Wayanad Landslide| ಹವಾಮಾನ ಬದಲಾವಣೆಯಿಂದ ಮಳೆಯ ತೀವ್ರತೆ ಶೇ.10ರಷ್ಟು ಹೆಚ್ಚಳ

Update: 2024-08-14 08:03 GMT
ಕೇರಳದ ವಯನಾಡ್ ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಹೊಸದಿಲ್ಲಿ: ಹವಾಮಾನ ಬದಲಾವಣೆಯಿಂದ ಮಳೆಯ ತೀವ್ರತೆ ಶೇ.10ರಷ್ಟು ಅಧಿಕಗೊಂಡಿದ್ದು, ವಯನಾಡ್ ಜಿಲ್ಲೆಯಲ್ಲಿ ಮಾರಣಾಂತಿಕ ಭೂಕುಸಿತಕ್ಕೆ ಕಾರಣ ಎಂದು ಜಾಗತಿಕ ವಿಜ್ಞಾನಿಗಳ ತಂಡದ ಅಧ್ಯಯನ ಹೇಳಿದೆ.

ಹವಾಮಾನ ಬದಲಾವಣೆ ಹೆಚ್ಚುತ್ತ ಹೋಗುವುದರಿಂದ ಇಂತಹ ಘಟನೆಗಳು ಕ್ರಮೇಣ ಸರ್ವೇಸಾಮಾನ್ಯವಾಗುತ್ತವೆ ಎಂದು ಭಾರತ, ಸ್ವೀಡನ್, ಅಮೆರಿಕ ಮತ್ತು ಇಂಗ್ಲೆಂಡಿನ ಶೋಧಕರು ಎಚ್ಚರಿಸಿದ್ದಾರೆ. 

ಮಾನವರ ಚಟುವಟಿಕೆಯಿಂದ ಆಗುವ ಹವಾಮಾನ ಬದಲಾವಣೆಯ ಪರಿಣಾಮವನ್ನು ಅಳೆಯಲು ವರ್ಲ್ಡ್ ವೆದರ್ ಆಟ್ರಿಬ್ಯೂಷನ್ (ಡಬ್ಲ್ಯುಡಬ್ಲ್ಯುಎ) ಗುಂಪಿನ ವಿಜ್ಞಾನಿಗಳು ಸಣ್ಣ ಅಧ್ಯಯನ ಪ್ರದೇಶದಲ್ಲಿ ಹವಾಮಾನ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ. 

1850-1900 ರ ಸರಾಸರಿಗೆ ಹೋಲಿಸಿದರೆ ಸರಾಸರಿ ಜಾಗತಿಕ ತಾಪಮಾನವು ಎರಡು ಡಿಗ್ರಿ ಸೆಲ್ಸಿಯಸ್‌ನಿಂದ ಏರಿದರೆ ಮಳೆಯ ತೀವ್ರತೆಯಲ್ಲಿ ಶೇ. 4ರಷ್ಟು ಹೆಚ್ಚಳವನ್ನು ನಿರೀಕ್ಷಿಸಬಹುದು. ಆದರೆ, ಅಧ್ಯಯನದ ಪ್ರದೇಶವು ಚಿಕ್ಕದಾಗಿದೆ ಮತ್ತು ಮಳೆ-ಹವಾಮಾನ ಸಂಬಂಧ ಸಂಕೀರ್ಣವಾಗಿರುವುದರಿಂದ, ಮಾದರಿ ಫಲಿತಾಂಶದಲ್ಲಿ ಅನಿಶ್ಚಿತತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಒಂದು ದಿನದಲ್ಲಿ ಭಾರೀ ಮಳೆ ಘಟನೆಗಳ ಹೆಚ್ಚಳವು ಭಾರತ ಒಳಗೊಂಡಂತೆ ಬೆಚ್ಚಗಾಗುತ್ತಿರುವ ಜಗತ್ತಿನಲ್ಲಿ ವೈಜ್ಞಾನಿಕ ಪುರಾವೆಗಳೊಂದಿಗೆ ತಾಳೆಯಾಗುತ್ತದೆ. ಬೆಚ್ಚಗಿನ ವಾತಾವರಣವು ಹೆಚ್ಚು ತೇವಾಂಶವನ್ನು ಹೊಂದಿರುತ್ತದೆ, ಇದು ಭಾರೀ ಮಳೆಗೆ ಕಾರಣವಾಗುತ್ತದೆ.

