ಪ್ರೇಮಲೋಕ-2 | ನನ್ನ ತಂದೆಯಂತೆ ಅಭಿನಯಿಸುವುದು ಸುಲಭವಲ್ಲ ಎಂದ ರವಿಚಂದ್ರನ್ ಪುತ್ರ
ಪ್ರೇಮಲೋಕ 2 ನಲ್ಲಿ ಜನರು ನನ್ನನ್ನು ಇಷ್ಟಪಡಲು ನಾನು ಕಠಿಣ ಪರಿಶ್ರಮ ಹಾಕಿ ಅಭಿನಯ ಮಾಡಬೇಕಾಗುತ್ತದೆ.;
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ 37 ವರ್ಷಗಳ ಹಿಂದೆ ಬಂದ ʼಪ್ರೇಮಲೋಕ'ದ ಸೀಕ್ವೆಲ್ 'ಪ್ರೇಮಲೋಕ- 2' ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ರವಿಚಂದ್ರನ್ ನಿರ್ದೇಶಿಸಿ, ನಟಿಸಿದ ಮೂಲ ಚಿತ್ರದಲ್ಲಿ ಜೂಹಿ ಚಾವ್ಲಾ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ವಿಷ್ಣುವರ್ಧನ್, ಪ್ರಭಾಕರ್, ಅಂಬರೀಶ್, ಲೋಕೇಶ್ ಸೇರಿದಂತೆ ಆ ಕಾಲದ ಘಟಾನುಘಟಿ ನಾಯಕರು, ಖಳನಾಯಕರು ಆ ಚಿತ್ರದಲ್ಲಿ ನಟಿಸಿದ್ದರು.
ರೊಮ್ಯಾಂಟಿಕ್ ಕಥಾಹಂದರದ ಚಿತ್ರ ಸಂಗೀತ, ಮನರಂಜನೆಯ ಹಬ್ಬವಾಗಿತ್ತು. 11 ಹಾಡುಗಳನ್ನು ಹೊಂದಿದ್ದ ಆ ಸಿನಿಮಾವನ್ನು ಅಂದಿನ ಪೀಳಿಗೆಯ ಪ್ರೇಕ್ಷಕರು ಈಗಲೂ ಆನಂದಿಸುತ್ತಾರೆ. ಈಗ, ಹೊಸ ಪ್ರೇಮಲೋಕ-2ಕ್ಕೆ ರವಿಚಂದ್ರನ್ ಅವರು 25 ಹಾಡುಗಳನ್ನು ಸಂಯೋಜಿಸಲು ಯೋಜಿಸಿದ್ದಾರೆ. 'ಪ್ರೇಮಲೋಕ 2' ಚಿತ್ರದ ತಯಾರಿ ಜೋರಾಗಿ ನಡೆಯುತ್ತಿರುವಾಗಲೇ ತಮ್ಮ ಹುಟ್ಟುಹಬ್ಬದ ದಿನವಾದ ಮೇ 30 ರಂದು ಪ್ರಾಜೆಕ್ಟ್ ಶುರುಮಾಡುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.
ಚಿತ್ರದಲ್ಲಿ ರವಿಚಂದ್ರನ್ ಹಿರಿಯ ಮಗ ಮನೋರಂಜನ್ ನಾಯಕನಾಗಿ ನಟಿಸುತ್ತಿದ್ದು, ಎರಡನೇ ಮಗ ವಿಕ್ರಮ್ ರವಿಚಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಮನೋರಂಜನ್ ರವಿಚಂದ್ರನ್ ಚಿತ್ರಕ್ಕಾಗಿ ತಮ್ಮ ತಯಾರಿ ಮತ್ತು ಅದರ ತಯಾರಿಕೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
"ಚಿತ್ರಕ್ಕಾಗಿ ಈಗಷ್ಟೇ ತಯಾರಿ ಮಾಡಿಕೊಳ್ಳುತ್ತಿದ್ದೇನೆ ಮತ್ತು ನನ್ನ ತಂದೆಯ ಮಾತಿನಂತೆ ಹೋಗುತ್ತಿದ್ದೇನೆ. ನೃತ್ಯ ಅಭ್ಯಾಸ ಮತ್ತು ಕಠಿಣ ವ್ಯಾಯಾಮ ಮಾಡುತ್ತಿದ್ದೇನೆ. ನನ್ನ ತಂದೆ ತಯಾರಿಯ ಬಗ್ಗೆ ತುಂಬಾ ಪರ್ಟಿಕ್ಯುಲರ್. ಮೊದಲನೆಯದಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕಾಗಿದೆ. ಅವರು ಕನಿಷ್ಠ ವಾರಕ್ಕೊಮ್ಮೆ ನನ್ನ ಬಗ್ಗೆ ನಿಗಾ ಇಡುತ್ತಿದ್ದಾರೆ. ವಿಶೇಷವಾಗಿ ನನ್ನ ವ್ಯಾಯಾಮ ಮತ್ತು ನೃತ್ಯ ಪೂರ್ವಾಭ್ಯಾಸಗಳ ಕಡೆಗೆ ಗಮನ ಹರಿಸುತ್ತಿದ್ದಾರೆ" ಎಂದು ತಿಳಿಸಿದರು.
ʼಪ್ರೇಮಲೋಕ 2' ಸುತ್ತಲಿನ ಎಕ್ಸೈಟ್ ಮೆಂಟ್ ಕುರಿತು ಮಾತನಾಡಿದ ಮನೋರಂಜನ್, ಚಿತ್ರೀಕರಣ ಆರಂಭಕ್ಕೂ ಮುನ್ನವೇ ಸಾಕಷ್ಟು ನಿರೀಕ್ಷೆಗಳಿವೆ. ಆದರೆ 'ಪ್ರೇಮಲೋಕ'ದಲ್ಲಿ ಅವರು ಮಾಡಿದಂತೆ ನನಗೆ ಅದನ್ನು ಮಾಡುವುದು ಸುಲಭವಲ್ಲ. ಮೂಲ 'ಪ್ರೇಮಲೋಕ' ಬಿಡುಗಡೆಯಾಗಿ 37 ವರ್ಷಗಳು ಕಳೆದಿವೆ. ಜನರು ಅದನ್ನು ಮತ್ತು ಚಿತ್ರದ ಹಾಡುಗಳನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ಪ್ರೇಮಲೋಕ 2 ನಲ್ಲಿ ಜನರು ನನ್ನನ್ನು ಇಷ್ಟಪಡಲು ನನ್ನ ಕಠಿಣ ಪರಿಶ್ರಮ ಮತ್ತು ಅಭಿನಯ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.