Priyanka Gandhi | ಲೋಕಸಭೆಯಲ್ಲಿ ಪ್ರಿಯಾಂಕಾ ಚಾತುರ್ಯ ಕಾಂಗ್ರೆಸ್‌ಗೆ ಸಹಾಯವಾಗಲಿದೆಯೇ?

ಹರಿಯಾಣ, ಜಮ್ಮು ಕಾಶ್ಮೀರ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲಕ್ಕಚ್ಚಿರುವ ಸಂದರ್ಭದಲ್ಲಿ ಪ್ರಿಯಾಂಕಾ ಸಂಸತ್‌ ಪ್ರವೇಶ ಮಾಡಿರುವುದು ಆ ಪಕ್ಷದ ನಾಯಕತ್ವಕ್ಕೆ ಸ್ವಲ್ಪ ಪ್ರಮಾಣದ ಚೈತನ್ಯ ನೀಡಲಿದೆ.;

Update: 2024-11-29 12:01 GMT
ಪ್ರಿಯಾಂಕಾ ಗಾಂಧಿ

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷಕ್ಕೆ ಬಳಿಕ ನಡೆದ ಚುನಾವಣೆಗಳಲ್ಲಿ ಉಂಟಾಗಿರುವ ಹಿನ್ನಡೆಯ ನಡುವೆ ಪ್ರಿಯಾಂಕ ಗಾಂಧಿ ವಯನಾಡ್‌ ಕ್ಷೇತ್ರದಿಂದ ಗೆದ್ದು ಸಂಸತ್‌ನ ಕೆಳಮನೆ ಪ್ರವೇಶಿಸಿದ್ದಾರೆ. ದೀರ್ಘ ಕಾಲದ ಕಾಯುವಿಕೆ ಬಳಿಕ ಪ್ರಿಯಾಂಕಾ ಪಾರ್ಲಿಮೆಂಟ್‌ ಮೆಟ್ಟಿಲೇರಿದ್ದಾರೆ.

ಹರಿಯಾಣ, ಜಮ್ಮು ಕಾಶ್ಮೀರ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲಕ್ಕಚ್ಚಿರುವ ಸಂದರ್ಭದಲ್ಲಿ ಪ್ರಿಯಾಂಕ ಸಂಸತ್‌ ಪ್ರವೇಶ ಮಾಡಿರುವುದು ಆ ಪಕ್ಷದ ನಾಯಕತ್ವಕ್ಕೆ ಸ್ವಲ್ಪ ಪ್ರಮಾಣದ ಚೈತನ್ಯ ನೀಡಲಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಲೋಕಸಭೆಯಲ್ಲಿ ಈಗ ಇಬ್ಬರು ಗಾಂಧಿಗಳು ಸೇರಿಕೊಂಡಿದ್ದಾರೆ. ಸಹೋದರ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿರುವ ಲೋಕಸಭೆಗೆ ಪ್ರಿಯಾಂಕ ಪ್ರವೇಶಗೊಂಡ ಬಳಿಕ ಅಲ್ಲಿ ಅವರ ಕುಟುಂಬದ ಬಲ ಎರಡಾಗಿದೆ. ಇನ್ನು ಮೇಲ್ಮನೆಯಲ್ಲಿ ಅವರ ಅಮ್ಮ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಇದ್ದಾರೆ. ಹೀಗಾಗಿ ಒಟ್ಟು ಸಂಸತ್‌ನಲ್ಲಿ ಅವರ ಕುಟುಂಬದ ಬಲ ಮೂರಾಗಿದೆ.