ವಿಜ್ಞಾನಿಗಳ ಪ್ರಕಾರ, ಜಾಗತಿಕ ತಾಪಮಾನದಲ್ಲಿ ಪ್ರತಿ ಒಂದು ಡಿಗ್ರಿ ಸೆಲ್ಸಿಯಸ್ ಏರಿಕೆಯಿಂದ ವಾತಾವರಣದ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವು ಸುಮಾರು ಶೇ. 7 ರಷ್ಟು ಹೆಚ್ಚುತ್ತದೆ. ಹಸಿರುಮನೆ ಅನಿಲಗಳು, ಪ್ರಾಥಮಿಕವಾಗಿ ಇಂಗಾಲದ ಡೈಆಕ್ಸೈಡ್ ಮತ್ತು ಮೀಥೇನ್‌ಗಳ ಸಾಂದ್ರತೆ ಹೆಚ್ಚಳದಿಂದ ಭೂಮಿಯ ಮೇಲ್ಮೈ ತಾಪಮಾನ ಈಗಾಗಲೇ ಸುಮಾರು 1.3 ಡಿಗ್ರಿ ಸೆಲ್ಸಿಯಸ್‌ ನಷ್ಟು ಹೆಚ್ಚಿದೆ. ವಿಶ್ವಾದ್ಯಂತ ಬರ, ಶಾಖದ ಅಲೆಗಳು ಮತ್ತು ಪ್ರವಾಹಗಳಂತಹ ಹವಾಮಾನ ವೈಪರೀತ್ಯಗಳು ಹೆಚ್ಚಳಕ್ಕೆ ಹಿಂದಿನ ಕಾರಣ ಇದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಡಬ್ಲ್ಯುಡಬ್ಲ್ಯುಎ ವಿಜ್ಞಾನಿಗಳು ವಯನಾಡಿನ ಭೂಪ್ರದೇಶ, ಭೂಮಿ ಬಳಕೆಯಲ್ಲಿ ಬದಲಾವಣೆ ಮತ್ತು ಭೂಕುಸಿತದ ಅಪಾಯದ ನಡುವಿನ ಸಂಬಂಧ ಅಧ್ಯಯನದಿಂದ ಸ್ಪಷ್ಟವಾಗಿಲ್ಲ. ಕಲ್ಲುಗಣಿಗಾರಿಕೆ ಮತ್ತು ಅರಣ್ಯ ಪ್ರದೇಶ ಶೇ.62ರಷ್ಟು ಕಡಿಮೆಯಾಗಿರುವುದರಿಂದ ಇಳಿಜಾರು ಹೆಚ್ಚಿದ್ದು, ಭಾರೀ ಮಳೆಯ ಸಮಯದಲ್ಲಿ ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿಸಿರಬಹುದು ಎಂದು ಹೇಳಿದ್ದಾರೆ.

ಇತರ ಸಂಶೋಧಕರ ಪ್ರಕಾರ, ವಯನಾಡ್ ಭೂಕುಸಿತಕ್ಕೂ ಅರಣ್ಯ ಪ್ರದೇಶ ನಾಶ, ದುರ್ಬಲ ಭೂಪ್ರದೇಶದಲ್ಲಿ ಗಣಿಗಾರಿಕೆ ಮತ್ತು ದೀರ್ಘಾವಧಿ ನಂತರ ಭಾರೀ ಮಳೆಗೂ ಸಂಬಂಧವಿದೆ.

ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ(ಕುಸಾಟ್)ದ ವಿಜ್ಞಾನಿ ಎಸ್. ಅಭಿಲಾಶ್ ಪ್ರಕಾರ, ಅರಬ್ಬಿ ಸಮುದ್ರದ ತಾಪಮಾನವು ಸಾಂದ್ರ ಮೋಡ ವ್ಯವಸ್ಥೆಗಳ ರಚನೆಗೆ ಕಾರಣವಾಗುತ್ತದೆ. ಇದರಿಂದ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. 

ಕಳೆದ ವರ್ಷ ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಬಿಡುಗಡೆ ಮಾಡಿದ ಭೂಕುಸಿತ ಅಟ್ಲಾಸ್ ಪ್ರಕಾರ, ಭಾರತದ 30 ಭೂಕುಸಿತ ಪೀಡಿತ ಜಿಲ್ಲೆಗಳಲ್ಲಿ 10 ಕೇರಳದಲ್ಲಿದೆ; ಪಟ್ಟಿಯಲ್ಲಿ ವಯನಾಡ್ 13 ನೇ ಸ್ಥಾನದಲ್ಲಿದೆ.

2021 ರಲ್ಲಿ ಸ್ಪ್ರಿಂಗರ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಕೇರಳದ ಭೂಕುಸಿತದ ಹಾಟ್‌ಸ್ಪಾಟ್‌ಗಳು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿವೆ ಮತ್ತು ಇಡುಕ್ಕಿ, ಎರ್ನಾಕುಲಂ, ಕೊಟ್ಟಾಯಂ, ವಯನಾಡ್, ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿವೆ. ಕೇರಳದಲ್ಲಿ ಸಂಭವಿಸಿದ ಒಟ್ಟು ಭೂಕುಸಿತಗಳಲ್ಲಿ ಶೇ. 59 ರಷ್ಟು ತೋಟ ಪ್ರದೇಶಗಳಲ್ಲಿ ಸಂಭವಿಸಿದೆ ಎಂದು ಹೇಳಿದೆ.

ವಯನಾಡಿನಲ್ಲಿ 1950 ಮತ್ತು 2018 ರ ನಡುವೆ ಶೇ. 62 ರಷ್ಟು ಅರಣ್ಯಗಳು ಕಣ್ಮರೆಯಾದವು: ಆದರೆ ತೋಟಗಳ ವಿಸ್ತೀರ್ಣ ಸುಮಾರು ಶೇ.1,800 ರಷ್ಟು ಹೆಚ್ಚಿತು ಎಂದು ವಯನಾಡಿನಲ್ಲಿ ಅರಣ್ಯ ಕುರಿತ 2022 ರ ಅಧ್ಯಯನ ಹೇಳಿದೆ.

Tags:    

Similar News