ರೈತ ನಾಯಕ ರಾಕೇಶ್ ಟಿಕಾಯತ್​ ಶಿರಚ್ಛೇದಕ್ಕೆ ಬಹುಮಾನ ಘೋಷಿಸಿದ ವ್ಯಕ್ತಿಯ ವಿರುದ್ಧ ಕೇಸ್​ ದಾಖಲು

ಈ ಆಘಾತಕಾರಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ರೈತ ಮುಖಂಡರ ಬೆಂಬಲಿಗರು ಮುಜಫ್ಫರ್‌ನಗರ ಮತ್ತು ಮೀರತ್ ಜಿಲ್ಲೆಗಳಲ್ಲಿ ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದರು.;

Update: 2025-05-19 06:13 GMT

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್​ ಅವರ​ ಶಿರಚ್ಛೇದ ಮಾಡಿದವರಿಗೆ ಬಹುಮಾನ ನೀಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ಪ್ರಕರಣ ದಾಖಲಾಗಿದೆ.

ಈ ಆಘಾತಕಾರಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ರೈತ ಮುಖಂಡರ ಬೆಂಬಲಿಗರು ಮುಜಫ್ಫರ್‌ನಗರ ಮತ್ತು ಮೀರತ್ ಜಿಲ್ಲೆಗಳಲ್ಲಿ ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಹಿನ್ನೆಲೆಯಲ್ಲಿ, ಆರೋಪಿ ಅಮಿತ್ ಚೌಧರಿ ವಿರುದ್ಧ ಮುಜಫ್ಫರ್‌ನಗರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅಶುತೋಷ್ ಕುಮಾರ್ ಸಿಂಗ್ ಅವರು ಭಾನುವಾರದಂದು ನೀಡಿದ ಮಾಹಿತಿಯ ಪ್ರಕಾರ, ವೈರಲ್ ಆಗಿರುವ ವೀಡಿಯೋದಲ್ಲಿ ಆರೋಪಿಯು ರಾಕೇಶ್ ಅವರ ಶಿರಚ್ಛೇದಕ್ಕಾಗಿ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ.

ಮುಜಫ್ಫರ್‌ನಗರದಲ್ಲಿ, ಬಿಕೆಯು ಜಿಲ್ಲಾಧ್ಯಕ್ಷ ನವೀನ್ ರಾಠಿ ನೇತೃತ್ವದಲ್ಲಿ ನೂರಾರು ಪ್ರತಿಭಟನಾಕಾರರು ಅಮಿತ್ ಚೌಧರಿ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಾಗಿ ರಾಠಿ ಖಚಿತಪಡಿಸಿದ್ದಾರೆ.

ಇದೇ ರೀತಿಯಾಗಿ, ಮೀರತ್‌ನಲ್ಲಿಯೂ ಬಿಕೆಯು ಕಾರ್ಯಕರ್ತರು ಜನಿ ಪೊಲೀಸ್ ಠಾಣೆಯನ್ನು ಸುತ್ತುವರಿದು ಚೌಧರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಬಿಕೆಯು ಮೀರತ್ ಜಿಲ್ಲಾಧ್ಯಕ್ಷ ಅನುರಾಗ್ ಚೌಧರಿ ನೇತೃತ್ವದಲ್ಲಿ ಟ್ರ್ಯಾಕ್ಟರ್-ಟ್ರಾಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪೊಲೀಸ್ ಠಾಣೆ ಆವರಣದಲ್ಲಿ ಧರಣಿ ಕುಳಿತಿದ್ದರು.

ಎರಡೂ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಾಗಿರುವುದನ್ನು ದೃಢಪಡಿಸಿದ್ದಾರೆ. ಆದರೆ, ಆರೋಪಿ ಇಂತಹ ಹೇಳಿಕೆಗಳನ್ನು ನೀಡಲು ಕಾರಣಗಳೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಸದ್ಯಕ್ಕೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Tags:    

Similar News