ಉತ್ತಮ ವಾಗ್ಮಿ

ಕಾಂಗ್ರೆಸ್‌ನಲ್ಲಿ ಈ ಮಾತನ್ನು ನೇರವಾಗಿ ಹೇಳುವುದಕ್ಕೆ ಯಾರಿಗೂ ಧೈರ್ಯ ಇರದು. ಆದರೆ, ಪ್ರಿಯಾಂಕ ಆಯ್ಕೆಯಾಗಿ ಬಂದಿರುವುದು ತನ್ನ ಸಹೋದರ ರಾಹುಲ್‌ ವಯನಾಡ್‌ನಲ್ಲಿ ಬಿಟ್ಟುಕೊಟ್ಟ ಕ್ಷೇತ್ರದಿಂದ. ಆದಾಗ್ಯೂ ಅವರು ಉತ್ತಮ ರಾಜಕಾರಣಿ ಅಲ್ಲ ಎಂದರೆ, ಅವರ ಪಕ್ಷದ ಸದಸ್ಯರು ಯಾರೂ ಒಪ್ಪುವುದಿಲ್ಲ. ಯಾಕೆಂದರೆ, ಆಕೆ ಅಣ್ಣನಂತೆ ತಮ್ಮಿಷ್ಟವಿಲ್ಲದ ರಾಜಕೀಯ ಸಿದ್ಧಾಂತವನ್ನು ಮೊಂಡತನದಿಂದ ನಿರಾಕರಿಸುವುದಿಲ್ಲ. ಪ್ರಾಯೋಗಿಕ ಚರ್ಚೆಗೆ ಅವರು ಮುಕ್ತರು. ಎಲ್ಲರ ಮಾತನ್ನು ಆಲಿಸುವ ಉತ್ತಮ ಕೇಳುಗರು.

ಪ್ರಿಯಾಂಕ ಅವರು ಹೊಂದಿರುವ ಎಲ್ಲ ಗುಣಗಳು ಕಾಂಗ್ರೆಸ್‌ಗೆ ಲಾಭವಾಗುವ ಸೂಚನೆಯಾದರೂ ಅವರ ಉಪಸ್ಥಿತಿಯಿಂದ ದೀರ್ಘಕಾಲದಿಂದ ಬಿಕ್ಕಟ್ಟಿನಿಂದ ಬಳಲುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಅದೃಷ್ಟ ತರುತ್ತದೆ ಎಂದು ಅಂದುಕೊಳ್ಳುವುದು ತಪ್ಪಾಗಬಹುದು.

ಪ್ರಿಯಾಂಕಾ ಅವರು ಅಜ್ಜಿ ಮತ್ತು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರಂತೆಯೇ ಕಾಣುತ್ತಾರೆ ಎಂಬುದು ಸಾರ್ವಜನಿಕವಾಗಿ ಅವರಿಗೆ ಬಗ್ಗೆ ಹೆಚ್ಚು ಒಲವು ಸಿಗಬಹುದು. ಆದರೆ ಸಂಸತ್ತಿನಲ್ಲಿ, ಅವರ ಮಾತುಗಳ ತೂಕ ಹಾಗೂ ಗುಣಮಟ್ಟವೇ ಪ್ರಮುಖವಾಗಿದೆ.

ದಶಕಕ್ಕೂ ಹೆಚ್ಚು ಕಾಲದಿಂದ ಸಂಸತ್ತಿನ ಕಲಾಪಗಳು ಗುಣಮಟ್ಟದ್ದಾಗಿಲ್ಲ. ಚರ್ಚೆ ಹಾಗೂ ಶಾಸಕಾಂಗ ವ್ಯವಹಾರವೂ ನಿರೀಕ್ಷಿತವಾಗಿಲ್ಲ. ಕಲಾಪಗಲೂ ಮುಂಡೂಡಿಕೆ ಹಾಗೂ ರದ್ದಾಗಿರುವುದೇ ಹೆಚ್ಚು. ಪ್ರಿಯಾಂಕ ಬಂದ ತಕ್ಷಣ ಚರ್ಚೆಯ ಗುಣಮಟ್ಟವೂ ಬದಲಾಗುವುದಿಲ್ಲ. ಅಲ್ಲದೆ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾತಿನೇಟು ಬೀಸುತ್ತಾರೆ ಎಂದು ಪ್ರಿಯಾಂಕ ಅಭಿಮಾನಿಗಳು ಅಂದುಕೊಂಡಂತೆಯೂ ಇಲ್ಲ.


ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು

ಪ್ರಿಯಾಂಕ ತಮಗೆ ಚರ್ಚಿಸಲು ಅವಕಾಶ ಸಿಕ್ಕರೆ ಅದನ್ನು ಹೇಗೆ ಸದುಪಯೋಗ ಮಾಡಿಕೊಳ್ಳುತ್ತಾರೆ ಎಂಬುದೂ ಮುಖ್ಯ. ಸದನದಲ್ಲಿ ಪಕ್ಷದ ನಾಯಕರಾಗಿರುವ ರಾಹುಲ್, ನಿರ್ಣಾಯಕ ವಿಷಯಗಳ ಮೇಲಿನ ಚರ್ಚೆಗಳ ಸಮಯದಲ್ಲಿ ತಮ್ಮ ಸಹೋದರಿಯೊಂದಿಗೆ ಹೇಗೆ ವಿಷಯಗಳನ್ನು ಹಂಚಿಕೊಳ್ಳುತ್ತಾರೆ ಎಂಬುದು ಕೂಡ ಗಮನಾರ್ಹ.

ಮಣಿಪುರ ಗಲಭೆ, ಗೌತಮ್ ಅದಾನಿ ವಿರುದ್ಧದ ಆರೋಪಗಳು ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ಪ್ರಮುಖ ವಿಷಯಗಳ ಚರ್ಚೆಯಲ್ಲಿ ಮೋದಿ ಸರ್ಕಾರಕ್ಕೆ ಹೇಗೆ ಸವಾಲೊಡ್ಡುತ್ತಾರೆ ಎಂಬ ಸಂಗತಿಯೂ ಅವರ ಸಾಮರ್ಥ್ಯ ಅಳೆಯಲು ಮಾನದಂಡವಾಗಿರುತ್ತದೆ.

ರಾಹುಲ್‌ ಮತ್ತು ಪ್ರಿಯಾಂಕ ಜೋಡಿ ಸಂಸತ್‌ನಲ್ಲಿ ಮಾಧ್ಯಮಗಳ ಟೀಕೆ, ಬಿಜೆಪಿಯ ವ್ಯಂಗ್ಯಗಳು ಮತ್ತು ಕಾಂಗ್ರೆಸ್ ಮತ್ತು ಅದರ ಇಂಡಿಯಾ ಮಿತ್ರಪಕ್ಷಗಳ ನಾಯಕರ ಅಭಿಪ್ರಾಯಗಳನ್ನೂ ಅರ್ಥ ಮಾಡಬೇಕಾಗಿದೆ.

ಸಂಸತ್ತಿನಲ್ಲಿ ರಾಹುಲ್ ಹಾಜರಾತಿ ಕಡಿಮೆ

ರಾಹುಲ್ ಗಾಂಧಿ ತಮ್ಮ ಸಂಸದೀಯ ವೃತ್ತಿಜೀವನದ ಎರಡು ದಶಕಗಳಲ್ಲಿ ಸಂಸತ್‌ಗೆ ಗೈರು ಹಾಜರಾಗಿದ್ದೇ ಹೆಚ್ಚು. . ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ಡೇಟಾಬೇಸ್ ಪ್ರಕಾರ, 2004ರಲ್ಲಿ ಅಮೇಥಿಯ ಸಂಸದರಾಗಿ ಲೋಕಸಭೆಗೆ ಪಾದಾರ್ಪಣೆ ಮಾಡಿದಾಗಿನಿಂದ ಅವರು ವಯನಾಡ್ ಸಂಸದರಾಗಿ ಸೇವೆ ಸಲ್ಲಿಸಿದ ಹಿಂದಿನ ಅವಧಿಯ ಅಂತ್ಯದವರೆಗೆ, ಲೋಕಸಭೆಯಲ್ಲಿ ರಾಹುಲ್ ಅವರ ಹಾಜರಾತಿ ನಿರಂತರವಾಗಿ ಕಡಿಮೆಯಾಗಿದೆ. 17ನೇ ಲೋಕಸಭೆಯಲ್ಲಿ ಶೇಕಡಾ 53. 16 ನೇ ಲೋಕಸಭೆಯಲ್ಲಿ ಶೇಕಡಾ 52 ಮತ್ತು 15ನೇ ಲೋಕಸಭೆಯಲ್ಲಿ ಶೇಕಡಾ 43 ಹಾಜರಾಗಿದ್ದರು.

