ಕರೂರು ದುರಂತದ ಎಫೆಕ್ಟ್: ನಟ ವಿಜಯ್ ಸಾರ್ವಜನಿಕ ಸಭೆಗಳು ತಾತ್ಕಾಲಿಕ ಮುಂದೂಡಿಕೆ
ನಾವು ನಮ್ಮ ಪ್ರಿಯ ಜನರನ್ನು ಕಳೆದುಕೊಂಡ ದುಃಖದಲ್ಲಿ ಇರುವ ಈ ಸಂದರ್ಭದಲ್ಲಿ, ನಮ್ಮ ಪಕ್ಷದ ನಾಯಕನ ಸಾರ್ವಜನಿಕ ಸಭೆಯ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಟಿವಿಕೆ ತಿಳಿಸಿದೆ.
ಮುಂದಿನ ಎರಡು ವಾರಗಳ ಕಾಲ ಪಕ್ಷದ ಮುಖ್ಯಸ್ಥ ಮತ್ತು ನಟ ವಿಜಯ್ ಅವರ ಸಾರ್ವಜನಿಕ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಟಿವಿಕೆ ಪ್ರಕಟಿಸಿದೆ.
ತಮಿಳುನಾಡಿನ ಕರೂರಿನಲ್ಲಿ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷದ ಸಮಾವೇಶದಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ, ಪಕ್ಷದ ಸಂಸ್ಥಾಪಕ ಹಾಗೂ ನಟ ವಿಜಯ್ ಅವರು ತಮ್ಮ ಎಲ್ಲಾ ಸಾರ್ವಜನಿಕ ಸಭೆಗಳನ್ನು ಮುಂದಿನ ಎರಡು ವಾರಗಳ ಕಾಲ ತಾತ್ಕಾಲಿಕವಾಗಿ ಮುಂದೂಡುವುದಾಗಿ ಘೋಷಿಸಿದ್ದಾರೆ.
ಸೆಪ್ಟೆಂಬರ್ 27ರಂದು ನಡೆದ ಈ ದುರಂತದಲ್ಲಿ 41 ಮಂದಿ ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿದ್ದರು. ಈ ಘಟನೆಯು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಶೋಕದ ಹಿನ್ನೆಲೆಯಲ್ಲಿ ಸಭೆಗಳ ಮುಂದೂಡಿಕೆ
ಈ ಕುರಿತು ಪಕ್ಷದ ಅಧಿಕೃತ 'ಎಕ್ಸ್' ಖಾತೆಯಲ್ಲಿ ಹೇಳಿಕೆ ನೀಡಿರುವ ಟಿವಿಕೆ, "ನಮ್ಮ ಪ್ರೀತಿಯ ಜನರನ್ನು ಕಳೆದುಕೊಂಡ ದುಃಖದಲ್ಲಿರುವ ಈ ಸಮಯದಲ್ಲಿ, ನಮ್ಮ ಪಕ್ಷದ ನಾಯಕನ ಸಾರ್ವಜನಿಕ ಸಭೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪಕ್ಷದ ನಾಯಕನ ಅನುಮೋದನೆಯೊಂದಿಗೆ, ಸಭೆಗಳ ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು," ಎಂದು ತಿಳಿಸಿದೆ. ಈ ನಿರ್ಧಾರವು ಮೃತರ ಕುಟುಂಬಗಳಿಗೆ ಗೌರವ ಸಲ್ಲಿಸುವ ಮತ್ತು ಪ್ರಸ್ತುತದ ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸುವ ಪ್ರಯತ್ನವಾಗಿದೆ.
ಸರ್ಕಾರದ ವಿರುದ್ಧ ವಿಜಯ್ ನೇರ ಸವಾಲು
ಸಭೆಗಳನ್ನು ಮುಂದೂಡುವ ಮುನ್ನ, ಮಂಗಳವಾರ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದ ನಟ ವಿಜಯ್, "ಸತ್ಯ ಶೀಘ್ರದಲ್ಲೇ ಹೊರಬರಲಿದೆ," ಎಂದು ಹೇಳುವ ಮೂಲಕ ತಮಿಳುನಾಡು ಸರ್ಕಾರಕ್ಕೆ ನೇರ ಸವಾಲು ಹಾಕಿದ್ದರು. "ನನ್ನನ್ನು ಏನು ಬೇಕಾದರೂ ಮಾಡಿ, ಆದರೆ ಜನರನ್ನು ಬಿಟ್ಟುಬಿಡಿ" ಎಂದು ಆಡಳಿತಕ್ಕೆ ಮನವಿ ಮಾಡಿದ್ದ ಅವರು, "ಇತರ ಜಿಲ್ಲೆಗಳಲ್ಲಿ ನಡೆಯದ ಘಟನೆ ಕರೂರಿನಲ್ಲಿ ಮಾತ್ರ ಏಕೆ ನಡೆಯಿತು? ಇದರ ಹಿಂದೆ ವ್ಯವಸ್ಥಿತ ಸಂಚು ಇರಬಹುದೇ?" ಎಂದು ಗಂಭೀರ ಪ್ರಶ್ನೆ ಎತ್ತಿದ್ದರು. ತಮ್ಮ ಸಭೆಗಳಿಗೆ ಸದಾ ಭದ್ರತೆಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು ಮತ್ತು ಪೊಲೀಸರ ಅನುಮತಿ ಪಡೆದೇ ಸ್ಥಳಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದರು.
ಸರ್ಕಾರದ ತಿರುಗೇಟು
ವಿಜಯ್ ಅವರ ಈ ಆರೋಪಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿದ ತಮಿಳುನಾಡು ಸರ್ಕಾರ, ಪತ್ರಿಕಾಗೋಷ್ಠಿ ನಡೆಸಿ, ಟಿವಿಕೆ ಪಕ್ಷವು ಕಾರ್ಯಕ್ರಮ ಆಯೋಜನೆಯಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತ್ತು. ಎಡಿಜಿಪಿ ಎಸ್. ಡೇವಿಡ್ಸನ್ ದೇವಶಿರ್ವತಂ ಅವರು ಮಾತನಾಡಿ, "ಪೊಲೀಸರು ಜನಸಂದಣಿ ನಿರ್ವಹಣೆಗೆ ಉತ್ತಮವಾದ ಬೇರೆ ಸ್ಥಳವನ್ನು ಸೂಚಿಸಿದ್ದರೂ, ಟಿವಿಕೆ ಸಂಘಟಕರು ಅದಕ್ಕೆ ಒಪ್ಪಲಿಲ್ಲ. ಅಲ್ಲದೆ, ವಿಜಯ್ ಅವರು ಕಾರ್ಯಕ್ರಮಕ್ಕೆ ಐದು ಗಂಟೆಗಳಿಗೂ ಹೆಚ್ಚು ಕಾಲ ತಡವಾಗಿ ಬಂದಿದ್ದರಿಂದ ಜನಸಂದಣಿ ನಿಯಂತ್ರಣ ತಪ್ಪಿತು" ಎಂದು ಹೇಳಿದ್ದಾರೆ. . ಕಲ್ಲು ತೂರಾಟದಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸುವುದರ ಜೊತೆಗೆ, ಭದ್ರತಾ ಲೋಪಗಳ ಕುರಿತು ವಿಡಿಯೋ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ್ದರು.