Ira Jadhav: ಏಕದಿನ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿ ದಾಖಲೆ ಬರೆದ 14 ವರ್ಷದ ಇರಾ ಜಾಧವ್
Ira Jadhav : ಮಹಿಳೆಯರ ಅಂಡರ್ -19 ಏಕದಿನ ಕಪ್ನಲ್ಲಿ ಈ ವಿಶೇಷ ದಾಖಲೆ ಸೃಷ್ಟಿಯಾಗಿದೆ. ಇರಾ ಜಾಧವ್ ಈ ಸಾಧನೆ ಮಾಡಿದವರು. ಮುಂಬೈ ಪರ ಆಡಿದ ಅವರು ಅಬ್ಬರದ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಹುಬ್ಬೇರುವಂತೆ ಮಾಡಿದ್ದಾರೆ.;
ಕ್ರಿಕೆಟ್ನಲ್ಲಿ ದಿನದಿಂದ ದಿನಕ್ಕೆ ಹೊಸ ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಒಬ್ಬರಿಗಿಂತ ಒಬ್ಬರು ಮಿಗಿಲು ಎಂಬ ರೀತಿಯಲ್ಲಿ ಆಡುತ್ತಾರೆ. ಹೀಗಾಗಿ ದಾಖಲೆಗಳು ಮುರಿಯುತ್ತಲೇ ಹೋಗುತ್ತವೆ. ಅಂತೆಯೇ ಮಹಿಳಾ ಕ್ರಿಕೆಟ್ನಲ್ಲಿ ಇದೀಗ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ. ಮುಂಬೈ ತಂಡದ ಆಟಗಾರ್ತಿಯೊಬ್ಬರು ಏಕ ದಿನ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿ ಮಿಂಚಿದ್ದಾರೆ. ಅಂದ ಹಾಗೆ ಈ ದಾಖಲೆ ಮಾಡಿದ ಆಟಗಾರ್ತಿಯ ವಯಸ್ಸು ಕೇವಲ 14
ಮಹಿಳೆಯರ ಅಂಡರ್ -19 ಏಕದಿನ ಕಪ್ನಲ್ಲಿ ಈ ವಿಶೇಷ ದಾಖಲೆ ಸೃಷ್ಟಿಯಾಗಿದೆ. ಇರಾ ಜಾಧವ್ ಈ ಸಾಧನೆ ಮಾಡಿದವರು. ಮುಂಬೈ ಪರ ಆಡಿದ ಅವರು ಅಬ್ಬರದ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಹುಬ್ಬೇರುವಂತೆ ಮಾಡಿದ್ದಾರೆ. ಸೀಮಿತ ಓವರ್ಗಳ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದಾಗಿದೆ.
ಮೇಘಾಲಯ ವಿರುದ್ಧದ ಮಹಿಳಾ ಅಂಡರ್-19 ಏಕದಿನ ಪಂದ್ಯದಲ್ಲಿ ಸಿಡಿದೆದ್ದ ಇರಾ ಜಾಧವ್ 157 ಎಸೆತಗಳಲ್ಲಿ 346* ರನ್ ಗಳಿಸಿದ್ದಾರೆ. ಅವರ ಅಬ್ಬರದಿಂದಾಗಿ ಮುಂಬೈ 563 ರನ್ ಗಳಿಸಿತು. ಇರಾ ಜಾಧವ್ ಮುಂಬರುವ ಅಂಡರ್ -19 ಮಹಿಳಾ ವಿಶ್ವಕಪ್ ನಲ್ಲಿ ಭಾರತದ ಸ್ಟ್ಯಾಂಡ್ ಬೈ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.
ಇರಾ ಜಾಧವ್ ರನ್ ಶಿಖರ ನಿರ್ಮಿಸಲು 42 ಬೌಂಡರಿ ಮತ್ತು 16 ಅಮೋಘ ಸಿಕ್ಸರ್ ಬಾರಿಸಿದ್ದಾರೆ. ತಂಡದ ಆರಂಭಿಕ ಬ್ಯಾಟರ್ ನಾಯಲೊ ಹರ್ಲಿ ಗಾಲಾ (116) ಅವರೊಂದಿಗೆ ಎರಡನೇ ವಿಕೆಟ್ಗೆ 274 ರನ್ಗಳನ್ನು ಪೇರಿಸಿದ್ದಾರೆ. ಅಲ್ಲದೇ ದೀಕ್ಷಾ ಪವಾರ್ (39 ರನ್) ಜತೆ ಮೂರನೇ ವಿಕೆಟ್ಗೆ 186 ರನ್ ಸಿಡಿಸಿದ್ದಾರೆ. ಇವರೆಲ್ಲರ ಆಟದಿಂದ ಮುಂಬೈ 50 ಓವರ್ಗೆ 3 ವಿಕೆಟ್ ಕಳೆದುಕೊಂಡು 563 ರನ್ ಕಲೆಹಾಕಿತು.
ಇರಾ ಸಾಧನೆಗೆ ಡಯಾನ ಮೆಚ್ಚುಗೆ
ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಇರಾ ಸಾಧನೆಯನ್ನು ಕೊಂಡಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಅವರು, "ಎಲ್ಲಾ ಅಂಡರ್ -15 ಆಟಗಾರ್ತಿ ಇರಾಗೆ ಹ್ಯಾಟ್ಸ್ ಆಫ್. ಇರಾ ಭಾರತೀಯ ಜರ್ಸಿ ಧರಿಸುವಂತಾಗಲಿ,ʼʼ ಎಂದು ಹೇಳಿದ್ದಾರೆ.
ಇರಾ ಜಾಧವ್ ಡಬ್ಲ್ಯುಪಿಎಲ್ 2025 ಹರಾಜಿಗೆ ನೋಂದಾಯಿಸಿದ್ದರು. ಈ ಮೂಲಕ ನೋಂದಣಿ ಮಾಡಿದ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದಾಗ್ಯೂ, ಅವರು ಮಾರಾಟವಾಗಿರಲಿಲ್ಲ. ಈಗ ಅವರು ಎಲ್ಲರ ಗಮನ ಸೆಳೆಯಲಿದ್ದಾರೆ.
ದ್ವಿಶತಕ ಬಾರಿಸಿದ ಇತರ ಮಹಿಳಾ ಕ್ರಿಕೆಟಿಗರು
ಇರಾ ಅವರನ್ನು ಹೊರತುಪಡಿಸಿದರೆ, ಕೇವಲ ನಾಲ್ವರು ಮಹಿಳಾ ಕ್ರಿಕೆಟಿಗರು ಮಾತ್ರ ಅಂಡರ್ 19 ಮಟ್ಟದಲ್ಲಿ ದ್ವಿಶತಕ ಗಳಿಸಿದ್ದಾರೆ. ಸ್ಮೃತಿ ಮಂಧಾನಾ (2013ರಲ್ಲಿ ಅಜೇಯ 224), ರಾಘವಿ ಬಿಸ್ಟ್ (ಅಜೇಯ 219), ಜೆಮಿಮಾ ರೊಡ್ರಿಗಸ್ (ಅಜೇಯ 202) ಮತ್ತು ಸಾನಿಕಾ ಚಾಲ್ಕೆ (200) ಈ ಸಾಧನೆ ಮಾಡಿದ್ದಾರೆ.