಲಿ 1-0 ರಿಂದ ಮುನ್ನಡೆ ಸಾಧಿಸಿದೆ. ಸ್ಪಿನ್ನರ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಶ್ರೀಲಂಕಾ 241 ರನ್‌ ಗಳಿಸಿತು. ಆದರೆ, ಭಾರತ 42.2 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಯಿತು. ವಾಂಡರ್ಸೆ 33 ರನ್‌ಗಳಿಗೆ ಆರು ವಿಕೆಟ್‌ ಪಡೆದರು. 

ನಾಯಕ ರೋಹಿತ್ 44 ಎಸೆತಗಳಲ್ಲಿ 64 ರನ್ (5x4, 4x6) ಗಳಿಸಿದ್ದು, ಅವರು ಕ್ರೀಸ್‌ನಲ್ಲಿ ಇರುವವರೆಗೆ ವಿಭಿನ್ನ ಫಲಿತಾಂಶದ ಸಾಧ್ಯತೆ ಇದ್ದಿತ್ತು.ರೋಹಿತ್‌ ಪಿಚ್‌ನ ಸ್ವರೂಪವನ್ನು ಗಣಿಸದೆ, ಸ್ಪಿನ್ನರ್‌ಗಳಾದ ದುನಿತ್ ವೆಲ್ಲಲಾಗೆ ಮತ್ತು ಅಕಿಲ ದನಂಜಯ ಮತ್ತು ವೇಗಿ ಅಸಿತಾ ಫೆರ್ನಾಂಡೊ ಅವರನ್ನು ದಂಡಿಸಿದರು. ಶುಭ್‌ಮನ್ ಗಿಲ್ (35, 44 ಎಸೆತ) ಅವರ ಸಹಭಾಗಿತ್ವದಲ್ಲಿ 13.3 ಓವರ್‌ ಗಳಲ್ಲಿ 1 ವಿಕೆಟ್ಟಿಗೆ 97 ರನ್ ಜೋಡಿಸಿದರು. 

ಆದರೆ, ಜೆಫ್ರಿ ವಾಂಡರ್ಸೆ ಎಸೆತವನ್ನು ರೋಹಿತ್‌ ರಿವರ್ಸ್‌ ಸ್ವೀಪ್‌ ಮಾಡಿದಾಗ, ಚೆಂಡು ಪಾಥುಮ್ ನಿಸ್ಸಾಂಕಾ ಕೈ ಸೇರಿತು. ಆನಂತರ ಭಾರತೀಯ ಬ್ಯಾಟಿಂಗ್‌ ಸಂಕಷ್ಟಕ್ಕೆ ಸಿಲುಕಿತು. ಒಂದು ವಿಕೆಟ್ ನಷ್ಟಕ್ಕೆ 97 ರನ್ ನಿಂದ, 2-116, 3-116, 4-123, 5-133 ಮತ್ತು ಅಂತಿಮವಾಗಿ 6 ವಿಕೆಟ್‌ಗೆ 147 ಕ್ಕೆ ಕುಸಿಯಿತು. 10 ಓವರ್‌ಗಳಲ್ಲಿ 50 ರನ್‌ಗಳಿಗೆ ಆರು ವಿಕೆಟ್‌ ಬಿದ್ದವು. ಗಾಯಗೊಂಡಿದ್ದ ಹಸರಂಗ ಅವರ ಬದಲಿಯಾಗಿ ಬಂದಿದ್ದ ವಾಂಡರ್ಸೆ, ಪಂದ್ಯವನ್ನು ತಿರುಗಿಸಿಬಿಟ್ಟರು. ಶಿವಂ ದುಬೆ (0), ವಿರಾಟ್ ಕೊಹ್ಲಿ (14) ಮತ್ತು ಶ್ರೇಯಸ್ ಅಯ್ಯರ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಕೆ.ಎಲ್. ರಾಹುಲ್ ಅವರು ವಾಂಡರ್ಸೆ ಎಸೆತವನ್ನು ಸ್ಟಂಪ್‌ ಮೇಲೆ ಎಳೆದುಕೊಂಡರು. 

ಅಕ್ಷರ್ ಪಟೇಲ್ (44, 44 ಎಸೆತ), ವಾಷಿಂಗ್ಟನ್ ಸುಂದರ್ ಅವರೊಂದಿಗೆ ಏಳನೇ ವಿಕೆಟ್‌ಗೆ 38 ರನ್ ಜೋಡಿಸಿದರು. ಚರಿತ್ ಅಸಲಂಕಾ ಅವರ ಮೊದಲ ಓವರ್‌ನಲ್ಲಿ (6, 4, 4) ಅಕ್ಷರ್ 14 ರನ್ ಗಳಿಸಿದರು. ಆನಂತರ ಅಕಿಲ ದನಂಜಯ ಅವರ ಎಸೆತದಲ್ಲಿ 6 ರನ್‌ ಗಳಿಸಿದರು. ಆನಂತರ, ಅಸಲಂಕಾ (3/20)ಗೆ ಕ್ಯಾಚ್ ನೀಡಿದರು. 

ಇದಕ್ಕೂ ಮೊದಲು, ವಾಷಿಂಗ್ಟನ್ ನೇತೃತ್ವದ ಭಾರತೀಯ ಸ್ಪಿನ್ನರ್‌ಗಳು ಲಂಕಾ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು. ವಾಷಿಂಗ್ಟನ್ (3/30) ಮತ್ತು ಕುಲ್‌ದೀಪ್ ಯಾದವ್ (2/33) ಗಳಿಸಿದರು. 6-136 ರನ್‌ ಗೆ ಕುಸಿದಿದ್ದ ತಂಡವನ್ನು ವೆಲ್ಲಲಾಗೆ (39) ಮತ್ತು ಕಾಮಿಂದು (40), ಏಳನೇ ವಿಕೆಟ್‌ಗೆ 72 ರನ್‌ಗಳ ಸಹಭಾಗಿತ್ವದ ಮೂಲಕ 240 ಜೋಡಿಸಲು ನೆರವಾದರು.

Tags:    

Similar News