ಬಿಹಾರ ಚುನಾವಣೆಯಲ್ಲಿ ಮತಗಳವಿನ ಸಂಚು ಯಶಸ್ವಿಯಾಗಲು ಬಿಡೆವು: ರಾಹುಲ್ ಗಾಂಧಿ

ಬಿಹಾರದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 1,300 ಕಿ.ಮೀ. ಕ್ರಮಿಸಲಿರುವ 'ಮತದಾರ ಅಧಿಕಾರ ಯಾತ್ರೆ'ಗೆ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಚಾಲನೆ ನೀಡುವ ಮುನ್ನ, ಸಸಾರಾಮ್​​ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದರು.;

Update: 2025-08-17 10:55 GMT

ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಶಾಮೀಲಾಗಿ ಚುನಾವಣೆಯನ್ನು ಹೈಜಾಕ್​ ಮಾಡುತ್ತಿದೆ ಎಂಬುದು ಇಡೀ ದೇಶಕ್ಕೆ ಈಗ ತಿಳಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಬಿಹಾರದಲ್ಲಿ ನಡೆಸಲಾದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ಮತದಾರರ ತಮಗೆ ಬೇಕಾದ ಹೆಸರುಗಳನ್ನು ಸೇರಿಸಿ ಮತ್ತು ಪ್ರತಿಪಕ್ಷಗಳ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ. ಆದರೆ, ಚುನಾವಣೆಯನ್ನು ಕದಿಯುವ ಅವರ ಸಂಚು ಯಶಸ್ವಿಯಾಗಲು 'ಇಂಡಿಯಾ' ಮೈತ್ರಿಕೂಟ ಬಿಡುವುದಿಲ್ಲ ರಾಹುಲ್ ಹೇಳಿದರು.

ಬಿಹಾರದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 1,300 ಕಿ.ಮೀ. ಕ್ರಮಿಸಲಿರುವ 'ಮತದಾರ ಅಧಿಕಾರ ಯಾತ್ರೆ'ಗೆ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಚಾಲನೆ ನೀಡುವ ಮುನ್ನ, ಸಸಾರಾಮ್​​ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದರು.

ದೇಶದಾದ್ಯಂತ ಮತ ಕಳ್ಳತನದ ಆರೋಪ

"ಇಡೀ ದೇಶದಲ್ಲಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅಕ್ರಮ ನಡೆಸಲಾಗುತ್ತಿದೆ. ಈಗ ಬಿಹಾರದಲ್ಲಿ ಎಸ್‌ಐಆರ್‌ ಮೂಲಕ ಮತದಾರರ ಪಟ್ಟಿಗಳನ್ನು ತಿದ್ದುಪಡಿ ಮಾಡಿ, ಚುನಾವಣೆಯನ್ನು ಕದಿಯುವುದು ಅವರ ಪಿತೂರಿ" ಎಂದು ರಾಹುಲ್ ಆರೋಪಿಸಿದರು. "ಆದರೆ, ಬಿಹಾರದಲ್ಲಿ ಚುನಾವಣೆ ಕದಿಯಲು ನಾವು ಬಿಡುವುದಿಲ್ಲ. ಬಿಹಾರದ ಜನತೆ ಇದಕ್ಕೆ ಅವಕಾಶ ನೀಡುವುದಿಲ್ಲ. ಬಡವರಿಗೆ ಇರುವ ಏಕೈಕ ಶಕ್ತಿ ಎಂದರೆ ಮತದಾನದ ಹಕ್ಕು, ಅದನ್ನು ಕಸಿಯಲು ನಾವು ಬಿಡೆವು," ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಹೇಳಿದರು.

'ಮತ ಕಳ್ಳತನ'ದ ಬಗ್ಗೆ ತಾವು ಪತ್ರಿಕಾಗೋಷ್ಠಿ ನಡೆಸಿದಾಗ ತಮ್ಮಿಂದ ಅಫಿಡವಿಟ್ ಕೇಳಲಾಗಿತ್ತು, ಆದರೆ ಇದೇ ರೀತಿಯ ಆರೋಪ ಮಾಡಿದ ಬಿಜೆಪಿ ನಾಯಕರಿಂದ ಏನನ್ನೂ ಕೇಳಲಿಲ್ಲ ಎಂದ ರಾಹುಲ್​ ಚುನಾವಣಾ ಆಯೋಗದ ತಾರತಮ್ಯವನ್ನು ಟೀಕಿಸಿದರು.

16 ದಿನಗಳ, 1,300 ಕಿ.ಮೀ. ಯಾತ್ರೆ

ಬಿಹಾರ ವಿಧಾನಸಭಾ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿಯಿರುವಾಗ, ಈ ಯಾತ್ರೆಗೆ ಚಾಲನೆ ನೀಡಲಾಗಿದೆ. ಈ ಯಾತ್ರೆಯು 16 ದಿನಗಳ ಕಾಲ ನಡೆಯಲಿದ್ದು, 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 1,300 ಕಿ.ಮೀ. ಗೂ ಹೆಚ್ಚು ದೂರ ಸಾಗಲಿದೆ. ಸಸಾರಾಮ್​ನಿಂದ ಆರಂಭವಾದ ಯಾತ್ರೆಯು ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ಬೃಹತ್ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದೆ.

"16 ದಿನಗಳು, 20ಕ್ಕೂ ಅಧಿಕ ಜಿಲ್ಲೆಗಳು, 1,300+ ಕಿ.ಮೀ. 'ಒಬ್ಬ ವ್ಯಕ್ತಿ, ಒಂದು ಮತ' ಎಂಬ ಪ್ರಜಾಪ್ರಭುತ್ವದ ಮೂಲಭೂತ ಹಕ್ಕನ್ನು ರಕ್ಷಿಸುವ ಈ ಹೋರಾಟದಲ್ಲಿ ನಮ್ಮೊಂದಿಗೆ ಸೇರಿ," ಎಂದು ರಾಹುಲ್ ಗಾಂಧಿ 'ಎಕ್ಸ್' ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ನಡೆದ 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯಂತೆಯೇ ಈ ಯಾತ್ರೆಯೂ ಪಾದಯಾತ್ರೆ ಮತ್ತು ವಾಹನಗಳ ಮೂಲಕ ಮಿಶ್ರ ಮಾದರಿಯಲ್ಲಿ ಸಾಗಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ವಿಐಪಿ ಪಕ್ಷದ ಮುಖೇಶ್ ಸಹಾನಿ, ಸಿಪಿಐ(ಎಂಎಲ್)ನ ದೀಪಂಕರ್ ಭಟ್ಟಾಚಾರ್ಯ ಸೇರಿದಂತೆ 'ಇಂಡಿಯಾ' ಮೈತ್ರಿಕೂಟದ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.

Tags:    

Similar News