ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ಮರಿಯಪ್ಪನ್ ತಂಗವೇಲುಗೆ ಚಿನ್ನ

Update: 2024-05-22 06:32 GMT

ಜಪಾನ್‌ನ ಕೋಬೆಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮರಿಯಪ್ಪನ್ ತಂಗವೇಲು ಮಂಗಳವಾರ (ಮೇ 21) ಟಿ 63 ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದರು. ಇದು ಕಳೆದ ಎಂಟು ವರ್ಷದಲ್ಲಿ ಪ್ರಮುಖ ಕ್ರೀಡಾಕೂಟದಲ್ಲಿ ಅವರ ಮೊದಲ ಚಿನ್ನ. ಅಮೆರಿಕದ ಎಜ್ರಾ ಫ್ರೆಚ್ ಮತ್ತು ಸ್ಯಾಮ್ ಗ್ರೂವ್ ಕ್ರಮವಾಗಿ 1.85 ಮೀ ಮತ್ತು 1.82 ಮೀ ಜಿಗಿತದೊಂದಿಗೆ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದ ತಂಗವೇಲು(28), 1.88 ಮೀಟರ್‌ ಜಿಗಿದು ಚಾಂಪಿಯನ್‌ಶಿಪ್ ದಾಖಲೆ ನಿರ್ಮಿಸಿದ್ದಾರೆ. 2016 ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಟಿ42 ಎತ್ತರ ಜಿಗಿತದಲ್ಲಿ ಚಿನ್ನ, 2021ರ ಟೋಕಿಯೊದಲ್ಲಿ ಟಿ63ಯಲ್ಲಿ ಬೆಳ್ಳಿ ಹಾಗೂ 2023ರಲ್ಲಿ ಹ್ಯಾಂಗ್‌ಝೌನಲ್ಲಿ ಟಿ63ಯಲ್ಲಿ ಬೆಳ್ಳಿ ಗೆದ್ದಿದ್ದರು. ಟಿ63 ಎನ್ನುವುದು ಮೊಣಕಾಲು ಇಲ್ಲದವರು ಕೃತಕ ಅಂಗದೊಂದಿಗೆ ಸ್ಪರ್ಧಿಸುವ ವರ್ಗೀಕರಣ. 

ತಮಿಳುನಾಡಿನ ಸೇಲಂ ಜಿಲ್ಲೆಯ ಮರಿಯಪ್ಪನ್ ಅವರ ತಾಯಿ ಕೂಲಿ ಕಾರ್ಮಿಕರು; ಉಳಿದ ಸಮಯದಲ್ಲಿ ತರಕಾರಿ ಮಾರುತ್ತಾರೆ. ತಂದೆ ಕುಟುಂಬವನ್ನು ತೊರೆದಿದ್ದಾರೆ. ಐದನೇ ವಯಸ್ಸಿನಲ್ಲಿ ಶಾಲೆಗೆ ತೆರಳುತ್ತಿದ್ದ ಮರಿಯಪ್ಪನ್ ಗೆ ಬಸ್‌ ಡಿಕ್ಕಿ ಹೊಡೆದು, ಬಲಗಾಲು ಊನಗೊಂಡಿತು. ತಾಯಿಗೆ ಕುಟುಂಬ ನಿರ್ವಹಣೆಯಲ್ಲಿ ನೆರವಾಗಲು ಪತ್ರಿಕೆ ವಿತರಣೆ ಮತ್ತು ಕೂಲಿ ಕೆಲಸ ಮಾಡುತ್ತಿದ್ದರು. 

ತಮಿಳುನಾಡು ಕೈಗಾರಿಕಾ ಸಚಿವ ಡಿ.ಆರ್‌.ಪಿ. ರಾಜಾ ಅವರು ಎಕ್ಸ್‌ನಲ್ಲಿ ಮರಿಯಪ್ಪನ್ ಅವರನ್ನು ಅಭಿನಂದಿಸಿದ್ದಾರೆ. ʻಮರಿಯಪ್ಪನ್ ತಂಗವೇಲು ಅವರು ಜಪಾನ್‌ನ ಕೋಬೆಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಅಭಿನಂದನೆಗಳು,ʼ ಎಂದು ಬರೆದಿದ್ದಾರೆ.

ಇಂಡಿಯ ಮೂರನೇ ಸ್ಥಾನದಲ್ಲಿ: ಹಾಲಿ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಸುಮಿತ್ ಆಂಟಿಲ್ ಅವರು ಜಾವೆಲಿನ್ ಥ್ರೋನಲ್ಲಿ ವಿಶ್ವ ಪ್ರಶಸ್ತಿ ಮತ್ತು ಏಕ್ತಾ ಭಯಾನ್ ಮಹಿಳೆಯರ ಎಫ್ 51 ಕ್ಲಬ್ ಥ್ರೋ ಸ್ಪರ್ಧೆಯಲ್ಲಿ 20.12 ಮೀ ಎಸೆದು ಚಿನ್ನದ ಪದಕ ಗಳಿಸಿದರು. 

ಇಂಡಿಯ ಐದನೇ ದಿನ ಐದು ಪದಕ ಗೆದ್ದುಕೊಂಡಿತು. ಒಟ್ಟು ಪದಕಗಳ ಸಂಖ್ಯೆ 10 ಕ್ಕೆ ಏರಿತು (4 ಚಿನ್ನ, 4 ಬೆಳ್ಳಿ, 2 ಕಂಚು).ಚೀನಾ 15 ಚಿನ್ನ, 13 ಬೆಳ್ಳಿ, 13 ಕಂಚು ಮತ್ತು ಬ್ರೆಜಿಲ್ 14 ಚಿನ್ನ, 6 ಬೆಳ್ಳಿ, 5 ಕಂಚು ಪದಕಗಳನ್ನು ಗಳಿಸಿವೆ.

Tags:    

Similar News