ತಮಿಳುನಾಡು ISRO ಜಾಹೀರಾತಿನಲ್ಲಿ ಚೀನೀ ಧ್ವಜ: ಡಿಎಂಕೆ ವಿರುದ್ಧ ಮೋದಿ ವಾಗ್ದಾಳಿ
ತಮಿಳುನಾಡು ಸರ್ಕಾರದ ಸಚಿವೆ ಅವರು ನೀಡಿರುವ ISRO ಜಾಹೀರಾತಿನಲ್ಲಿ ಚೀನೀ ಧ್ವಜ ಇರುವ ಕುರಿತು ಡಿಎಂಕೆ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ;
ಇಸ್ರೋ ಜಾಹಿರಾತಿಗೆ ಚೀನಾದ ಧ್ವಜವನ್ನು ಹೊಂದಿರುವ ರಾಕೆಟ್ ಅನ್ನು ಬಳಸಿರುವ ಬಗ್ಗೆ ತಮಿಳುನಾಡು ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಬುಧವಾರ (ಫೆಬ್ರವರಿ 28) ಕಿಡಿ ಕಾರಿದ್ದಾರೆ.
ಜಾಹೀರಾತಿನಲ್ಲಿ ಪ್ರಧಾನಿ ಮೋದಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ಇತರರ ಚಿತ್ರಗಳಿದ್ದು, ಜಾಹಿರಾತಿಗಾಗಿ ಬಳಸಿದ ರಾಕೆಟ್‌ನಲ್ಲಿ ಚೀನಾ ಧ್ವಜವಿದೆ. ಈ ಜಾಹಿರಾತನ್ನು ಡಿಎಂಕೆ ಸಚಿವೆ ತಅನಿತಾ ರಾಧಾಕೃಷ್ಣನ್ ಅವರು ಪ್ರಕಟಿಸಿದ್ದರು. ಜಾಹೀರಾತು ಬುಧವಾರ ತಮಿಳು ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡಿತ್ತು.
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂ ಪಟ್ಟಣದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹೊಸ ರಾಕೆಟ್ ಉಡಾವಣಾ ತಾಣದ ಕುರಿತು ಜಾಹೀರಾತು ಇದೆ.
ಕುಲಶೇಖರಪಟ್ಟಿಣಂನಲ್ಲಿ ಸುಮಾರು 986 ಕೋಟಿ ರೂಪಾಯಿ ಮೌಲ್ಯದ ಇಸ್ರೋದ ಹೊಸ ಉಡಾವಣಾ ಸಂಕೀರ್ಣಕ್ಕೆ ಪ್ರಧಾನಿ ಮೋದಿ ಬುಧವಾರ ಶಂಕುಸ್ಥಾಪನೆ ಮಾಡಿದ್ದು, ಇಲ್ಲಿ ವರ್ಷಕ್ಕೆ 24 ಉಡಾವಣೆಗಳಿಗೆ ಅವಕಾಶ ಕಲ್ಪಿಸುವ ಅವಕಾಶ ಇದೆ.
ಇದಲ್ಲದೆ, ಪ್ರಧಾನಿ ಮೋದಿ ತೂತುಕುಡಿಯಲ್ಲಿ ಸುಮಾರು 17,300 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು.
ಡಿಎಂಕೆ ಕ್ಷಮೆಯಾಚಿಸಬೇಕು: ಪ್ರಧಾನಿ ಆಗ್ರಹ
ತಿರುನೆಲ್ವೇಲಿಯಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ವಿಜ್ಞಾನ ಮತ್ತು ರಾಷ್ಟ್ರದ ಬಾಹ್ಯಾಕಾಶ ಕ್ಷೇತ್ರವನ್ನು ಅವಮಾನಿಸಿದ್ದಕ್ಕಾಗಿ ಡಿಎಂಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇಂದು ಡಿಎಂಕೆಯ ಜಾಹೀರಾತು ಹಾಸ್ಯಮಯವಾಗಿದೆ. ಅವರು ಭಾರತೀಯ ವಿಜ್ಞಾನ ಮತ್ತು ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಅವಮಾನಿಸಿದ್ದಾರೆ, ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಮೋದಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಮ್ಮ ಭಾಷಣದ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
ಡಿಎಂಕೆ ಯಾವುದೇ ಕೆಲಸ ಮಾಡದ ಪಕ್ಷ, ಆದರೆ ಸುಳ್ಳು ಕ್ರೆಡಿಟ್ ಪಡೆಯಲು ಮುಂದಾಗಿದೆ. ಇವರು ನಮ್ಮ ಯೋಜನೆಗಳ ಮೇಲೆ ತಮ್ಮ ಸ್ಟಿಕ್ಕರ್‌ಗಳನ್ನು ಹಾಕುತ್ತಾರೆ ಎಂದು ಯಾರಿಗೆ ತಿಳಿದಿಲ್ಲ? ಈಗ ಅವರು ಮಿತಿಯನ್ನು ದಾಟಿದ್ದಾರೆ, ಅವರು ತಮಿಳುನಾಡಿನ ಇಸ್ರೋ ಉಡಾವಣಾ ಪ್ಯಾಡ್‌ಗೆ ಕ್ರೆಡಿಟ್ ತೆಗೆದುಕೊಳ್ಳಲು ಚೀನಾದ ಸ್ಟಿಕ್ಕರ್‌ಗಳನ್ನು ಅಂಟಿಸಿದ್ದಾರೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.
