ಪವನ್ ಕಲ್ಯಾಣ್ ಹೇಳಿಕೆ- ʻಕಾದು ನೋಡೋಣʼ ಎಂದ ಉದಯನಿಧಿ

ಸನಾತನ ಧರ್ಮವನ್ನು ನಾಶಮಾಡಲು ಬಯಸುವವರು ಸ್ವತಃ ನಾಶವಾಗುತ್ತಾರೆ ಎಂಬ ಪವನ್‌ ಕಲ್ಯಾಣ್‌ ಹೇಳಿಕೆಗೆ, ‘ಕಾದು ನೋಡೋಣ’ ಎಂದು ಉದಯನಿಧಿ ಪ್ರತಿಕ್ರಿಯಿಸಿದ್ದಾರೆ.

Update: 2024-10-04 10:10 GMT

ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರ ʻಸನಾತನ ಧರ್ಮವನ್ನು ಕೆಣಕಿದರೆ, ನಾಶವಾಗುತ್ತೀರಿʼ ಎಂಬ ಹೇಳಿಕೆಗೆ ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ನಗುತ್ತ, ʻಕಾದು ನೋಡೋಣ ... ಕಾದು ನೋಡೋಣ,ʼ ಎಂದು ಶುಕ್ರವಾರ ಪ್ರತಿಕ್ರಿಯಿಸಿ ದ್ದಾರೆ.

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು‌ ʻಸನಾತನ ಧರ್ಮವನ್ನು ವೈರಸ್‌ಗೆ ಹೋಲಿಸಬೇಡಿ. ನಾನು ನಿಜವಾದ ಸನಾತನಿʼ ಎಂದು ಉದಯನಿಧಿ ಅವರಿಗೆ ಎಚ್ಚರಿಸಿದ್ದರು. 

ʻಸನಾತನ ಧರ್ಮವು ವೈರಸ್‌ನಂತೆ ಮತ್ತು ಅದು ನಾಶವಾಗುತ್ತದೆ ಎಂದು ಹೇಳಿದ್ದಿರಿ. ಯಾರು ಏನು ಹೇಳಿದರೂ, ಸನಾತನ ಧರ್ಮವನ್ನು ತೊಡೆದುಹಾಕಲು ಸಾಧ್ಯವಿಲ್ಲ. ಅಂಥ ಪ್ರಯತ್ನ ಮಾಡಿದವರು ನಾಶವಾಗುತ್ತಾರೆ,ʼ ಎಂದು ಪವನ್ ಕಲ್ಯಾಣ್ ಅವರು ತಿರುಪತಿಯಲ್ಲಿ ಹೇಳಿದ್ದರು. 

ʻಸನಾತನ ಧರ್ಮವನ್ನು ರಕ್ಷಿಸಲು ರಾಷ್ಟ್ರೀಯ ಶಾಸನ ತರಬೇಕು; ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸನಾತನ ಧರ್ಮ ಸಂರಕ್ಷಣಾ ಮಂಡಳಿಗಳನ್ನು ಸ್ಥಾಪಿಸಬೇಕಿದೆ. ನಾನು ಸನಾತನ ಹಿಂದೂ.ಧರ್ಮವನ್ನು ಜೀವ ತೆತ್ತು ರಕ್ಷಿಸುತ್ತೇನೆ. ನಿಮ್ಮಂಥವರು [ಉದಯನಿಧಿ] ಬರಬಹುದು, ಹೋಗಬಹುದು. ಆದರೆ, ಸನಾತನ ಧರ್ಮವು ಶಾಶ್ವತವಾಗಿರುತ್ತದೆ. ಅದು ನಿಲ್ಲುವುದಿಲ್ಲ,ʼ ಎಂದರು.

ಉದಯನಿಧಿ ಏನು ಹೇಳಿದ್ದರು?: ಕಳೆದ ವರ್ಷ ಸನಾತನ ಧರ್ಮವನ್ನು ಮಲೇರಿಯಾ, ಡೆಂಗೆ ಮತ್ತು ಕೊರೊನಾ ವೈರಸ್‌ಗೆ ಹೋಲಿಸಿದ್ದ ಉದಯನಿಧಿ, ಅಂತಹ ವೈರಸ್‌ ನಾಶಪಡಿಸಬೇಕು ಎಂದು ಹೇಳಿದ್ದರು. 2024 ರ ಲೋಕಸಭೆ ಚುನಾವಣೆಗೆ ಮುನ್ನಈ ಹೇಳಿಕೆ ಭಾರೀ ರಾಜಕೀಯ ಗದ್ದಲ ಹುಟ್ಟುಹಾಕಿತ್ತು.

.

Tags:    

Similar News