2022 ರ ಚಳಿಗಾಲದ ಅಧಿವೇಶನ ಅಥವಾ 2020 ರ ಮಳೆಗಾಲದ ಅಧಿವೇಶನದಂತಹ ಸಂದರ್ಭಗಳಲ್ಲಿ ರಾಹುಲ್ ಸಂಸತ್ತಿನ ಸಂಪೂರ್ಣ ಅಧಿವೇಶನಗಳನ್ನು ತಪ್ಪಿಸಿಕೊಂಡಿದ್ದಾರೆ. ಅವರು ಲೋಕಸಭೆಗೆ ಹಾಜರಾದ ಅಪರೂಪದ ಸಂದರ್ಭಗಳಲ್ಲಿ (ಬಹುತೇಕ ಇಡೀ ದಿನದ ಅಧಿವೇಶನಕ್ಕೆ), ಪ್ರಶ್ನೋತ್ತರ ಸಮಯ, ಶೂನ್ಯ ಸಮಯ ಅಥವಾ ಚರ್ಚೆಗಳಲ್ಲಿ ಅವರ ಭಾಗವಹಿಸುವಿಕೆ ವಿರಳ.

ಹೀಗಾಗಿ ಪ್ರಿಯಾಂಕಾ ಈ ವಿಚಾರದಲ್ಲಿ ಹೆಚ್ಚು ಜೋಪಾನವಾಗಿರಬೇಕಾಗುತ್ತದೆ. ಉತ್ತರ ಪ್ರದೇಶದಲ್ಲಿ ಮತ್ತು 2022ರ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರಿಯಾಂಕಾ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಫೆಡರಲ್‌ಗೆ ಹೇಳಿದಂತೆ, "ಪ್ರಿಯಾಂಕಾ ಹಿನ್ನೆಡೆಗೆ ಒಂದು ಸಂಗತಿಯೇನೆಂದರೆ ಅವರ ಸಹೋದರನೊಂದಿಗಿನ ಪ್ರೀತಿ. ರಾಹುಲ್ ಹಿಂದಕ್ಕೆ ಬೀಳಬಹುದಾದ ಯಾವುದೇ ಸಂಗತಿಯನ್ನೂ ಅವರು ಮಾಡುವುದಿಲ್ಲ. ಹೀಗಾಗಿ ರಾಹುಲ್‌ ಅವರ ಹೆಜ್ಜೆಯಲ್ಲಿಯೇ ನಡೆದರೆ ವೈಯಕ್ತಿಕವಾಗಿ ಮತ್ತು ಪಕ್ಷಕ್ಕೆ ಸಮಸ್ಯೆಯಾಗಬಹುದು" ಎಂದು ಅವರು ಹೇಳಿದರು.

ಪ್ರಿಯಾಂಕಾ ಗಾಂಧಿಗೆ ಹೆಚ್ಚು ಜವಾಬ್ದಾರಿ

ಅಣ್ಣ- ತಂಗಿಯ ಪ್ರೀತಿ ಮತ್ತು ಪ್ರಿಯಾಂಕಾ ತನ್ನ ಹಿರಿಯ ಸಹೋದರನ ಬಗ್ಗೆ ತೋರಿಸುವ ಗೌರವವು ಲೇಖನ ಮತ್ತು ಚಿತ್ರಗಳಿಗೆ ಸೀಮಿತವಾಗಬಹುದು. ಸಂಸತ್ತಿನ ಒಳಗೆ ಅಥವಾ ಹೊರಗೆ ಕಾಂಗ್ರೆಸ್ ಅನ್ನು ರಾಜಕೀಯವಾಗಿ ಉದ್ಧಾರ ಮಾಡುವುದಿಲ್ಲ.

