ಮೋದಿ ಮತಗಳ್ಳತನದ ಹೈಡ್ರೋಜನ್ ಬಾಂಬ್ ನಮ್ಮ ಬಳಿ ಇದೆ: ರಾಹುಲ್
ವಾಸ್ತವ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಾಶಮಾಡುವ ಹೈಡ್ರೋಜನ್ ಬಾಂಬ್ ಅನ್ನು ನಾವು ಸ್ಪೋಟಿಸುತ್ತೇವೆ. ನಮ್ಮ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಮುಕ್ತ ಮತ್ತು ಮುಚ್ಚಿದ ಪುರಾವೆಗಳಿವೆ.
ರಾಹುಲ್ ಗಾಂಧಿ
ಪ್ರಧಾನಿ ಮೋದಿ ಮತಗಳವು ಮಾಡಿಯೇ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಬಗ್ಗೆ ದೇಶದ ಯಾರೊಬ್ಬರಿಗೂ ಅನುಮಾನವೇ ಇಲ್ಲ. ಇದನ್ನು ಕಾಂಗ್ರೆಸ್ ಸಾಕ್ಷ್ಯ ಸಮೇತ ರುಜುವಾತು ಮಾಡಲಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳದ ವಯನಾಡಿನಲ್ಲಿ ಮಾತನಾಡಿದ ರಾಹುಲ್, ಶೀಘ್ರವೇ 'ಹೈಡ್ರೋಜನ್ ಬಾಂಬ್' ಅನ್ನು ಸಿಡಿಸುತ್ತೇನೆ. ನನ್ನ ಈ ಹೇಳಿಕೆಗೆ ಪೂರಕವಾದ ಸಾಕ್ಷ್ಯವಿದೆ. ನರೇಂದ್ರ ಮೋದಿ ಅವರು ಮತಗಳ್ಳತನ ಮಾಡಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬುದರ ಬಗ್ಗೆ ದೇಶದ ಯಾರೊಬ್ಬರಿಗೂ ಸಂದೇಹವಿಲ್ಲದ ರೀತಿಯಲ್ಲಿ ಸಾಬೀತುಪಡಿಸುತ್ತೇವೆ. ವಾಸ್ತವ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಾಶಮಾಡುವ ಹೈಡ್ರೋಜನ್ ಬಾಂಬ್ ಅನ್ನು ನಾವು ಸ್ಫೋಟಿಸುತ್ತೇವೆ. ನಮ್ಮ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಮುಕ್ತ ಮತ್ತು ಮುಚ್ಚಿದ ಪುರಾವೆಗಳಿವೆ ಎಂದಿದ್ದಾರೆ.
ನಾವು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದೆಲ್ಲವೂ ಕಪ್ಪು ಬಿಳುಪಿನ ಸತ್ಯ. ಕರ್ನಾಟಕದಲ್ಲಿನ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುತ್ತಿದೆ. ಮತಗಳ್ಳತನ ಮಾಡುವ ವೇಳೆ ಬಳಸಲಾದ ಫೋನ್ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡುವಂತೆ ಸಿಐಡಿ ಕೇಳಿಕೊಂಡಿದೆ. ಆದರೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸಿಐಡಿ ಕೇಳುತ್ತಿರುವ ಮಾಹಿತಿಯನ್ನು ನೀಡುತ್ತಿಲ್ಲ. ಆಯೋಗದ ವಿರುದ್ಧ ಇದಕ್ಕಿಂತ ದೊಡ್ಡ ದೋಷಾರೋಪಣೆ ಇನ್ನೊಂದಿಲ್ಲ ಎಂಬುದು ನನ್ನ ಭಾವನೆ ಎಂದು ರಾಹುಲ್ ಹೇಳಿದ್ದಾರೆ.
