ತುರ್ತು ಪರಿಸ್ಥಿತಿ ಹೇರಿದವರು ಸಂವಿಧಾನವನ್ನು ಪ್ರೀತಿಸಲಾರರು: ಪ್ರಧಾನಿ

ತುರ್ತುಪರಿಸ್ಥಿತಿಯ 49ನೇ ವರ್ಷಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಅವರು, ತುರ್ತುಪರಿಸ್ಥಿತಿಯನ್ನು ಹೇರಿದವರಿಗೆ ಸಂವಿಧಾನದ ಮೇಲಿನ ಪ್ರೀತಿಯನ್ನು ಹೇಳಿಕೊಳ್ಳುವ ಹಕ್ಕು ಇಲ್ಲ ಎಂದು ಹೇಳಿದರು.

Update: 2024-06-25 09:47 GMT

ಕಾಂಗ್ರೆಸ್ ಮೂಲಭೂತ ಸ್ವಾತಂತ್ರ್ಯಗಳನ್ನು ಹೇಗೆ ಬುಡಮೇಲು ಮಾಡಿತು ಮತ್ತು ಪ್ರತಿಯೊಬ್ಬ ಭಾರತೀಯರು ಗೌರವಿಸುವ ಸಂವಿಧಾನವನ್ನು ಹೇಗೆ ತುಳಿಯಿತು ಎಂಬುದನ್ನು ತುರ್ತು ಪರಿಸ್ಥಿತಿಯ ಕರಾಳ ದಿನಗಳು ನೆನಪಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಜೂನ್ 25) ಹೇಳಿದರು.

ತುರ್ತುಪರಿಸ್ಥಿತಿಯ 49ನೇ ವರ್ಷಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದ ಅವರು, ತುರ್ತುಪರಿಸ್ಥಿತಿಯನ್ನು ಹೇರಿದವರಿಗೆ ಸಂವಿಧಾನದ ಮೇಲಿನ ಪ್ರೀತಿಯನ್ನು ಹೇಳಿಕೊಳ್ಳುವ ಹಕ್ಕು ಇಲ್ಲ ಎಂದು ಹೇಳಿದರು.

ʻಈ ಜನರು ಅಸಂಖ್ಯಾತ ಸಂದರ್ಭಗಳಲ್ಲಿ 356 ನೇ ವಿಧಿಯನ್ನು ಹೇರಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವನ್ನು ನಾಶಮಾಡುವ ಮಸೂದೆಯನ್ನು ತಂದಿದ್ದಾರೆ. ಒಕ್ಕೂಟ ತತ್ವವನ್ನು ನಾಶಪಡಿಸಿದ್ದಾರೆ ಮತ್ತು ಸಂವಿಧಾನದ ಪ್ರತಿಯೊಂದು ಅಂಶವನ್ನು ಉಲ್ಲಂಘಿಸಿದ್ದಾರೆ,ʼ ಎಂದು ಅವರು ಹೇಳಿದರು.

ʻತುರ್ತು ಪರಿಸ್ಥಿತಿಯನ್ನು ಹೇರಿದ ಮನಸ್ಥಿತಿ ಆ ಪಕ್ಷದಲ್ಲಿ ಇನ್ನೂ ಜೀವಂತವಾಗಿದೆ. ಅವರು ಸಂವಿಧಾನದ ಬಗೆಗಿನ ತಿರಸ್ಕಾರವನ್ನು ಸಾಂಕೇತಿಕವಾಗಿ ಮರೆಮಾಡುತ್ತಾರೆ. ಆದರೆ, ಭಾರತದ ಜನರು ಅವರ ವರ್ತನೆಗಳನ್ನು ನೋಡಿದ್ದಾರೆ ಮತ್ತು ಅದಕ್ಕಾಗಿಯೇ ಮತ್ತೆ ಮತ್ತೆ ತಿರಸ್ಕರಿಸಿದ್ದಾರೆ,ʼ ಎಂದು ಹೇಳಿದರು.

ʻ1975 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಅಂಟಿಕೊಳ್ಳಲು ಪ್ರಜಾಪ್ರಭುತ್ವದ ಎಲ್ಲ ತತ್ವಗಳನ್ನು ಕಡೆಗಣಿಸಿ, ದೇಶವನ್ನು ಸೆರೆಮನೆ ಮಾಡಿತು. ಪಕ್ಷವನ್ನು ಒಪ್ಪದ ಎಲ್ಲರಿಗೂ ಚಿತ್ರಹಿಂಸೆ ಮತ್ತು ಕಿರುಕುಳ ನೀಡಲಾಯಿತು,ʼ ಎಂದು ಹೇಳಿದರು.

ʻಸಮಾಜದ ದುರ್ಬಲ ವರ್ಗಗಳನ್ನು ಗುರಿಯಾಗಿರಿಸಿಕೊಂಡು, ಪ್ರತಿಗಾಮಿ ಕಾರ್ಯನೀತಿಗಳನ್ನುರೂಪಿಸಲಾಯಿತು,ʼ ಎಂದು ಪ್ರಧಾನಿ ಹೇಳಿದರು.

ಜೂನ್ 25, 1975 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು, ನಾಗರಿಕ ಸ್ವಾತಂತ್ರ್ಯ ಗಳನ್ನು ಅಮಾನತುಗೊಳಿಸಿದರು, ವಿರೋಧ ಪಕ್ಷದ ನಾಯಕರು ಮತ್ತು ಭಿನ್ನಮತೀಯರನ್ನು ಜೈಲಿಗೆ ಹಾಕಿದರು ಮತ್ತು ಪತ್ರಿಕಾ ಸೆನ್ಸಾರ್ಶಿಪ್ ಜಾರಿಗೊಳಿಸಿದರು.

ಮಂಗಳವಾರದ ವಾರ್ಷಿಕೋತ್ಸವವು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲ ಮಹಾಪುರುಷರು ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸುವ ದಿನವಾಗಿದೆ ಎಂದು ಮೋದಿ ಹೇಳಿದರು.

18ನೇ ಲೋಕಸಭೆಯ ಮೊದಲ ದಿನವಾದ ಸೋಮವಾರ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ತುರ್ತು ಪರಿಸ್ಥಿತಿ ಹೇರಿಕೆ ಕುರಿತು ವಾಗ್ಯುದ್ಧ ನಡೆಯಿತು.

Tags:    

Similar News