Rajya Sabha: ಸಂವಿಧಾನದ ಪ್ರತಿ ಸುಟ್ಟವರು ನಮಗೆ ಪಾಠ ಕಲಿಸಲು ಪ್ರಯತ್ನಿಸುತ್ತಿದ್ದಾರೆ: ಖರ್ಗೆ

Rajya Sabha: ರಾಜ್ಯಸಭೆಯಲ್ಲಿ 'ಸಂವಿಧಾನದ 75 ವರ್ಷಗಳ ಪಯಣ' ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಹಾಗೂ ಆರ್​ಎಸ್​​ಎಸ್​ ವಿರುದ್ಧ ವಾಗ್ದಾಳಿ ನಡೆಸಿದರು.;

Update: 2024-12-16 10:53 GMT
ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ

ರಾಜ್ಯಸಭೆಯ (Rajya Sabha) ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ (ಡಿಸೆಂಬರ್ 16ರಂದು) ಸಂವಿಧಾನದ 75ನೇ ವರ್ಷಾಚರಣೆ ಕುರಿತು ಮಾತನಾಡುವ ವೇಳೆ ಬಿಜೆಪಿ-ಆರ್​ಎಸ್​ಎಸ್​ ವಿರುದ್ಧ ವಾಗ್ದಾಳಿ ನಡೆಸಿದರು. ಸಂವಿಧಾನದ ಪ್ರತಿಗಳು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಿದವರು ಈಗ ಅದರ ಬಗ್ಗೆ ನಮಗೆ ಕಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.


ರಾಷ್ಟ್ರಧ್ವಜವನ್ನು ದ್ವೇಷಿಸಿದವರು, ನಮ್ಮ ಅಶೋಕ ಚಕ್ರವನ್ನುಅವಮಾನಿಸಿದವರು , ಸಂವಿಧಾನವನ್ನು ವಿರೋಧಿಸುವವರು ನಮಗೆ ಅದರ ಬಗ್ಗೆ ಕಲಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಂವಿಧಾನವನ್ನು ರಚಿಸಿದಾಗ ಇದೇ ಜನರು ಸಂವಿಧಾನದ ಪ್ರತಿಗಳನ್ನು ಸುಟ್ಟಿದ್ದರು. ಸಂವಿಧಾನವನ್ನು ಅಂಗೀಕರಿಸಿದ ದಿನ ಅವರು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್, ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ ಅವರ ಪ್ರತಿಕೃತಿಗಳನ್ನು ದಹಿಸಿದ್ದರು ಎಂದು ಖರ್ಗೆ ಹೇಳಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧವೂ ವಾಗ್ದಾಳಿ ನಡೆಸಿದ ಖರ್ಗೆ , "ನನಗೂ ಓದಲು ಗೊತ್ತು ಎಂಬುದನ್ನು ಅವರಿಗೆ ಹೇಳಬೇಕಾಗಿದೆ. ನಾನು ಮುನ್ಸಿಪಾಲಿಟಿ ಶಾಲೆಯಲ್ಲಿ ಓದಿದ್ದೇನೆ. ಅವರು (ನಿರ್ಮಲಾ ಸೀತಾರಾಮನ್) ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಅವರ ಇಂಗ್ಲಿಷ್, ಹಿಂದಿ ಚೆನ್ನಾಗಿದೆ. ಆದರೆ ಅವರ ಉದ್ದೇಶ ಚೆನ್ನಾಗಿಲ್ಲ" ಎಂದು ಅವರು ಹೇಳಿದರು.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿಷಯವನ್ನು ಪ್ರಸ್ತಾಪಿಸಿದ ಖರ್ಗೆ, "ನಮ್ಮ ಧೈರ್ಯಶಾಲಿ ನಾಯಕಿ ಇಂದಿರಾ ಗಾಂಧಿ ಪಾಕಿಸ್ತಾನವನ್ನೇ ಎರಡು ಭಾಗಗಳಾಗಿ ವಿಭಜಿಸಿ ಬಾಂಗ್ಲಾದೇಶವನ್ನು ಮುಕ್ತಗೊಳಿಸಿದರು. ನಮ್ಮ ದೇಶದ ಹೆಮ್ಮೆ ಪ್ರಪಂಚದಾದ್ಯಂತ ಹರಡಿತು. ಬಾಂಗ್ಲಾದೇಶದಲ್ಲಿ ಈಗ ನಡೆಯುತ್ತಿರುವ ಅವ್ಯವಸ್ಥೆ ಬಗ್ಗೆ ಬಿಜೆಪಿ ನಾಯಕರು ಕಣ್ಣು ತೆರೆದು ಅಲ್ಲಿನ ಅಲ್ಪಸಂಖ್ಯಾತರನ್ನು ಉಳಿಸಲು ಪ್ರಯತ್ನಿಸಬೇಕು" ಎಂದು ಅವರು ಹೇಳಿದರು.