“ಭಾರತದ ಬಾಹ್ಯಾಕಾಶದ ಪ್ರಗತಿಯನ್ನು ನೋಡಲು ಅವರು ಸಿದ್ಧರಿಲ್ಲ. ನೀವು ಪಾವತಿಸುವ ತೆರಿಗೆಯೊಂದಿಗೆ ಅವರು ಜಾಹೀರಾತುಗಳನ್ನು ನೀಡುತ್ತಾರೆ. ಅದರಲ್ಲಿ ಭಾರತದ ಬಾಹ್ಯಾಕಾಶದ ಚಿತ್ರವನ್ನು ಸೇರಿಸುವುದಿಲ್ಲ. ಅವರು ನಮ್ಮ ವಿಜ್ಞಾನಿಗಳನ್ನು, ನಮ್ಮ ಬಾಹ್ಯಾಕಾಶ ಕ್ಷೇತ್ರವನ್ನು, ತೆರಿಗೆ ಪಾವತಿಸುವ ಜನರನ್ನು ಅವಮಾನಿಸಿದ್ದಾರೆ. ಡಿಎಂಕೆಯನ್ನು ಶಿಕ್ಷಿಸುವ ಸಮಯ ಬಂದಿದೆ" ಎಂದು ಅವರು ಹೇಳಿದರು.
ಡಿಎಂಕೆ ವಿರುದ್ಧ ಅಣ್ಣಾಮಲೈ ವಾಗ್ದಾಳಿ
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಕೂಡ ಚೀನಾ ಧ್ವಜವಿರುವ ಜಾಹೀರಾತಿಗೆ ಸಂಬಂಧಿಸಿದಂತೆ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಡಿಎಂಕೆ ಸಚಿವೆ ತಿರು ಅನಿತಾ ರಾಧಾಕೃಷ್ಣನ್ ಅವರು ಇಂದು ಪ್ರಮುಖ ತಮಿಳು ದಿನಪತ್ರಿಕೆಗಳಿಗೆ ನೀಡಿದ ಈ ಜಾಹೀರಾತು ಚೀನಾಕ್ಕೆ ಡಿಎಂಕೆಯ ಬದ್ಧತೆ ಮತ್ತು ನಮ್ಮ ದೇಶದ ಸಾರ್ವಭೌಮತ್ವದ ಸಂಪೂರ್ಣ ನಿರ್ಲಕ್ಷ್ಯದ ಉದಾಹರಣೆ" ಎಂದು ಅಣ್ಣಾಮಲೈ ಜಾಹೀರಾತಿನ ಫೋಟೋ ಹಂಚಿಕೊಂಡು ಬರೆದಿದ್ದಾರೆ.
