ವಯನಾಡ್ (ಕೇರಳ): ರಾಹುಲ್ ಗಾಂಧಿ ಸತತ ಎರಡನೇ ಬಾರಿಗೆ ಗೆದ್ದಿರುವ ವಯನಾಡ್ ಲೋಕಸಭೆ ಕ್ಷೇತ್ರವು ಮೂರು ವಿಧಾನಸಭೆ ಕ್ಷೇತ್ರ ಗಳನ್ನು ಒಳಗೊಂಡಿದೆ. ಬುಡಕಟ್ಟು ಜಿಲ್ಲೆಯಾದ ವಯನಾಡ್, ಮುಸ್ಲಿಂ ಪ್ರಾಬಲ್ಯದ ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಯಲ್ಲಿ ಕ್ರಿಶ್ಚಿಯನ್ನರು ಗಮನಾರ್ಹ ಮತಗಳನ್ನು ಹೊಂದಿದ್ದಾರೆ.
ರಾಹುಲ್ ಪ್ರತಿಸ್ಪರ್ಧಿ ಸಿಪಿಐನ ಅನ್ನಿ ರಾಜಾ ಅವರನ್ನು 3.64 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ರಾಯ್ ಬರೇಲಿ ಗಾಂಧಿ ಕುಟುಂ ಬದ ನೆಲೆ ಆಗಿರುವುದರಿಂದ, ಅವರು ಈಗ ಯಾವ ಕ್ಷೇತ್ರವನ್ನು ಬಿಟ್ಟುಕೊಡುತ್ತಾರೆ ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ʻಈಸಂಬಂಧ ನಿರ್ಧಾರ ತೆಗೆದುಕೊಂಡಿಲ್ಲʼ ಎಂದು ಅವರು ಹೇಳಿದ್ದಾರೆ.
ಲೋಕಸಭೆಯಲ್ಲಿ ನೀವು ಯಾವ ಕ್ಷೇತ್ರವನ್ನು ಪ್ರತಿನಿಧಿಸುತ್ತೀರಿ ಎಂಬ ಪ್ರಶ್ನೆಗೆ, ʻನಾನು ಎರಡೂ ಸ್ಥಾನಗಳಿಂದ ಗೆದ್ದಿದ್ದೇನೆ. ರಾಯ್ ಬರೇಲಿ ಮತ್ತು ವಯನಾಡಿನ ಮತದಾರರಿಗೆ ಹೃತ್ಪೂರ್ವಕ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತೇನೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ,ʼ ಎಂದು ಮಂಗಳವಾರ ಹೇಳಿದರು.
ಏಪ್ರಿಲ್ 26 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾದ ವಯನಾಡ್‌ನಿಂದ ಇಂಡಿಯ ಒಕ್ಕೂಟದ ಪ್ರಧಾನ ಮಂತ್ರಿ ಅಭ್ಯರ್ಥಿ ಎನ್ನಲಾದ ನಾಯಕನ ಗೆಲುವಿನ ಬಗ್ಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಯಾವುದೇ ಸಂಶಯ ಇರಲಿಲ್ಲ.
ರಾಹುಲ್ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ ಮತ್ತು ಎಡಪಕ್ಷಗಳು, ರಾಹುಲ್ ಒಂದುವೇಳೆ ರಾಯ್ ಬರೇಲಿಯಿಂದ ಗೆದ್ದರೆ, ವಯನಾಡನ್ನು ಕೈಬಿಡುತ್ತಾರೆ ಎಂದು ಹೇಳಿವೆ. ಕುತೂಹಲಕr ಅಂಶವೆಂದರೆ, ಕೇರಳ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದ ಎರಡನೇ ಹಂತದ ಚುನಾವಣೆ ಪೂರ್ಣಗೊಳ್ಳುವವರೆಗೆ, ಅವರು ರಾಯ್ ಬರೇಲಿಯಿಂದ ಸ್ಪರ್ಧಿಸುವ ಆಲೋಚನೆಯನ್ನೇ ಮಾಡಿರಲಿಲ್ಲ. ಹಿರಿಯ ನಾಯಕಿ ಅನ್ನಿ ರಾಜಾ ಎಡಪಕ್ಷಗಳ ಅಭ್ಯರ್ಥಿಯಾಗಿದ್ದರು ಹಾಗೂ ಬಿಜೆಪಿಯ ರಾಜ್ಯ ಮುಖ್ಯಸ್ಥ ಕೆ.ಸುರೇಂದ್ರನ್ ಅವರಿಗೆ ರಾಹುಲ್ ಮತ್ತು ರಾಜಾ ಇಬ್ಬರನ್ನು ಎದುರಿಸುವ ಜವಾಬ್ದಾರಿ ವಹಿಸಲಾಗಿತ್ತು.