ಆಯೋಗವು ಮಾಹಿತಿ ನೀಡುತ್ತಿಲ್ಲ
ಪೊಲೀಸರು ಅಕ್ರಮಕ್ಕೆ ಸಂಬಂಧಿಸಿದಂತೆ ಮಾಹಿತಿ ಕೇಳುತ್ತಿದ್ದಾರೆ. ಆದರೆ ಚುನಾವಣಾ ಆಯುಕ್ತರು ಮಾಹಿತಿ ಕೊಡುತ್ತಿಲ್ಲ. ಪ್ರಧಾನಿ ಮೋದಿ ಮತಗಳ್ಳತನ ಮಾಡಿದ್ದಾರೆ, ಅದರಿಂದಲೇ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಬಗ್ಗೆ ದೇಶದ ಯಾರಿಗೂ ಸಂದೇಹವಿಲ್ಲ. ಇದನ್ನು ನಾವು ಸಾಬೀತು ಮಾಡಲಿದ್ದೇವೆ. ವಾಸ್ತವ ಸ್ಥಿತಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ಹೈಡ್ರೋಜನ್ ಬಾಂಬ್ ಅನ್ನು ಶೀಘ್ರದಲ್ಲಿಯೇ ಸ್ಫೋಟ ಮಾಡಲಿದ್ದೇವೆ. ನಾವು ಮಾಡುತ್ತಿರುವ ಎಲ್ಲಾ ಆರೋಪಗಳಿಗೂ ಕೂಡ ನಮ್ಮ ಬಳಿ ಮುಚ್ಚಿದ ಪುರಾವೆಗಳಿವೆ ಎಂದಿದ್ದಾರೆ.
ಮತದಾರರ ಪಟ್ಟಿಯನ್ನು ಟಾಂಪರಿಂಗ್ ಮಾಡಿದ ಬಗ್ಗೆ ಲೋಕಸಭಾ ವಿಪಕ್ಷ ನಾಯಕರಾಗಿ ನಿನ್ನೆ ಸುದ್ದಿಗೋಷ್ಠಿ ಕರೆದು ಆರೋಪ ಮಾಡಿದ ಬಳಿಕ ಮಾತನಾಡಿರುವ ರಾಹುಲ್, ನಾನು ಸಿಡಿಸುತ್ತೇನೆ ಎಂದು ಹೇಳುತ್ತಿರುವ ಹೈಡ್ರೋಜನ್ ಬಾಂಬ್ ನಿನ್ನೆಯ ಸುದ್ದಿಗೋಷ್ಠಿಯಲ್ಲ, ಬದಲಾಗಿ ಆ ಬಾಂಬ್ ಸಿಡಿಸಲು ಇನ್ನೂ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.
ರಾಹುಲ್ ಶುಕ್ರವಾರ (ಸೆ.19) ಸುದ್ದಿಗೋಷ್ಠಿಯಲ್ಲಿ ಆಳಂದ ಕ್ಷೇತ್ರದ ಬಗ್ಗೆ ಉಲ್ಲೇಖಿಸಿದ್ದರು. ಈ ಸಂದರ್ಭದಲ್ಲಿ 2023ರ ವಿಧಾನಸಭಾ ಚುನಾವಣೆಗೂ ಮುನ್ನ ಕ್ಷೇತ್ರದಲ್ಲಿ 6,018 ಮತದಾರರ ಹೆಸರುಗಳನ್ನು ಕೈಬಿಡುವ ಪ್ರಯತ್ನವನ್ನು ಮಾಡಲಾಗಿತ್ತು ಎಂದು ರಾಹುಲ್ ಆರೋಪಿಸಿದ್ದರು. ಮತಗಟ್ಟೆ ಮಟ್ಟದ ಕಾಂಗ್ರೆಸ್ ಏಜೆಂಟ್ ಬಬಿತಾ ಎಂಬುವವರು ತಮ್ಮ ಸಂಬಂಧಿಯೊಬ್ಬರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಪರಿಶೀಲಿಸಿ ದೂರು ದಾಖಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಗಮನಾರ್ಹ ಸಂಗತಿ ಎಂದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಕ್ಷೇತ್ರದ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಆರ್.ಪಾಟೀಲ್, ಕೇವಲ 697 ಮತಗಳ ಅಂತರದಿಂದ ಸೋಲನ್ನು ಕಂಡಿದ್ದರು. ಅದೃಷ್ಟ ಎಂಬಂತೆ 2023ರ ಚುನಾವಣೆಯಲ್ಲಿ 10,348 ಮತಗಳ ಅಂತರದಲ್ಲಿ ಪಾಟೀಲ್ ಗೆದ್ದಿದ್ದಾರೆ.