ನಬಣ್ಣ ಅಭಿಜನ್: ಇಕ್ಕಟ್ಟಿನಲ್ಲಿ ಸಿಲುಕಿದ ಮಮತಾ ಸರ್ಕಾರ, ಕೋಲ್ಕತ್ತಾ ಪೊಲೀಸರು
ಕೋಲ್ಕತ್ತಾ ಪೊಲೀಸರು ಟ್ರಾಫಿಕ್ ಸಮಸ್ಯೆಯನ್ನು ಉಲ್ಲೇಖಿಸಿ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರದ ಸಾಧ್ಯತೆ ಇರುವುದರಿಂದ, ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದಾರೆ.;
ಕೋಲ್ಕತ್ತಾದಲ್ಲಿ ಮಂಗಳವಾರ (ಆಗಸ್ಟ್ 27) ನಡೆಯಲಿರುವ 'ನಬಣ್ಣ ಅಭಿಜನ್' (ಸಚಿವಾಲಯಕ್ಕೆ ನಡಿಗೆ) ವೇಳೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ನಗರ ಪೊಲೀಸರು 6,000 ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ನಬಣ್ಣ ಅಭಿಜನ್ ಎಂದರೇನು?: ರಾಜ್ಯ ಸಚಿವಾಲಯವಾದ ʻನಬಣ್ಣʼಕ್ಕೆ ಪ್ರತಿಭಟನೆ ಮೆರವಣಿಗೆ. ಈ ತಿಂಗಳ ಆರಂಭದಲ್ಲಿ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ವೈದ್ಯರು, ನಾಗರಿಕ ಸಮಾಜ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಆಯೋಜಿಸಿರುವ ಆಂದೋಲನಗಳ ಸರಣಿಗಳಲ್ಲಿ ಮೊದಲನೆಯದು.
ಹಿಂದೆ ಯಾರಿದ್ದಾರೆ?: ನಬಣ್ಣ ಅಭಿಜನ್ ಅನ್ನು ಎರಡು ಗುಂಪುಗಳು ವಿಭಿನ್ನ ಉದ್ದೇಶಗಳೊಂದಿಗೆ ಆಯೋಜಿಸುತ್ತಿವೆ: ನೋಂದಣಿಯಾಗದ ವಿದ್ಯಾರ್ಥಿ ಸಂಘಟನೆ 'ಪಶ್ಚಿಮ ಬಂಗಾ ಛಾತ್ರ ಸಮಾಜ್ʼ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘಟನೆ 'ಸಂಗ್ರಾಮಿ ಜೌತ ಮಂಚʼ.
ಬೇಡಿಕೆಗಳೇನು?: ಆರ್.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು ಎಂದು ವಿದ್ಯಾರ್ಥಿ ಸಂಘಟನೆ ಒತ್ತಾಯಿಸುತ್ತಿದೆ.
ಕೇಂದ್ರ ಸರ್ಕಾರಿ ನೌಕರರು ಪಡೆಯುವ ತುಟ್ಟಿಭತ್ಯೆಗೆ ಅನುಗುಣವಾಗಿ ತಮಗೂ ತುಟ್ಟಿಭತ್ಯೆ (ಡಿಎ) ನೀಡಬೇಕು ಎಂದು ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ.
ಮೆರವಣಿಗೆಗೆ ಅನುಮತಿ ನೀಡಿಲ್ಲ: ಪೊಲೀಸರು ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ವ್ಯಾಪಕ ಭದ್ರತೆ ವ್ಯವಸ್ಥೆ ಮಾಡಿದ್ದಾರೆ. ಪೊಲೀಸರು ಮೆರವಣಿಗೆಯನ್ನು ʻಕಾನೂನುಬಾಹಿರ ಮತ್ತು ಅನಧಿಕೃತʼ ಎಂದು ಕರೆದಿದ್ದಾರೆ.
ಕೋಲ್ಕತ್ತಾದ ಹೆಚ್ಚುವರಿ ಪೊಲೀಸ್ ಕಮಿಷನರ್ ಸುಪ್ರತಿಮ್ ಸರ್ಕಾರ್, ʻಅಭಿಜನ್ ಸಂಘಟಕರು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಕಟಣೆ ನೀಡಿದ್ದಾರೆ. ಆದರೆ, ಪೊಲೀಸರಿಂದ ಅನುಮತಿ ಪಡೆದಿಲ್ಲ. ಇದು ಹೈಕೋರ್ಟ್‌ನ ನಿರ್ದೇಶನದ ಪ್ರಕಾರ ಕಡ್ಡಾಯವಾಗಿದೆ.