ಹಚ್ಚಹಸಿರಿನ ಬೆಟ್ಟಗಳು, ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಮತ್ತು ಬುಡಕಟ್ಟು ಜನ ಗಮನಾರ್ಹ ಸಂಖ್ಯೆಯಲ್ಲಿರುವ ವಯನಾಡ್ ಲೋಕಸಭೆ ಕ್ಷೇತ್ರ 2019 ರಲ್ಲಿ ರಾಹುಲ್ ಗಾಂಧಿ ಅವರ ಉಮೇದುವಾರಿಕೆಯೊಂದಿಗೆ ರಾಷ್ಟ್ರದ ಗಮನ ಸೆಳೆಯಿತು.
ಲೋಕಸಭೆ ಕ್ಷೇತ್ರ ಏಳು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ: ವಯನಾಡ್ ಜಿಲ್ಲೆಯ ಕಲ್ಪೆಟ್ಟಾ, ಸುಲ್ತಾನ್ ಬತ್ತೇರಿ ಮತ್ತು ಮಾನಂತವಾಡಿ, ಕೋಯಿಕ್ಕೋಡ್‌ನ ತಿರುವಂಬಾಡಿ ಮತ್ತು ಮಲಪ್ಪುರಂನ ನಿಲಂಬೂರ್, ವಂಡೂರ್ ಮತ್ತು ಎರನಾಡ್. ಪ್ರತಿಯೊಂದೂ ಪ್ರದೇಶದ ವೈವಿಧ್ಯಮಯ ಸಾಮಾಜಿಕ-ಆರ್ಥಿಕ ನೇಯ್ಗೆಯನ್ನು ಪ್ರತಿಬಿಂಬಿಸುತ್ತವೆ.
ವಯನಾಡಿನ ಆರ್ಥಿಕತೆಯ ಬೆನ್ನೆಲುಬಾದ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಏರಿಳಿತ, ಬೆಳೆ ವೈಫಲ್ಯ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಬುಡಕಟ್ಟು ಕಲ್ಯಾಣ, ಪರಿಸರ ಸಂರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲೂ ಸವಾಲು ಎದುರಿಸುತ್ತಿದೆ.
ಯುಡಿಎಫ್ ಪ್ರಚಾರ ರಾಹುಲ್ ಗಾಂಧಿಯವರ ಕೆಲಸದ ಮೇಲೆ ಕೇಂದ್ರೀಕರಿಸಿತ್ತು. 2019 ರ ಚುನಾವಣೆ ನಂತರ ವಯನಾಡಿನಲ್ಲಿಆದಿವಾಸಿಗಳು ಮತ್ತು ಬಡವರ ಜೀವನವನ್ನು ಸುಧಾರಿಸುವ ಗುರಿಯಿರುವ ಹಲವಾರು ಉಪಕ್ರಮಗಳನ್ನು ಆರಂಭಿಸಿದ್ದಾರೆ ಎಂದು ಕಾಂಗ್ರೆಸ್ ವಾದಿಸಿತು. ಬಿಜೆಪಿ ಮತ್ತು ಎಡಪಕ್ಷಗಳು ಅವರ ದೀರ್ಘಾವಧಿಯ ಅನುಪಸ್ಥಿತಿಯನ್ನು ಹಾಗೂ ಕ್ಷೇತ್ರದಲ್ಲಿ ಮಾನವ-ಪ್ರಾಣಿ ಸಂಘರ್ಷ ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದವು. ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರು ಕೇರಳದಿಂದ ಸ್ಪರ್ಧಿಸಿದ್ದಕ್ಕಾಗಿ ಟೀಕಿಸಿದ್ದರು.
ಚುನಾವಣೆಯಲ್ಲಿ ರಾಹುಲ್ ಅವರು ಪ್ರತಿಸ್ಪರ್ಧಿ ಸಿಪಿಐನ ಪಿ.ಪಿ. ಸುನೀರ್ ಅವರಿಗಿಂತ 4,31,770 ಅಧಿಕ ಮತಗಳಿಂದ ಗೆದ್ದರು.