ನೀಟ್ ಪೇಪರ್ ಸೋರಿಕೆ: ಸಾಲ್ವರ್ ಗ್ಯಾಂಗಿನ ಸಂಜೀವ್ ಮುಖಿಯ ಯಾರು?

ಬಿಹಾರ ಪೊಲೀಸರ ಪ್ರಕಾರ, ತಲೆಮರೆಸಿಕೊಂಡಿರುವ ಮುಖಿಯ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಚು ರೂಪಿಸಿದ ಮತ್ತು ಇಡೀ ದಂಧೆಯ ಹಿಂದಿನ ಮಾಸ್ಟರ್‌ಮೈಂಡ್. ಸಾಲ್ವರ್‌ ಗ್ಯಾಂಗಿನ ಮುಖಂಡ.

Update: 2024-06-25 13:39 GMT

ನೀಟ್-ಯುಜಿ 2024 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಬಿಹಾರದ ʻಸಂಜೀವ್ ಮುಖಿಯʼ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ತಲೆಮರೆಸಿಕೊಂಡಿರುವ ಮುಖಿಯ, ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಚು ರೂಪಿಸಿದ ಮತ್ತು ಇಡೀ ದಂಧೆಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ಪೊಲೀಸರು ನಂಬಿದ್ದಾರೆ. ಮುಖಿಯ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. 

ಮುಖಿಯ(51) ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿರುವ  ಇತಿಹಾಸ ಹೊಂದಿದ್ದು, ಐದು ಪ್ರಮುಖ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬಿಹಾರದ ಶಿಕ್ಷಕರ ನೇಮಕ ಪರೀಕ್ಷೆಯಲ್ಲಿ ಪ್ರಶ್ನೆಪೇಪರ್ ಸೋರಿಕೆಯಲ್ಲಿ ಅವರು ಭಾಗಿಯಾಗಿದ್ದರು; ಅವರ ಮಗ ಶಿವಕುಮಾರ್ ಅವರನ್ನು ಈ ವರ್ಷದ ಆರಂಭದಲ್ಲಿ ಈ ಸಂಬಂಧ ಬಂಧಿಸಲಾಯಿತು.ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮೂರನೇ ಹಂತದ ಪರೀಕ್ಷೆಯನ್ನು ರದ್ದುಗೊಳಿಸಬೇಕಾಯಿತು.

ಹಳೆಯ ಕೈ: ಮುಖಿಯ ಅವರು 'ಸಾಲ್ವರ್ ಗ್ಯಾಂಗ್' ಅನ್ನು ಮುನ್ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಇದು ಅಂತಾರಾಜ್ಯ ಜಾಲವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಹಣ ಪಾವತಿಸಲು ಸಿದ್ಧರಿರುವವರಿಗೆ ಮಾರಾಟ ಮಾಡುತ್ತದೆ. ಅಭ್ಯರ್ಥಿ ಪರವಾಗಿ ಪರೀಕ್ಷೆ ಬರೆಯಬಹುದಾದ ವ್ಯಕ್ತಿಗಳನ್ನು ಕೂಡ ಹುಡುಕಿಕೊಡುತ್ತದೆ.

ಮುಖಿಯ ಎರಡು ದಶಕಗಳಿಂದ ಪರೀಕ್ಷಾ ವಂಚನೆಯಲ್ಲಿ ತೊಡಗಿದ್ದಾರೆ. ಈ ಹಿಂದೆ ಅವರು ಆನ್‌ಲೈನ್ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯ ಮಾಸ್ಟರ್ ಮೈಂಡ್, ಬಿಹಾರದ ರಂಜಿತ್ ಡಾನ್‌ ಜೊತೆ ಸಂಪರ್ಕ ಹೊಂದಿದ್ದರು. 2015ರ ವಿಧಾನ ಪರಿಷತ್ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷ (ಬಿಜೆಪಿಯ ಮಿತ್ರಪಕ್ಷ)ದಿಂದ ಕಣಕ್ಕಿಳಿದಿದ್ದ ಡಾನ್, ಸಿಬಿಎಸ್‌ಇ, ವೈದ್ಯಕೀಯ ಪ್ರವೇಶ ಪರೀಕ್ಷೆ, ಪಿಜಿ ವೈದ್ಯಕೀಯ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ವರದಿಗಳ ಪ್ರಕಾರ, ನಳಂದ ಕಾಲೇಜಿನ ನೂರ್ಸರಾಯ್ ಶಾಖೆಯಲ್ಲಿ ತಾಂತ್ರಿಕ ಸಹಾಯಕನಾಗಿ ಕೆಲಸ ಮಾಡಿರುವ ಮುಖಿಯ, ಆನಂತರ ತನ್ನದೇ ಜಾಲವನ್ನು ಸ್ಥಾಪಿಸಿದರು. ಅವರು ಈಗ ಇನ್ನೊಬ್ಬ ಕುಖ್ಯಾತ ಪ್ರಶ್ನೆಪೇಪರ್ ಸೋರಿಕೆ ಸ್ಪೆಷಲಿಸ್ಟ್ ರವಿ ಅತ್ರಿ ಜೊತೆಗೆ 'ಸಾಲ್ವರ್ ಗ್ಯಾಂಗ್' ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಯುಪಿಎಸ್‌ ಟಿಎಫ್‌ ) ಈ ವರ್ಷದ ಏಪ್ರಿಲ್‌ನಲ್ಲಿ ಯುಪಿ ಕಾನ್‌ಸ್ಟೆಬಲ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೀರತ್‌ನಿಂದ ಅತ್ರಿಯನ್ನು ಬಂಧಿಸಿತ್ತು. ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ವಿತರಿಸಲು ಮನೇಸರ್‌ನಲ್ಲಿರುವ ರೆಸಾರ್ಟ್‌ನಲ್ಲಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಲಾಗಿತ್ತು.