ಪೊಲೀಸರು ಅನುಮತಿ ನಿರಾಕರಿಸಿದ್ದೇಕೆ?: ಟ್ರಾಫಿಕ್ ಸಮಸ್ಯೆಯೇ ಮೆರವಣಿಗೆಗೆ ಅನುಮತಿ ನಿರಾಕರಿಸಲು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಯುಜಿಸಿ-ನೆಟ್ ಪರೀಕ್ಷೆ ಮಾರ್ಚ್ 27 ರಂದು ನಡೆಯುತ್ತಿದ್ದು, ಇದರಲ್ಲಿ ರಾಜ್ಯದೆಲ್ಲೆಡೆಯ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿಭಟನೆಗೆ ಅವಕಾಶ ನೀಡುವುದರಿಂದ ಜನ-ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ ಮತ್ತು ಪರೀಕ್ಷೆಗೆ ಹಾಜರಾಗಲು ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರಿಗೆ ಬೇರೆ ಆತಂಕಗಳಿವೆಯೇ?: ಪ್ರತಿಭಟನೆ ಮೆರವಣಿಗೆಯಲ್ಲಿ ದುಷ್ಕರ್ಮಿಗಳು ನುಸುಳಿ, ಹಿಂಸಾಚಾರ ಮತ್ತು ಅವ್ಯವಸ್ಥೆಗೆ ಪ್ರಚೋದನೆ ನೀಡುವ ಸಾಧ್ಯತೆ ಇದೆ ಎಂದು ಗುಪ್ತಚರ ಮಾಹಿತಿ ಸಿಕ್ಕಿದೆ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಬಿಎನ್‌ಎಸ್‌ಎಸ್ ಸೆಕ್ಷನ್ 163 ರ ಅಡಿಯಲ್ಲಿ ನಬಣ್ಣ ಬಳಿ ನಿಷೇಧಾಜ್ಞೆ ವಿಧಿಸಲಾಗಿದೆ; ಐದು ಅಥವಾ ಹೆಚ್ಚಿನ ವ್ಯಕ್ತಿಗಳು ಸೇರುವುದನ್ನು ನಿಷೇಧಿಸಲಾಗಿದೆ.
ಪಿತೂರಿ ಎಂದಿರುವ ಟಿಎಂಸಿ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಪ್ರತಿಭಟನೆಯನ್ನು ಅವ್ಯವಸ್ಥೆ ಸೃಷ್ಟಿಸುವ ಉದ್ದೇಶದ ʻಪಿತೂರಿʼ ಎಂದು ಕರೆದಿದೆ. ಹೇಳಿಕೆಗೆ ಬೆಂಬಲವಾಗಿ, ಪಶ್ಚಿಮ ಮೇದಿನಿಪುರ ಜಿಲ್ಲೆಯ ಘಟಾಲ್‌ನಲ್ಲಿ ಬಿಜೆಪಿ ನಾಯಕರು ಮೆರವಣಿಗೆ ವೇಳೆ ಹಿಂಸಾಚಾರ ಸೃಷ್ಟಿಸುತ್ತಿರುವ ವಿಡಿಯೋ ಬಿಡುಗಡೆ ಮಾಡಿದೆ.
ವಿದ್ಯಾರ್ಥಿ ಸಂಘ ಏನು ಹೇಳುತ್ತದೆ?: ಛಾತ್ರ ಸಮಾಜದ ವಕ್ತಾರ ಸಯಾನ್ ಲಾಹಿರಿ ಮಾತನಾಡಿ, ಪೊಲೀಸರು ಮತ್ತು ಟಿಎಂಸಿ ಹೇಳಿಕೆ ಆಧಾರರಹಿತ. ನಾವು ನಮ್ಮ ಬೇಡಿಕೆಗಳನ್ನು ಶಾಂತಿಯುತವಾಗಿ ಎತ್ತುತ್ತಿದ್ಧೇವೆ. ಸಚಿವಾಲಯಕ್ಕೆ ಅಹಿಂಸಾತ್ಮಕವಾಗಿ ಮೆರವಣಿಗೆ ಮಾಡಲಿದ್ದೇವೆ ಎಂದು ಹೇಳಿದರು.
ಬಿಜೆಪಿ, ಆರೆಸ್ಸೆಸ್ ಅಥವಾ ಎಬಿವಿಪಿಯೊಂದಿಗೆ ಯಾವುದೇ ಸಂಬಂಧವಿಲ್ಲದ ಅರಾಜಕೀಯ ಸಂಸ್ಥೆಯಿಂದ ಪ್ರತಿಭಟನೆಯು ವಿವಿಧ ಸ್ಥಳಗಳಿಂದ ಆರಂಭಗೊಂಡು, ನಬಣ್ಣದ ಕಡೆಗೆ ಸಾಗಲಿದೆ ಎಂದು ಹೇಳಿದರು.