Wayanad : ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಹುಳ ಬಿದ್ದ ಅಕ್ಕಿ ವಿತರಣೆ! ಪ್ರತಿಭಟನೆ ವೇಳೆ ಐವರಿಗೆ ಗಾಯ
ಜುಲೈ 30 ರಂದು ನಡೆದ ವಯನಾಡ್ ಭೂಕುಸಿತ ದುರಂತವು ಮೂರು ಹಳ್ಳಿಗಳ ದೊಡ್ಡ ಭಾಗಗಳನ್ನು ಧ್ವಂಸಗೊಳಿಸಿತ್ತು. ಘಟನೆಯಲ್ಲಿ 231 ಮಂದಿ ಜೀವ ಕಳೆದುಕೊಂಡಿದ್ದರು.;
ಕೇರಳದ ವಯನಾಡ್‌ನಲ್ಲಿ ಕೆಲವು ತಿಂಗಳ ಹಿಂದೆ ಸಂಭವಿಸಿದ ಭೀಕರ ಭೂಕುಸಿತದ ಸಂತ್ರಸ್ತರಿಗೆ ಅಲ್ಲಿನ ಪಂಚಾಯತಿ ಕಚೇರಿಯಿಂದ ವಿತರಿಸಲಾಗುತ್ತಿರುವ ಆಹಾರ ಕಿಟ್‌ಗಳಲ್ಲಿ ಹುಳಗಳು ಕಂಡ ಹಿನ್ನೆಲೆಯಲ್ಲಿ ಸಂತ್ರಸ್ತರು ಗುರುವಾರ (ನವೆಂಬರ್7ರಂದು) ನಡೆಸಿದ ಪ್ರತಿಭಟನೆ ವೇಳೆ ಹಿಂಸಾಚಾರ ಉಂಟಾಗಿ ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನಿಯಂತ್ರಣದಲ್ಲಿರುವ ಮೆಪ್ಪಾಡಿ ಗ್ರಾಮ ಪಂಚಾಯಿತಿಯಿಂದ ಆಹಾರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಇಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಕೆಲವರು ದೂರು ನೀಡಿದ ಬಳಿಕ ಸಮಸ್ಯೆ ಭುಗಿಲೆದ್ದಿದೆ. ಆಹಾರ ಪದಾರ್ಥಗಳು ಪ್ರಾಣಿಗಳಿಗೂ ತಿನ್ನಲು ಯೋಗ್ಯವಾಗಿಲ್ಲ ಎಂದು ಜನರು ದೂರಿದ್ದಾರೆ. ಅಲ್ಲದೆ ಬಳಸಿದ ಬಟ್ಟೆಗಳನ್ನು ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಅಕ್ಕಿ ಮತ್ತು ಗೋಧಿ ಹಿಟ್ಟು ಸೇರಿದಂತೆ ಕಲುಷಿತ ಆಹಾರ ಪದಾರ್ಥಗಳನ್ನು ಪ್ರತಿಭಟನೆ ವೇಳೆ ಪ್ರದರ್ಶಿಸಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಡಿವೈಎಫ್‌ಐ ಪ್ರತಿಭಟನೆ
ಸಿಪಿಐ(ಎಂ)ನ ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (DYFI) ಸದಸ್ಯರು ಪಂಚಾಯತ್ ಅಧ್ಯಕ್ಷರ ಕಚೇರಿಗೆ ಬಲವಂತವಾಗಿ ನುಗ್ಗಲು ಯತ್ನಿಸಿದಾಗ ಘರ್ಷಣೆ ಉಂಟಾಯಿತು.
ಪೊಲೀಸರು ಮತ್ತು ಪಂಚಾಯತ್ ಸದಸ್ಯರು ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿದರು. ಇದು ಕೈಕೈ ಮಿಲಾಯಿಸಲು ಕಾರಣವಾಯಿತು. ಈ ವೇಳೆ ಪಂಚಾಯತ್ ಅಧ್ಯಕ್ಷ ಕೆ.ಬಾಬು ಸೇರಿದಂತೆ ಐವರು ಗಾಯಗೊಂಡರು. ಅವರಲ್ಲಿ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಫ್‌ಐ ಸದಸ್ಯರು ಕಲುಷಿತ ಅಕ್ಕಿಯನ್ನು ಪಂಚಾಯಿತಿ ಕಚೇರಿ ಮುಂದೆ ಸುರಿತು ಧರಣಿ ಸತ್ಯಾಗ್ರಹ ನಡೆಸಿದರು. ಡಿವೈಎಫ್‌ಐ ಕಾರ್ಯಕರ್ತರು ಹಾಗೂ ಪಂಚಾಯಿತಿ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದರು. ಕಂದಾಯ ಇಲಾಖೆ ಮತ್ತು ದತ್ತಿ ಸಂಸ್ಥೆಗಳು ನೀಡಿದ ಆಹಾರ ಕಿಟ್‌ಗಳನ್ನು ಪೂರೈಸಿದ್ದೇವೆ ಎಂದು ಪಂಚಾಯಿತಿ ಅಧಿಕಾರಿಗಳು ಸಮಜಾಯಿಷಿ ಕೊಟ್ಟರೂ ಪ್ರತಿಭಟನಾಕಾರರು ಕೇಳಲಿಲ್ಲ.
ಆರೋಪ, ಪ್ರತ್ಯಾರೋಪ
ನಾವು ಕಳೆದ ಮೂರು ತಿಂಗಳಿಂದ ಯಾವುದೇ ಸಮಸ್ಯೆಗಳಿಲ್ಲದೆ ಆಹಾರದ ಕಿಟ್‌ಗಳನ್ನು ಪೂರೈಸುತ್ತಿದ್ದೇವೆ. ಆಪಾದಿತ ಕಿಟ್‌ಗಳನ್ನು ಜಿಲ್ಲಾಧಿಕಾರಿಗಳು ಸರಬರಾಜು ಮಾಡಿದ್ದಾರೆ ಎಂದು ಪಂಚಾಯತ್ ಸದಸ್ಯರೊಬ್ಬರು ಹೇಳಿದ್ದಾರೆ. ಈ ಘಟನೆಯ ಹಿಂದೆ ಪಿತೂರಿ ನಡೆಯುತ್ತಿದೆ ಎಂದು ಪಂಚಾಯತ್ ಸದಸ್ಯರು ಆರೋಪಿಸಿದ್ದಾರೆ.
ಜುಲೈ 30ರಂದು ನಡೆದ ವಯನಾಡ್ ದುರಂತವು ಮೂರು ಹಳ್ಳಿಗಳ ದೊಡ್ಡ ಭಾಗಗಳನ್ನು ಸರ್ವನಾಶ ಮಾಡಿತ್ತು. ಘಟನೆಯಲ್ಲಿ 231 ಮಂದಿ ಜೀವ ಕಳೆದುಕೊಂಡಿದ್ದರು. ಘಟನೆಯಲ್ಲಿ ಕನಿಷ್ಠ 47 ಜನರು ಇನ್ನೂ ನಾಪತ್ತೆಯಾಗಿದ್ದಾರೆ.