ಮಾಜಿ ಡಿಜಿಪಿ ಓಂ ಪ್ರಕಾಶ್ ಮೀನು ಸಾರಿನಲ್ಲಿ ಊಟ ಮಾಡುತ್ತಿದ್ದಾಗಲೇ ಇರಿದು ಕೊಂದ ಪತ್ನಿ
ಕೊಲೆಯ ನಂತರ ಪಲ್ಲವಿ ಮತ್ತು ಕೃತಿಯು ಓಂ ಪ್ರಕಾಶ್ ಅವರ ಮೃತದೇಹವನ್ನು ಚಾದರದಲ್ಲಿ ಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ರಕ್ತದಿಂದ ತೊಯ್ದಿದ್ದ ನೆಲದಲ್ಲಿ ಓಂ ಪ್ರಕಾಶ್ ಸಾಕಷ್ಟು ಹೊತ್ತು ನರಳಾಡಿ ಸತ್ತಿರಬಹುದು ಎಂದು ಪೊಲೀಸರು ಹೇಳಿದ್ದಾರೆ.;
ಕರ್ನಾಟಕದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಓಂ ಪ್ರಕಾಶ್ ಅವರು ತಮ್ಮ ಮನೆಯಲ್ಲಿ ಊಟ ಮಾಡುತ್ತಿದ್ದ ಸಮಯದಲ್ಲಿ ಅವರ ಪತ್ನಿ ಪತ್ನಿ ಅಡುಗೆಮನೆಯ ಚಾಕುವಿನಿಂದ ಹತ್ತು ಬಾರಿ ಇರಿದು ಕೊಂದಿದ್ದಾರೆ ಎಂಬುದಾಗಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಕೊಲೆಯಲ್ಲಿ ಓಂ ಪ್ರಕಾಶ್ ಅವರ ಪುತ್ರಿ ಕೃತಿ ಕೂಡ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ತನಿಖೆ ಪ್ರಕಾರ, ಓಂ ಪ್ರಕಾಶ್ ಅವರು ಊಟದ ವೇಳೆ ಮೇಜಿನ ಬಳಿ ಮೀನಿನ ಕರಿ ತಿನ್ನುತ್ತಿದ್ದಾಗ ಪತ್ನಿ ಪಲ್ಲವಿಯೊಂದಿಗೆ ಜಗಳವಾಗಿದೆ. ಈ ಜಗಳ ತೀವ್ರಗೊಂಡಾಗ ಪಲ್ಲವಿಯು ಮೊದಲು ಓಂ ಪ್ರಕಾಶ್ ಅವರ ಕಣ್ಣುಗಳಿಗೆ ಮೆಣಸಿನ ಪುಡಿ ಎರಚಿದ್ದಾರೆ. ಈ ವೇಳೆ ಅವರು ಗಲಿಬಿಲಿಗೊಂಡಿದ್ದು ತಕ್ಷಣವೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಕೊಲೆಯ ನಂತರ ಪಲ್ಲವಿ ಮತ್ತು ಕೃತಿಯು ಓಂ ಪ್ರಕಾಶ್ ಅವರ ಮೃತದೇಹವನ್ನು ಚಾದರದಲ್ಲಿ ಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ರಕ್ತದಿಂದ ತೊಯ್ದಿದ್ದ ನೆಲದಲ್ಲಿ ಓಂ ಪ್ರಕಾಶ್ ಸಾಕಷ್ಟು ಹೊತ್ತು ನರಳಾಡಿ ಸತ್ತಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಪೊಲೀಸರು ಘಟನಾ ಸ್ಥಳದಿಂದ ಎರಡು ರಕ್ತಸಿಕ್ತ ಚಾಕುಗಳು, ಒಂದು ಒಡೆದ ಬಾಟಲಿ ಮತ್ತು ಊಟದ ತಟ್ಟೆಯನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಓಂ ಪ್ರಕಾಶ್, ಪಲ್ಲವಿ ಮತ್ತು ಕೃತಿಯವರ ಮೊಬೈಲ್ ಫೋನ್‌ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.
ಪಲ್ಲವಿಯ ಹೇಳಿಕೆ
ಕೊಲೆಯ ನಂತರ ಪಲ್ಲವಿಯು ಸ್ವತಃ ಪೊಲೀಸರಿಗೆ ಕರೆ ಮಾಡಿ ಕೃತ್ಯವನ್ನು ವಿವರಿಸಿದ್ದಾರೆ. ಆರಂಭಿಕ ವಿಚಾರಣೆಯಲ್ಲಿ ಅವರು ಇದನ್ನು ಸ್ವಯಂರಕ್ಷಣೆಗಾಗಿ ಮಾಡಿದ ಕೃತ್ಯ ಎಂದು ಹೇಳಿಕೊಂಡಿದ್ದಾರೆ. ಓಂ ಪ್ರಕಾಶ್ ಅವರು ಮನೆಯಲ್ಲಿ ಯಾವಾಗಲೂ ರಿವಾಲ್ವರ್ ಹಿಡಿದುಕೊಂಡು ಓಡಾಡುತ್ತಿದ್ದರು ಹಾಗೂ ತಮ್ಮನ್ನು ಹೆದರಿಸುತ್ತಿದ್ದರು. ಘಟನೆಯ ದಿನವೂ ಓಂ ಪ್ರಕಾಶ್ ಗನ್ ಹಿಡಿದು ಬೆದರಿಕೆ ಒಡ್ಡಿದ್ದರಿಂದ ಪ್ರತಿದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ಓಂ ಪ್ರಕಾಶ್ ಅವರ ಆತ್ಮೀಯರು ಈ ಹೇಳಿಕೆಗೆ ವಿರುದ್ಧವಾಗಿ ಮಾತನಾಡಿದ್ದಾರೆ. ಓಂ ಪ್ರಕಾಶ್ ಅವರು ತಮ್ಮ ಜತೆಗಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಹಲವು ಬಾರಿ ಪತ್ನಿಯಿಂದ ತಾವು ಚಿತ್ರಹಿಂಸೆಗೊಳಗಾಗುತ್ತಿರುವುದಾಗಿ ಹೇಳಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಕೃತಿಯಿಂದಲೂ ಸಮಸ್ಯೆ ಸೃಷ್ಟಿ
ಕೊಲೆಯ ನಂತರ ಕೃತಿಯು ತನ್ನ ಕೋಣೆಯಲ್ಲಿ ಬೀಗ ಹಾಕಿಕೊಂಡು ಕುಳಿತಿದ್ದಳು ಹಾಗೂ ಪೊಲೀಸರೊಂದಿಗೆ ತನಿಖೆಗೆ ಸಹಕರಿಸಲು ನಿರಾಕರಿಸಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊನೆಗೆ ಪೊಲೀಸರು ಕೋಣೆಯ ಬಾಗಿಲು ಮುರಿದು ಕೃತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಓಂ ಪ್ರಕಾಶ್ ಅವರ ಎದೆ, ಹೊಟ್ಟೆ ಮತ್ತು ತೋಳಿನ ಭಾಗದಲ್ಲಿ 8-10 ಚಾಕುವಿನ ಗಾಯಗಳು ಕಂಡುಬಂದಿವೆ. ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿ 4-5 ಗಾಯಗಳು ತೀವ್ರ ರಕ್ತಸ್ರಾವಕ್ಕೆ ಕಾರಣವಾಗಿವೆ. ಪೊಲೀಸರು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳ ಹೇಳಿಕೆಯನ್ನು ದಾಖಲಿಸಿದ್ದಾರೆ.