2017 ರಲ್ಲಿ ಪಾಟ್ನಾದ ಪತ್ರಕಾರ್ ನಗರದಿಂದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದಕ್ಕೆ ಮುಖಿಯ ಮತ್ತು ಅವರ ಮಗನನ್ನು ಈ ಹಿಂದೆ ಬಂಧಿಸಲಾಗಿತ್ತು. ಯುಪಿ ಕಾನ್‌ಸ್ಟೆಬಲ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದೆ ಇದ್ದ ಡಾ. ಶುಭಂ ಮಂಡಲ್ ಅವರನ್ನು ಬಂಧಿಸಲಾಗಿದೆ. ಆದರೆ, ಮುಖಿಯ ಏಕೆ ಜೈಲಿನಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿಲ್ಲ.

ಸಾರ್ವಜನಿಕ ಪರೀಕ್ಷೆಗಳಲ್ಲಿ ಕೈವಾಡ: ಈ ಜಾಲವು ಹೆಚ್ಚಿನ ಸಾರ್ವಜನಿಕ ಪರೀಕ್ಷೆಗಳಲ್ಲಿ ತನ್ನ ಕೈವಾಡ ನಡೆಸಿದೆ. 2016ರ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಕಾನ್‌ಸ್ಟೆಬಲ್ ನೇಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಮುಖಿಯ ಅವರ ಕೈವಾಡವಿದೆ. 

ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಪ್ರಕಾರ, ಮುಖಿಯ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಅವರ ಪತ್ನಿ ಮಮತಾ ದೇವಿ ಅವರು 'ಮುಖಿಯ' ಅಥವಾ ಭೂತಾಖರ್ ಪಂಚಾಯತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕ ಜನಶಕ್ತಿ ಪಕ್ಷದಿಂದ ಟಿಕೆಟ್ ಪಡೆದು, ಈ ಸ್ಥಾನವನ್ನು ಹೊಂದಿದ್ದಾರೆ. 

ನೀಟ್ ಪೇಪರ್ ಸೋರಿಕೆಯಲ್ಲಿ ಭಾಗಿ: ಅಧಿಕಾರಿಗಳ ಪ್ರಕಾರ, ಮುಖಿಯ ನೀಟ್-ಯುಜಿ 2024 ಹಗರಣದಲ್ಲೂ ಭಾಗಿಯಾಗಿದ್ದಾರೆ. ಮೊಬೈಲ್ ಮೂಲಕ ಪ್ರಶ್ನೆಪತ್ರಿಕೆಗಳನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಅವರಿಗೆ ಯಾರು ಕಳುಹಿಸಿದರು ಎಂಬುದು ಸ್ಪಷ್ಟವಾಗಿಲ್ಲ. ಸೋರಿಕೆಯ ಮೂಲವನ್ನು ಪತ್ತೆ ಹಚ್ಚಲು ತನಿಖಾ ಸಂಸ್ಥೆಗಳು ಪ್ರಯತ್ನ ನಡೆಸುತ್ತಿವೆ. 

ಏತನ್ಮಧ್ಯೆ, ಬಿಹಾರದ ಆರ್ಥಿಕ ಅಪರಾಧಗಳ ಘಟಕದ ತನಿಖೆಯಿಂದ ಮುಖಿಯ ಅವರ ಆಪ್ತ ಸಹಾಯಕ ಬಲದೇವ್ ಕುಮಾರ್ ಅವರು ಮೊಬೈಲ್‌ನಲ್ಲಿ ಪ್ರಶ್ನೆಪತ್ರಿಕೆಯ ಪಿಡಿಎಫ್ ಅನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಮುಖಿಯ ಮೇ 4 ರಂದು ನೀಟ್‌ ಪರೀಕ್ಷೆಗೆ ಒಂದು ದಿನ ಮೊದಲು ಪಾಟ್ನಾದ ಲರ್ನ್ ಪ್ಲೇ ಸ್ಕೂಲಿನ ಬಾಲಕರ ಹಾಸ್ಟೆಲ್‌ನಲ್ಲಿ 25 ಅಭ್ಯರ್ಥಿಗಳಿಗೆ ವಸತಿ ಕಲ್ಪಿಸಿದ್ದರು. 

ಜಾರ್ಖಂಡ್‌ನ ದಿಯೋಘರ್‌ನಿಂದ ಬಂಧಿಸಲಾದ ಐವರು ಆರೋಪಿತ 'ಸಾಲ್ವರ್ ಗ್ಯಾಂಗ್' ಸದಸ್ಯರಲ್ಲಿ ಬಲದೇವ್ ಒಬ್ಬರು.

  

Tags:    

Similar News