ಮುನ್ನ ರಾಜ್ಯಸಭೆಯಲ್ಲಿ "ಭಾರತೀಯ ಸಂವಿಧಾನದ 75 ವರ್ಷಗಳು" ಕುರಿತ ಚರ್ಚೆ ಪ್ರಾರಂಭಿಸಿದ ಸೀತಾರಾಮನ್ ಭಾರತದ ಸಂವಿಧಾನವು ತನ್ನ ಅಸ್ತಿತ್ವಗೊಂಡ ಬಳಿಕದ 75 ವರ್ಷಗಳಲ್ಲಿ ಅನೇಕ ಪರೀಕ್ಷೆಗಳನ್ನು ಎದುರಿಸಿದೆ ಎಂದು ಹೇಳಿದರು.

ಲೋಕಸಭೆಯಲ್ಲಿ ಕಾವೇರಿದ್ದ ಚರ್ಚೆ

ಲೋಕಸಭೆಯಲ್ಲಿ ಚರ್ಚೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ (ಡಿಸೆಂಬರ್ 13) ಪ್ರಾರಂಭಿಸಿದ್ದರು. ನಂತರ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ವಿರೋಧ ಪಕ್ಷದ ಸಂಸದರ ಭಾಷಣಗಳನ್ನು ಮಾಡಿದ್ದರು.

ಶನಿವಾರ (ಡಿಸೆಂಬರ್ 14) ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸುದೀರ್ಘವಾಗಿ ಮಾತನಾಡಿದ್ದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದರೆ, ಕಾಂಗ್ರೆಸ್ ಪಕ್ಷವು ಪದೇ ಪದೇ ಸಂವಿಧಾನವನ್ನು ವಿರೂಪಗೊಳಿಸುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು.

ಲೋಕಸಭೆಯಲ್ಲಿ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ವ್ಯಕ್ತಪಡಿಸಿದ 11 ನಿರ್ಣಯಗಳನ್ನು "ಟೊಳ್ಳು" ಎಂದು ಕಾಂಗ್ರೆಸ್ ಶನಿವಾರ ಹೇಳಿತ್ತು. "ವಾಟ್ಸಾಪ್ ವಿಶ್ವವಿದ್ಯಾಲಯವನ್ನು ಅವಮಾನಿಸುವ ಶ್ರೇಷ್ಠ ವ್ಯಕ್ತಿ" ಎಂದು ಲೇವಡಿ ಮಾಡಿತ್ತು.

ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡುವಾಗ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದಲ್ಲಿ ಏಕೆ ಇರಲಿಲ್ಲ ಎಂದು ವಿರೋಧ ಪಕ್ಷ ಪ್ರಶ್ನಿಸಿತ್ತು.

ಧನ್ಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ  

ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಲಿದೆ

ಮೂಲಗಳ ಪ್ರಕಾರ 10-11 ಸಂಸದರು ಚರ್ಚೆಯಲ್ಲಿ ಭಾಗವಹಿಸಲಿದ್ದು, ತಲಾ 3-4 ನಿಮಿಷಗಳ ಕಾಲ ಮಾತನಾಡಲಿದ್ದಾರೆ. ಸಮಾನತೆ, ನ್ಯಾಯ, ಸಾರ್ವಭೌಮತ್ವ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಮಾಜವಾದದಂತಹ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.

ರಾಜ್ಯಸಭೆಯಲ್ಲಿ ಡಿಸೆಂಬರ್ 16 ಮತ್ತು 17 ರಂದು ಚರ್ಚೆ ನಡೆಯಲಿದ್ದು, ಪ್ರಧಾನಿ ಮೋದಿ ಮಂಗಳವಾರ (ಡಿಸೆಂಬರ್ 17) ಉತ್ತರಿಸುವ ನಿರೀಕ್ಷೆಯಿದೆ.

Tags:    

Similar News