ಹಿಂದಿ ಮಾತನಾಡುವ ರಾಜ್ಯದ ಪಕ್ಷದ ಸಂಸದರೊಬ್ಬರು ಫೆಡರಲ್‌ ಜತೆ ಮಾತನಾಡಿ, "ಪ್ರಿಯಾಂಕಾ ಗಾಂಧಿಗಿಂತ ಉತ್ತಮ ವಾಗ್ಮಿ ಮಾತ್ರವಲ್ಲ. ಅವರು ರಾಹುಲ್‌ಗಿಂತ ಚುರುಕು. ಅವರು ಸದನದಲ್ಲಿ ನಮ್ಮ ಧ್ವನಿಯಾದರೆ ಮಾತ್ರ ಪಕ್ಷಕ್ಕೆ ಲಾಭವಾಗುತ್ತದೆ. ಏಕೆಂದರೆ, ಚರ್ಚೆಯ ಸಮಯದಲ್ಲಿ ತಾತ್ವಿಕ ವಾದಗಳಿಂದ ದೂರ ಸರಿಯುವ ಪ್ರವೃತ್ತಿ ಹೊಂದಿರುವ ರಾಹುಲ್ ಅವರ ರೀತಿ ಪ್ರಿಯಾಂಕ ಅಲ್ಲ. ಪ್ರಿಯಾಂಕಾ ತೀಕ್ಷ್ಣ , ಕಟುವಾದ ಮತ್ತು ನಿಖರವಾದ ಭಾಷಣಗಳನ್ನು ಮಾಡುತ್ತಾರೆ. ಯಾವ ರೀತಿಯ ಹೇಳಿಕೆಗಳು ಜನಸಾಮಾನ್ಯರನ್ನು ಮತ್ತು ಮಾಧ್ಯಮಗಳನ್ನು ಆಕರ್ಷಿಸುತ್ತವೆ ಎಂದು ಅವರಿಗೆ ತಿಳಿದಿದೆ.

ಹಿಂದಿ ಬೆಲ್ಟ್‌ನಲ್ಲಿ ಯಾವಾಗಲೂ ಭಾವನಾತ್ಮಕ ಮನವಿ ಮಾಡಬೇಕು ಅಥವಾ ಆಕ್ರಮಣಕಾರಿಯಾಗಬೇಕಾಗುತ್ತದೆ. ಆದರೆ, ಪ್ರಿಯಾಂಕ ಕೇರಳದ ಸಂಸದರಾಗಿರುವುದರಿಂದ ದಕ್ಷಿಣದ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅಥವಾ ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಲು ಸೀಮಿತಗೊಳಿಸಿದರೆ ಅವಕಾಶ ವ್ಯರ್ಥವಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಸಂಸತ್ತಿನಲ್ಲಿ ಮೋದಿ ವಿರೋಧಿ ಹೋರಾಟಗಾರರಾಗಿ ರಾಹುಲ್ ಗಾಂಧಿ ಅವರನ್ನು ಬಳಸಲು ಕಾಂಗ್ರೆಸ್‌ ನಿರ್ಧರಿಸಿದರೂ ಪ್ರಿಯಾಂಕಾ ಅವರ ಉಪಸ್ಥಿತಿಯನ್ನು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತ ಮಾಡಬಾರದು. ಕಾಂಗ್ರೆಸ್ ಹೈಕಮಾಂಡ್, ಪ್ರಿಯಾಂಕಾ ಅವರನ್ನು ಚುನಾವಣೆಗೆ ಸ್ಟಾರ್ ಪ್ರಚಾರಕರಾಗಿ ಮತ್ತು ಪಕ್ಷದ ಬಿಕ್ಕಟ್ಟು ಶಮನಕ್ಕೂ ತೊಡಗಿಸಿಕೊಳ್ಳುವಂತೆ ಹೇಳಬೇಕು.

Tags:    

Similar News