“DMK, ಭ್ರಷ್ಟಾಚಾರದ ಮೇಲೆ ಹಾರಾಡುತ್ತಿರುವ ಪಕ್ಷ, ಕುಲಶೇಖರಪಟ್ಟಣಂನಲ್ಲಿ ಇಸ್ರೋದ ಎರಡನೇ ಉಡಾವಣಾ ಪ್ಯಾಡ್‌ನ ಘೋಷಣೆ ಬಿಡುಗಡೆಯಾದಾಗಿನಿಂದ ಸ್ಟಿಕ್ಕರ್‌ಗಳನ್ನು ಅಂಟಿಸಲು ಹತಾಶವಾಗಿದೆ. ಹತಾಶೆಯ ಪ್ರಮಾಣವು ಅವರ ಹಿಂದಿನ ದುಷ್ಕೃತ್ಯಗಳನ್ನು ಸಮಾಧಿ ಮಾಡುವ ಅವರ ಪ್ರಯತ್ನವನ್ನು ಮಾತ್ರ ಸಾಬೀತುಪಡಿಸುತ್ತದೆ, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ತಮಿಳುನಾಡಿನಲ್ಲಿರದೆ, ಆಂಧ್ರಪ್ರದೇಶದಲ್ಲಿ ಯಾಕಿದೆ ಎಂಬುದನ್ನು ನಾವು ಅವರಿಗೆ ನೆನಪಿಸಬೇಕು. ಇಸ್ರೋದ 1 ನೇ ಉಡಾವಣಾ ಪ್ಯಾಡ್ ಅನ್ನು ಪರಿಕಲ್ಪನೆ ಮಾಡಿದಾಗ, ಇಸ್ರೋದ ಮೊದಲ ಆಯ್ಕೆ ತಮಿಳು ನಾಡು ಆಗಿತ್ತು. ತೀವ್ರ ಭುಜದ ನೋವಿನಿಂದ ಸಭೆಗೆ ಹಾಜರಾಗಲು ಸಾಧ್ಯವಾಗದ ಆಗಿನ ತಮಿಳುನಾಡು ಸಿಎಂ ಅಣ್ಣಾದೊರೈ ಅವರು ತಮ್ಮ ಸಚಿವರಲ್ಲಿ ಒಬ್ಬರಾದ ಮತ್ತಿಯಳಗನ್ ಅವರನ್ನು ಸಭೆಗೆ ನಿಯೋಜಿಸಿದರು, ಸಭೆಗಾಗಿ ಇಸ್ರೋ ಅಧಿಕಾರಿಗಳು ಬಹಳ ಸಮಯದಿಂದ ಕಾಯುತ್ತಿದ್ದರು, ಮಥಿಯಾಳಗನ್ ಅವರನ್ನು ಅಂತಿಮವಾಗಿ ಕುಡಿದ ಸ್ಥಿತಿಯಲ್ಲಿ ಸಭೆಗೆ ಕರೆತರಲಾಯಿತು. ಇದು ನಮ್ಮ ದೇಶದ ಬಾಹ್ಯಾಕಾಶ ಕ್ಷೇತ್ರವು ಕಳೆದ 60 ವರ್ಷಗಳ ಹಿಂದೆ ಪಡೆದ ಉಪಚಾರ. ಡಿಎಂಕೆ ಹೆಚ್ಚು ಬದಲಾಗಿಲ್ಲ ಮಾತ್ರವಲ್ಲ ಇನ್ನೂ ಕೆಟ್ಟದಾಗಿದೆ ಎಂದು ಅಣ್ಣಾಮಲೈ ಬರೆದಿದ್ದಾರೆ.
ಜಾಹೀರಾತನ್ನು ಸಮರ್ಥಿಸಿಕೊಂಡ ಡಿಎಂಕೆ ಸಂಸದೆ ಕನಿಮೊಳಿ
ಡಿಎಂಕೆ ಸಂಸದೆ ಕನಿಮೊಳಿ ಅವರು ಜಾಹೀರಾತಿನ ಬಗ್ಗೆ ಪ್ರಶ್ನಿಸಿದಾಗ, ಕಲಾಕೃತಿ ಮಾಡಿದ ವ್ಯಕ್ತಿಗೆ ಈ ಚಿತ್ರವನ್ನು ಎಲ್ಲಿಂದ ಸಿಕ್ಕಿತು ಎಂದು ನನಗೆ ತಿಳಿದಿಲ್ಲ. ಭಾರತವು ಚೀನಾವನ್ನು ಶತ್ರು ರಾಷ್ಟ್ರ ಎಂದು ಘೋಷಿಸಿದೆ ಎಂದು ನಾನು ಭಾವಿಸುವುದಿಲ್ಲ. ಪ್ರಧಾನಿಯವರು ಚೀನಾದ ಪ್ರಧಾನಿಗೆ ಆಹ್ವಾನ ನೀಡಿರುವುದನ್ನು ನಾನು ನೋಡಿದ್ದೇನೆ ಮತ್ತು ಅವರು ಮಹಾಬಲಿಪುರಂಗೆ ಹೋಗಿದ್ದಾರೆ. ನೀವು ಸತ್ಯವನ್ನು ಒಪ್ಪಿಕೊಳ್ಳಲು ಬಯಸದ ಕಾರಣ, ಸಮಸ್ಯೆಯನ್ನು ಬೇರೆಡೆಗೆ ತಿರುಗಿಸಲು ನೀವು ಕಾರಣಗಳನ್ನು ಹುಡುಕುತ್ತಿದ್ದೀರಿ ಎಂದು ಅವರು ಹೇಳಿದ್ದಾರೆ.